ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಚಿತ್ರೀಕರಣ: ‘ಪ್ರಾಣಹಾನಿ ತಡೆ’ ಷರತ್ತು ಇಲ್ಲ

Last Updated 1 ಏಪ್ರಿಲ್ 2019, 10:07 IST
ಅಕ್ಷರ ಗಾತ್ರ

ಬೆಂಗಳೂರು: ಸಿನಿಮಾ ಚಿತ್ರೀಕರಣದ ವೇಳೆ ಪ್ರಾಣಹಾನಿ ಆಗದಂತೆ ತಡೆಯಲು ನಿರ್ದಿಷ್ಟ ಮಾರ್ಗಸೂಚಿಗಳು ಇಲ್ಲದಿರುವುದನ್ನು ‘ರಣಂ’ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ದುರ್ಘಟನೆಯು ಬೆಳಕಿಗೆ ತಂದಿದೆ.

ಚೇತನ್ ಅಹಿಂಸಾ ಮತ್ತು ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಸಿನಿಮಾ ಚಿತ್ರೀಕರಣದ ವೇಳೆ ಸ್ಫೋಟ ಸಂಭವಿಸಿ, ಚಿತ್ರೀಕರಣ ವೀಕ್ಷಿಸುತ್ತಿದ್ದ ತಾಯಿ ಮತ್ತು ಮಗಳು ಬಲಿಯಾಗಿದ್ದಾರೆ. ಇದು ಸಿನಿಮಾ ತಂಡಗಳು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳಿಗೆ ಸಂಬಂಧಿಸಿದ ಚರ್ಚೆಯನ್ನು ಮುನ್ನೆಲೆಗೆ ತಂದಿದೆ.

ರಾಜ್ಯದಲ್ಲಿ ಚಿತ್ರೀಕರಣ ನಡೆಸುವ ಮುನ್ನ ಸಿನಿಮಾ ತಂಡಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಅನುಮತಿ ಪಡೆಯಬೇಕು. ಇದರಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕೆಲವು ಷರತ್ತುಗಳೂ ಇರುತ್ತವೆ. ಆದರೆ ರಣಂ ಚಿತ್ರತಂಡ ಪಡೆದ ಅನುಮತಿ ಪತ್ರದಲ್ಲಿ ‘ಪ್ರಾಣಹಾನಿ ತಡೆ’ಗೆ ಸಂಬಂಧಿಸಿದಂತೆ ನಿರ್ದಿಷ್ಟ ಷರತ್ತುಗಳು ಇರಲಿಲ್ಲ.

ಚಿತ್ರತಂಡವು ಚಿತ್ರೀಕರಣಕ್ಕೆ ಅನುಮತಿ ಕೋರಿ 2018ರ ಜುಲೈ 5ರಂದು ಇಲಾಖೆಗೆ ಅರ್ಜಿ ಸಲ್ಲಿಸಿತ್ತು. ಇಲಾಖೆಯು ಜುಲೈ 10ರಂದು ಅನುಮತಿ ನೀಡಿತು. ಈ ಅನುಮತಿಯು 2019ರ ಜುಲೈ ತಿಂಗಳವರೆಗೆ ಜಾರಿಯಲ್ಲಿ ಇರುತ್ತದೆ ಎಂದು ಅನುಮತಿ ಪತ್ರದಲ್ಲಿ ಇಲಾಖೆ ಸ್ಪಷ್ಟಪಡಿಸಿತ್ತು.

‘ಅನುಮತಿಯು ನಿರ್ಬಂಧಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವ ಅವಕಾಶ ಕಲ್ಪಿಸುವುದಿಲ್ಲ. ರಕ್ಷಿತ ಪ್ರದೇಶಗಳಲ್ಲಿ ಚಿತ್ರೀಕರಣ ನಡೆಸುವಂತಿಲ್ಲ. ಭದ್ರತೆಯ ಕಾರಣದಿಂದಾಗಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ ಸ್ಥಳ ತಲುಪುವುದು ಹೇಗೆ ಎಂಬುದನ್ನು ಇನ್ನೊಬ್ಬರಿಗೆ ಗೊತ್ತುಪಡಿಸುವ ರೀತಿಯಲ್ಲಿ ಚಿತ್ರೀಕರಣ ಮಾಡಬಾರದು’ ಎಂಬ ನಿರ್ದೇಶನಗಳು ಅನುಮತಿ ಪತ್ರದಲ್ಲಿ ಇದ್ದವು ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಚಿತ್ರೀಕರಣದ ಸ್ಥಳದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು. ಆ ಸ್ಥಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಚಿತ್ರೀಕರಣದ ಬಗ್ಗೆ ಪೊಲೀಸರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಚಿತ್ರೀಕರಣದ ವೇಳೆ ಸ್ವಾಭಾವಿಕವಾಗಿ ಸಂಭವಿಸಬಹುದಾದ ಕಷ್ಟನಷ್ಟಗಳಿಗೆ ಇಲಾಖೆ ಹೊಣೆಯಲ್ಲ ಎಂಬ ಷರತ್ತುಗಳು ಅನುಮತಿ ಪತ್ರದಲ್ಲಿದ್ದವು’ ಎಂದು ಅವರು ತಿಳಿಸಿದರು.

‘ಆದರೆ, 2016ರಲ್ಲಿ ಮಾಸ್ತಿಗುಡಿ ಸಿನಿಮಾ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ಮೃತಪಟ್ಟಿದ್ದು ಹಾಗೂ ಈಗಿನ ಪ್ರಕರಣವನ್ನು ಗಮನದಲ್ಲಿ ಇರಿಸಿಕೊಂಡು, ಪ್ರಾಣಹಾನಿ ಆಗದಂತೆ ತಡೆಯಲು ಸೂಕ್ತ ಷರತ್ತುಗಳನ್ನು ವಿಧಿಸಬೇಕಾದ ಅಗತ್ಯ ಇದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿ ತಿಳಿಸಿದರು.

‘ರಣಂ’ ಸಿನಿಮಾ ಚಿತ್ರೀಕರಣ ಮಾತ್ರವಲ್ಲದೆ, ರಾಜ್ಯದಲ್ಲಿ ನಡೆಯುವ ಎಲ್ಲ ರೀತಿಯ ಚಿತ್ರೀಕರಣಗಳಿಗೂ ಇದೇ ಮಾದರಿಯಲ್ಲಿ ಷರತ್ತುಗಳನ್ನು ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದರು.

‘ರಣಂ’ ದುರ್ಘಟನೆ ಬಗ್ಗೆ ಪ್ರತಿಕ್ರಿಯೆ ಪಡೆಯಲು ನಿರ್ಮಾಪಕ ಆರ್. ಶ್ರೀನಿವಾಸ್ ಸಂಪರ್ಕಕ್ಕೆ ಸಿಗಲಿಲ್ಲ.

ಸಾರ್ವಜನಿಕರು ದೂರ ಇರಬೇಕು...

ಸಾಹಸದ ದೃಶ್ಯ ಹಾಗೂ ಅಪಾಯಕಾರಿ ಸನ್ನಿವೇಶಗಳನ್ನು ಚಿತ್ರೀಕರಿಸುವ ವೇಳೆ, ‘ಸಾರ್ವಜನಿಕರು ದೂರ ಇರಬೇಕು ಎನ್ನುವ ಪ್ರಕಟಣೆ ನೀಡಬೇಕಾಗುತ್ತದೆ’ ಎನ್ನುತ್ತಾರೆ ಕನ್ನಡ ಸಿನಿಮಾ ನಿರ್ದೇಶಕ ಬಿ.ಎಂ. ಗಿರಿರಾಜ್.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಹಾಗೂ ನೀರು ಮತ್ತು ಬೆಂಕಿಯ ಬಳಕೆ ಇರುವ ಯಾವುದೇ ಕಾರ್ಯಕ್ರಮಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳನ್ನು ಸಿನಿಮಾ ಚಿತ್ರೀಕರಣದ ವೇಳೆಯಲ್ಲೂ ಕೈಗೊಳ್ಳಬೇಕಾಗುತ್ತದೆ. ಆ್ಯಂಬುಲೆನ್ಸ್‌ ವ್ಯವಸ್ಥೆಯನ್ನೂ ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.

ಸುರಕ್ಷತಾ ಕ್ರಮ ಬೇಕು: ನಟ ಚೇತನ್

‘ಚಿತ್ರೀಕರಣದ ಬಗ್ಗೆ ಕುತೂಹಲ ಇಟ್ಟುಕೊಂಡ ಸಾರ್ವಜನಿಕರ ರಕ್ಷಣೆಯ ದೃಷ್ಟಿಯಿಂದಲೂ ಇನ್ನು ಮುಂದೆ ಕೆಲವು ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ’ ಎಂದು ನಟ ಚೇತನ್ ಹೇಳಿದರು.

‘ಮೃತಪಟ್ಟ ತಾಯಿ ಮತ್ತು ಮಗಳು ಚಿತ್ರೀಕರಣ ತಂಡ ಕ್ಯಾರವಾನ್‌ ಇರಿಸಿದ್ದ ಸ್ಥಳದಲ್ಲಿ ನಿಂತಿದ್ದರು. ಸಾಮಾನ್ಯವಾಗಿ ಕ್ಯಾರವಾನ್ಅನ್ನು ದೂರದಲ್ಲಿಯೇ ನಿಲ್ಲಿಸಿರಲಾಗುತ್ತದೆ. ಕಲಾವಿದರ ಪಾಲಿಗೆ ಅದು ವಿಶ್ರಾಂತಿ ಸ್ಥಳ ಇದ್ದಂತೆ. ಆದರೆ, ಸಿಲಿಂಡರ್‌ ಅಷ್ಟು ದೂರ ಸಿಡಿದು, ಇಬ್ಬರ ಬಲಿಪಡೆದಿದೆ’ ಎಂದರು.

ಸದಸ್ಯರನ್ನು ಕಳೆದುಕೊಂಡ ಕುಟುಂಬದ ಜೊತೆ ಸಂಪರ್ಕದಲ್ಲಿ ಇರುವುದಾಗಿ ಅವರು ತಿಳಿಸಿದರು.‌

***

ಇದೊಂದು ದುರ್ಘಟನೆ. ಸೋಮವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳ ಸಭೆ ಕರೆದು, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವೆ

–ಎಸ್.ಎ. ಚಿನ್ನೇಗೌಡ, ಅಧ್ಯಕ್ಷ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT