ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ 7 ಅಂತಸ್ತಿನ ಕಟ್ಟಡಕ್ಕೆ ಅಸ್ತು

ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್‌ ಸಮ್ಮತಿ, ಖಾಲಿ ಮಾಡಬೇಕಿದೆ ರಾಜ್ಯ ವಕೀಲರ ಪರಿಷತ್‌ ಕಚೇರಿ
Last Updated 30 ಅಕ್ಟೋಬರ್ 2019, 5:32 IST
ಅಕ್ಷರ ಗಾತ್ರ

ಬೆಂಗಳೂರು: ಕಬ್ಬನ್‌ ಪಾರ್ಕ್‌ನ ಪ್ರೆಸ್‌ ಕ್ಲಬ್‌ ಪಕ್ಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಜ್ಯ ವಕೀಲರ ಪರಿಷತ್ ಕಟ್ಟಡ ಕೆಡವಿ ಅಲ್ಲಿ ಏಳು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಅಸ್ತು ಎಂದಿದೆ.

‘ಹಾಲಿ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಡಬೇಕು’ ಎಂದು ಕೋರಿ 2014ರ ಸೆಪ್ಟೆಂಬರ್ 2ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಲೇವಾರಿ ಮಾಡಿದೆ.

ಈ ಕುರಿತಂತೆ ರಾಜ್ಯ ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯೂಡಿ)ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದ್ದು, ‘ಈ ಹಿಂದೆ ಹೇಳಿದ್ದಂತೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಬಹುದಾಗಿದ್ದ 17 ಮರಗಳನ್ನು ಕಡಿಯುವುದಿಲ್ಲ. ಅವುಗಳನ್ನು ಹಾಗೆಯೇ ಉಳಿಸಿಕೊಂಡು ಈಗಿರುವ 4,924 ಚದರ ಅಡಿಗಳಷ್ಟು ಪಾಯದ ವಿಸ್ತೀರ್ಣದಲ್ಲೇ ಹೊಸ ಕಟ್ಟಡ ವಿಸ್ತರಣೆ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

‘ಉದ್ದೇಶಿತ ಕಟ್ಡಡದಲ್ಲಿ ಪ್ರತಿ ಅಂತಸ್ತು 3.60 ಮೀಟರ್‌ನಷ್ಟು ಎತ್ತರ ಇರಲಿದೆ. ಇದಕ್ಕಾಗಿ ಪಿಡಬ್ಲ್ಯೂಡಿ, ಈ ಹಿಂದಿನ ಜಿ.ಕೆ.ಗೋವಿಂದರಾವ್‌ v/s ಕರ್ನಾಟಕ ರಾಜ್ಯ ಸರ್ಕಾರದ ಪ್ರಕರಣದಲ್ಲಿನ ನಿರ್ದೇಶನಗಳನ್ನು ಗಮನದಲ್ಲಿರಿಸಿಕೊಂಡು ಹೊಸ ಪ್ರಸ್ತಾವ ಸಿದ್ಧಪಡಿಸಿದೆ. ಯೋಜನೆಯಂತೆಯೇ ಕಟ್ಟುನಿಟ್ಟಾಗಿ ಏಳು ಅಂತಸ್ತಿನ ಕಟ್ಟಡ ನಿರ್ಮಿಸಲಾಗುವುದು’ ಎಂಬ ಅಂಶಗಳನ್ನು ನ್ಯಾಯಪೀಠ ಮಾನ್ಯ ಮಾಡಿದೆ.

ಹಳೆಯ ಕೆಜಿಐಡಿ (ಕರ್ನಾಟಕ ಸರ್ಕಾರಿ ವಿಮಾ ಇಲಾಖೆ) ಕಟ್ಟಡ ಮತ್ತು ಪ್ರೆಸ್ ಕ್ಲಬ್‌ ಮಧ್ಯದಲ್ಲಿರುವ ಈ ಕಟ್ಟಡವು ಹೈಕೋರ್ಟ್‌ ಸುಪರ್ದಿಗೆ ಒಳಪಟ್ಟಿದ್ದು, ಈ ಮೊದಲು ಇಲ್ಲಿ ರಾಜ್ಯ ಚುನಾವಣಾ ಆಯೋಗದ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಆಯೋಗದ ಕಚೇರಿ ಸ್ಥಳಾಂತರಗೊಂಡ ನಂತರ ಇದನ್ನು ರಾಜ್ಯ ವಕೀಲರ ಪರಿಷತ್‌ಗೆ ಬಿಟ್ಟುಕೊಡಲಾಗಿತ್ತು.

‘ಜಾಗ ಕೊಟ್ಟರೆ ಖಾಲಿ ಮಾಡುತ್ತೇವೆ’

‘ಕಟ್ಟಡ ಖಾಲಿ ಮಾಡುವಂತೆ ನಮಗೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸೂಚಿಸಿದ್ದಾರೆ. ಇದಕ್ಕೆ ನಾವು, ಹಳೆಯ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕೆಜಿಐಡಿ ಕಟ್ಟಡವನ್ನು ನಮಗೆ ಬಿಟ್ಟುಕೊಡಿ ಇಲ್ಲವೇ ಹೊಸ ಕಟ್ಟಡದಲ್ಲಿ ಎರಡು ಅಂತಸ್ತುಗಳನ್ನು ನೀಡಿ, ಹಾಗಾದರೆ ಬಿಟ್ಟುಕೊಡುತ್ತೇವೆ ಎಂದು ಹೇಳಿದ್ದೇವೆ. ಒಂದೊಮ್ಮೆ ಕೊಡದೇ ಹೋದರೆ ಈಗಿರುವ ಜಾಗ ಬಿಡುವುದಿಲ್ಲ’ ಎಂದು ಅಖಿಲ ಭಾರತ ವಕೀಲರ ಪರಿಷತ್‌ ಸಹ ಅಧ್ಯಕ್ಷ ವೈ.ಆರ್.ಸದಾಶಿವ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

‘ನಮಗೆ ಬೇರೆಲ್ಲೂ ಜಾಗವಿಲ್ಲ. ಕೆಜಿಐಡಿ ಕಟ್ಟಡದಿಂದ ಇಲ್ಲಿಗೆ ಸ್ಥಳಾಂತರಗೊಂಡ ಮೇಲೆ ಪರಿಷತ್‌ ನಿಧಿಯಿಂದ ₹ 22 ಲಕ್ಷ ಖರ್ಚು ಮಾಡಿ ಸುತ್ತಲೂ ಕಬ್ಬಿಣದ ಸರಳುಗಳ ಕಾಂಪೌಂಡ್‌ ನಿರ್ಮಿಸಿದ್ದೇವೆ. ವಾಸ್ತವದಲ್ಲಿ ಕಬ್ಬನ್‌ ಪಾರ್ಕ್‌ನಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿಯನ್ನೇ ಕೊಡಬಾರದು’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಮೂಲಸೌಕರ್ಯ ಕೊರತೆಯಿದೆ’

‘ಏಳು ಅಂತಸ್ತಿನ ಕಟ್ಟಡ ನಿರ್ಮಿಸಲು ನಮ್ಮ ಅಭ್ಯಂತರವೇನೂ ಇಲ್ಲ. ಪರಿಷತ್‌ನವರು ಬೇಕಾದರೆ ಬೇರೆಲ್ಲಾದರೂ ಜಾಗ ಹುಡುಕಿಕೊಳ್ಳಲಿ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್‌ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತಂತೆ ವಿವರಿಸಿದ ಅವರು, ‘ಸುಪ್ರೀಂ ಕೋರ್ಟ್‌ ಮಾರ್ಗಸೂಚಿಯ ಅನುಸಾರ ಹೈಕೋರ್ಟ್‌ನಲ್ಲಿ ಮೂಲಸೌಕರ್ಯಗಳ ಕೊರತೆ ಇದೆ. 700ರಿಂದ800 ರಷ್ಟು ಮಹಿಳಾ ವಕೀಲರಿದ್ದು ಅವರಿಗೆ ಪ್ರತ್ಯೇಕ ಕೊಠಡಿಯಿಲ್ಲ. ಕ್ಯಾಂಟೀನ್‌ ಜಾಗದ ಕೊರತೆ ಇದೆ. ಹೀಗಾಗಿ ಸಂಘವು ಹೊಸ ಕಟ್ಟಡ ನಿರ್ಮಾಣವನ್ನು ಸ್ವಾಗತಿಸುತ್ತದೆ’ ಎಂದು ತಿಳಿಸಿದ್ದಾರೆ.

ಹೊಸ ಕಟ್ಟಡ ನಿರ್ಮಿಸುವುದರಿಂದ ಕಬ್ಬನ್‌ ಪಾರ್ಕ್‌ ಪರಿಸರಕ್ಕೆ ಯಾವುದೇ ಅಪಾಯವಿಲ್ಲ. ಉದ್ದೇಶಿತ ಕಾಮಗಾರಿ ಜಾಗದಲ್ಲಿ ಯಾವುದೇ ಮರಗಳನ್ನು ಕಡಿಯಲಾಗುವುದಿಲ್ಲ.

-ಎಸ್.ಶ್ರೀರಂಗ,ರಿಜಿಸ್ಟ್ರಾರ್ ಜನರಲ್‌ ಪರ ವಕೀಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT