ಬುಧವಾರ, ನವೆಂಬರ್ 20, 2019
20 °C
ಎಂಜಿನಿಯರಿಂಗ್‌ ಕಾಲೇಜು ಪ್ರವೇಶ

ನೆರೆ: 1,500 ವಿದ್ಯಾರ್ಥಿಗಳಿಗೆ ಎದುರಾದ ಸಂಕಷ್ಟ

Published:
Updated:

ಬೆಂಗಳೂರು: ರಾಜ್ಯದಲ್ಲಿ ಈ ಬಾರಿ ನೆರೆ ಹಾವಳಿ ಸಂಭವಿಸಿದ್ದರಿಂದ ಒಂದು ವಾರ ವಿಳಂಬವಾಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಅದುವೇ ಈಗ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸೂಚನೆಯಂತೆ ಆಗಸ್ಟ್‌ 15ರೊಳಗೆಯೇ ಪ್ರವೇಶಾತಿ ಪ್ರಕ್ರಿಯೆ ಕೊನೆಗೊಳ್ಳಬೇಕಿತ್ತು. ಆದರೆ ರಾಜ್ಯದಲ್ಲಿ ಪ್ರವಾಹ ಸಂಭವಿಸಿದ್ದರಿಂದ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರಪ್ಪ ಅವರ ಸೂಚನೆಯಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ಆಗಸ್ಟ್‌ 23ರವರೆಗೆ ಪ್ರವೇಶಾತಿಗೆ ಅವಕಾಶ ನೀಡಿತ್ತು.

ಸುಪ್ರೀಂ ಕೋರ್ಟ್‌ ಆದೇಶದಂತೆ, ಜುಲೈ 31ರೊಳಗೆ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಕೊನೆಗೊಳ್ಳಬೇಕು, ಖಾಲಿ ಇರುವ ಸೀಟುಗಳನ್ನು ಆಗಸ್ಟ್‌ 15ರೊಳಗೆ ಭರ್ತಿಗೊಳಿಸಬೇಕಾಗುತ್ತದೆ. ಈ ಎಲ್ಲ ಸೂಚನೆಗಳ ಹಿನ್ನೆಲೆಯಲ್ಲಿ ಆಗಸ್ಟ್‌ 15ರ ಬಳಿಕ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಪ್ರವೇಶ ಪಡೆದ 1,500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇದೀಗ ಆತಂಕ ಆರಂಭವಾಗಿದೆ.

ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲು ಕೋರಿ ತಾಂತ್ರಿಕ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ. ಎಐಸಿಟಿಇ ತಂಡಗಳು ತಮ್ಮ ಕಾಲೇಜುಗಳ ಸಮೀಕ್ಷೆಗೆ ಬರುವುದುದಕ್ಕೆ ಮೊದಲಾಗಿಯೇ ಈ ಪ್ರವೇಶಾತಿಗೆ ಅನುಮತಿ ನೀಡಲು ಕೋರಿ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಈಗಾಗಲೇ ತಾಂತ್ರಿಕ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿವೆ.

ತಾಂತ್ರಿಕ ಶಿಕ್ಷಣ ಇಲಾಖೆ ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರೂ ಉತ್ತರ ಬಂದಿಲ್ಲ. 

ರಾಜ್ಯದಲ್ಲಿ 252ಕ್ಕೂ ಅಧಿಕ ಎಂಜಿನಿಯರಿಂಗ್‌ ಕಾಲೇಜುಗಳಿದ್ದು, ಈ ಬಾರಿ 66 ಸಾವಿರ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. 27 ಸಾವಿರ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ.

ಪ್ರತಿಕ್ರಿಯಿಸಿ (+)