ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಹಶೀಲ್ದಾರ್‌ಗೆ ಹೈಕೋರ್ಟ್ ಚಾಟಿ

Last Updated 27 ಫೆಬ್ರುವರಿ 2019, 20:03 IST
ಅಕ್ಷರ ಗಾತ್ರ

ಬೆಂಗಳೂರು: ‘ರೀ ತಹಶೀಲ್ದಾರ್ ನೀವೊಬ್ಬ ಸರ್ಕಾರಿ ಅಧಿಕಾರಿ. ಜನರ ಸಮಸ್ಯೆ ಆಲಿಸಿ, ಪರಿಹರಿಸುವುದು ನಿಮ್ಮ ಕರ್ತವ್ಯ ಅಲ್ಲವೇ, ಯಾವತ್ತಾದರೂ ನಿಮ್ಮ ಕಚೇರಿಗೆ ಬಂದ ಸಾಮಾನ್ಯ ವ್ಯಕ್ತಿಯನ್ನು ಕುರ್ಚಿಯಲ್ಲಿ ಕೂರಿಸಿ ಅವರ ಸಮಸ್ಯೆ ಏನೆಂದು ಕೇಳಿದ್ದೀರಾ...?

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ತಹಶೀಲ್ದಾರ್‌ಗೆ ಹೈಕೋರ್ಟ್ ನ್ಯಾಯಮೂರ್ತಿ ಎಸ್.ಎನ್.ಸತ್ಯನಾರಾಯಣ ಅವರ ಪ್ರಶ್ನೆಯಿದು.

‘ಭೂ ಪರಿವರ್ತನೆ ಮತ್ತು ಪಹಣಿ ಪತ್ರದಲ್ಲಿ ಜಮೀನಿನ ಸರ್ವೇ ನಂಬರ್ ನಮೂದಿಸಬೇಕು ಎಂದು ಕೋರಿ 2017ರಲ್ಲಿ ನಾನು ತಹಶೀಲ್ದಾರ್ ಅವರಿಗೆ ಅರ್ಜಿ ಸಲ್ಲಿಸಿದ್ದೇನೆ. ಆದರೆ, ಅವರು ಈವರೆಗೂ ನನ್ನ ಅರ್ಜಿ ಪರಿಗಣಿಸಿ ಯಾವುದೇ ಆದೇಶ ಹೊರಡಿಸಿಲ್ಲ’ ಎಂದು ಆರೋಪಿಸಿ ವೆಂಕಟೇಶ್ ಎಂಬುವರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸತ್ಯನಾರಾಯಣ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ವಿಚಾರಣೆಗೆ ತಹಶೀಲ್ದಾರ್‌ ಖುದ್ದು ಹಾಜರಾಗಿದ್ದರು. ವಿಳಂಬಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ತಹಶೀಲ್ದಾರ್ ಸಮರ್ಪಕ ಉತ್ತರ ನೀಡದೇ ಹೋದ ಕಾರಣ ನ್ಯಾಯಮೂರ್ತಿಗಳು ಗರಂ ಆದರು.

’ಶಾಸಕರು, ಪಂಚಾಯ್ತಿ ಮುಖಂಡರು, ಹಣ ನೀಡುವವರು ನಿಮ್ಮ ಕಚೇರಿಗೆ ಬಂದರೆ ಕುರ್ಚಿ ಹಾಕಿ ಕೂರಿಸಿ ಅವರ ಸಮಸ್ಯೆ ಕೇಳುತ್ತೀರಿ. ಆದರೆ, ಜನ ಸಾಮಾನ್ಯರಿಗೆ ಪರಿಹಾರ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕಿಡಿ ಕಾರಿದರು.

‘ನೀವು ಎಷ್ಟು ಜನರನ್ನು ಅಯ್ಯೋ ಎನಿಸಿರಬೇಡ. ನಿಮ್ಮಂಥವರನ್ನು ಕೋರ್ಟ್‌ನಿಂದ ಸುಮ್ಮನೆ ಹೊರ ಹೋಗಲು ಬಿಡುವುದಿಲ್ಲ. ಕರ್ತವ್ಯ ನಿರ್ವಹಣೆಯಲ್ಲಿ ನೀವು ವಿಫಲರಾಗಿದ್ದೀರಿ. ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಿದೆ’ ಎಂದು ತೀಕ್ಷ್ಣವಾಗಿ ಎಚ್ಚರಿಸಿದರು.

‘ನಿಮ್ಮನ್ನು ಸೇವೆಯಿಂದ ಅಮಾನತು ಮಾಡಲು ಸರ್ಕಾರಕ್ಕೆ ಆದೇಶ ಹೊರಡಿಸುತ್ತೇನೆ. ಆದಾಗ್ಯೂ, ಆದೇಶ ಹೊರಡಿಸುವ ಮುನ್ನ, ನಿಮ್ಮ ವಿವರಣೆ ಬೇಕು. ಹಾಗಾಗಿ ಸೇವೆಯಿಂದ ಏಕೆ ಅಮಾನತುಪಡಿಸಬಾರದು ಎಂಬ ಬಗ್ಗೆ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿ’ ಎಂದು ವಿಚಾರಣೆಯನ್ನು ಗುರುವಾರಕ್ಕೆ (ಫೆ.28) ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT