ಬುಧವಾರ, ಮಾರ್ಚ್ 3, 2021
22 °C

ಕುಂದರಹಳ್ಳಿ, ವೈಟ್‌ಫೀಲ್ಡ್‌ ನಿವಾಸಿಗಳ ತೆರವು: ಯಥಾಸ್ಥಿತಿಗೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಮಹದೇವಪುರ ವಲಯದ ತೂಬರಹಳ್ಳಿ ಹಾಗೂ ಕುಂದಲಹಳ್ಳಿ ಬಳಿ ವಾಸಿಸುತ್ತಿರುವ ವಲಸೆ ಕಾರ್ಮಿಕರ ಜೋಪಡಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಂಡು ಹೋಗಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಮುರ್ಷೀದಾಬಾದ್‌ನಿಂದ ವಲಸೆ ಬಂದು ಇಲ್ಲಿ ನೆಲೆಸಿರುವ ರೇಖಾ ಬೀಬಿ ಸೇರಿದಂತೆ ಪಶ್ಚಿಮ ಬಂಗಾಳ ಹಾಗೂ ಒಡಿಶಾದ 66 ಜನರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಸುನಿಲ್‌ ದತ್‌ ಯಾದವ್‌ ವಿಚಾರಣೆ ನಡೆಸಿದರು.

‘ಪ್ರಕರಣದಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಯನ್ನು ಪ್ರತಿವಾದಿಯನ್ನಾಗಿ ಸೇರ್ಪಡೆ ಮಾಡಬೇಕು. ಕುಂದಲಹಳ್ಳಿ ಗೇಟ್‌, ತೂಬರಹಳ್ಳಿ, ವೈಟ್‌ಫೀಲ್ಡ್‌ ವ್ಯಾಪ್ತಿಯ ಸರ್ವೆ ನಂಬರ್‌ 253/2, 275, 276, 320/2, 322/2 ಹಾಗೂ 323/3ರಲ್ಲಿ ಈ ಸರ್ವೆ ನಂಬರ್‌ಗಳ ಮಾಲೀಕರು ಹಾಗೂ ಸದ್ಯ ವಾಸ ಮಾಡುತ್ತಿರುವವರು ಯಥಾಸ್ಥಿತಿ ಕಾಯ್ದುಕೊಂಡು ಹೋಗಬೇಕು’ ಎಂದು ನ್ಯಾಯಪೀಠ ಆದೇಶಿಸಿದೆ.

ನೋಟಿಸ್‌: ಪ್ರಕರಣದ ಪ್ರತಿವಾದಿಗಳಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ, ಪಾಲಿಕೆಯ ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ ವಿಭಾಗದ ಜಂಟಿ ಆಯುಕ್ತ ಹಾಗೂ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಯ ಡಿಸಿಪಿಗಳಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಲಾಗಿದೆ.

ಪ್ರಕರಣವೇನು?: ‘ಕುಂದಲಹಳ್ಳಿ ಗೇಟ್‌, ತೂಬರಹಳ್ಳಿ, ವೈಟ್‌ಫೀಲ್ಡ್‌ ಪ್ರದೇಶದ ಖಾಸಗಿ ಜಮೀನಿನಲ್ಲಿ ದೇಶದ ವಿವಿಧೆಡೆಯಿಂದ ಬಂದಿರುವ 5 ಸಾವಿರಕ್ಕೂ ಹೆಚ್ಚು ಜನರಿದ್ದಾರೆ. ಇವರೆಲ್ಲಾ ಇಲ್ಲಿನ ಜೋಪಡಿಗಳಲ್ಲಿ ಕಳೆದ 20 ವರ್ಷಗಳಿಂದ ನೆಲೆಸಿದ್ದಾರೆ. ಈ ಪೈಕಿ ಹೆಚ್ಚಿನವರು ಪಶ್ಚಿಮ ಬಂಗಾಳದವರು. ಬಹುತೇಕರು ಚಿಂದಿ ಆಯುವ, ಮನೆಗೆಲಸ ಮತ್ತು ದಿನಗೂಲಿ ಕಾರ್ಮಿಕರು. ಇವರಲ್ಲಿ ಚಿಂದಿ ಆಯುವವರು ತಾವು ಸಂಗ್ರಹಿಸಿದ ಚಿಂದಿಯಲ್ಲಿ ಬೇಡವಾದದ್ದನ್ನು ಸುಡುತ್ತಾರೆ. ಅವುಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಭಾರಿ ಪ್ರಮಾಣದಲ್ಲಿ ಸುಡಲಾಗುತ್ತಿದ್ದು, ಇದರಿಂದ ನಮಗೆ ತೊಂದರೆ ಆಗುತ್ತಿದೆ’ ಎಂಬುದು ಈ ಪ್ರದೇಶದ ಆಸುಪಾಸಿನ ಅಪಾರ್ಟ್‌ಮೆಂಟ್‌ ನಿವಾಸಿಗಳ ದೂರು.

ಈ ದೂರನ್ನು ಆಧರಿಸಿ ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ, ಪಾಲಿಕೆಯ ಜಂಟಿ ಆಯುಕ್ತ (ಆರೋಗ್ಯ ಮತ್ತು ಘನತ್ಯಾಜ್ಯ ನಿರ್ವಹಣೆ) ಸರ್ಫರಾಜ್‌ ಖಾನ್‌ ಇತ್ತೀಚೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು ಮತ್ತು ಜೋಪಡಿಗಳನ್ನು ಡಿ.3ರೊಳಗೆ ತೆರವು ಮಾಡುವಂತೆ ಡಿ.1ರಂದು ಸೂಚಿಸಿದ್ದರು. ಅಂತೆಯೇ ಡಿ.3ರಂದು ಬಿಬಿಎಂಪಿ ಅಧಿಕಾರಿಗಳು 200ಕ್ಕೂ ಹೆಚ್ಚು ಪೊಲೀಸರೊಂದಿಗೆ ಈ ಜೋಪಡಿ ನಿವಾಸಿಗಳ ತೆರವು ಕಾರ್ಯಕ್ಕೆ ಮುಂದಾಗಿದ್ದರು.

ಕೆಲವು ಸಾಮಾಜಿಕ ಸಂಘಟನೆಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಕೂಡಲೇ ಇವರ ನೆರವಿಗೆ ಬಂದು ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವಲ್ಲಿ ಯಶಸ್ವಿಯಾಗಿದ್ದವು.

ಅರ್ಜಿದಾರರ ಮನವಿ ಏನು?

* ನಾವು ಅನುಸೂಚಿತ ಸ್ವತ್ತಿನಲ್ಲಿ ಕಳೆದ 20 ವರ್ಷಗಳಿಂದ ವಾಸವಾಗಿದ್ದೇವೆ. ನಮ್ಮನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿ ನೋಡುವುದು ಸರಿಯಲ್ಲ.

* ಸ್ವಾಭಾವಿಕ ನ್ಯಾಯವನ್ನು ಪರಿಪಾಲಿಸದೆ ಈ ರೀತಿಯ ತೆರವುಗೊಳಿಸುವಿಕೆ ನಡೆಸುವುದು ಸಂವಿಧಾನದ 21ನೇ ವಿಧಿಯ ಪ್ರಕಾರ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತೆ. ಅಷ್ಟೇ ಅಲ್ಲ ಸಂವಿಧಾನದ 38, 39 (ಎ), 39 (ಎಫ್‌), 45, 46 ಮತ್ತು 47ನೇ ವಿಧಿಗಳನ್ನೂ ಉಲ್ಲಂಘಿಸಿದಂತಾಗುತ್ತದೆ.

* ಸಾವಿರಾರು ಸಂಖ್ಯೆಯಲ್ಲಿರುವ ನಮ್ಮನ್ನು ಹಾಲಿ ಇರುವ ವಾಸಸ್ಥಳದಿಂದ ಮನಸೋ ಇಚ್ಛೆಗೆ ಅನುಗುಣವಾಗಿ ಒಕ್ಕಲೆಬ್ಬಿಸಿದರೆ ಅಕ್ಷರಶಃ ಬೀದಿಗೆ ಬೀಳುತ್ತೇವೆ.

* ಬಿಬಿಎಂಪಿ ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸುವ ಬದಲಿಗೆ ನೀರು, ವಿದ್ಯುತ್‌, ಆರೋಗ್ಯದಂತಹ ಕನಿಷ್ಠ ಮೂಲಸೌಕರ್ಯಗಳನ್ನು ಒದಗಿಸಬೇಕು.

* ಈ ಪ್ರದೇಶಗಳಲ್ಲಿ ಶಾಲೆಗೆ ಹೋಗುವ ನೂರಾರು ಮಕ್ಕಳಿದ್ದಾರೆ. ಒಕ್ಕಲೆಬ್ಬಿಸಿದರೆ ಇವರನ್ನು ಕಡ್ಡಾಯ ಶಿಕ್ಷಣ ಹಕ್ಕಿನಿಂದ ವಂಚಿತಗೊಳಿಸಿದಂತಾಗುತ್ತದೆ.

* ಹಿರಿಯ ನಾಗರಿಕರೂ ಇಲ್ಲಿದ್ದು ಅವರನ್ನೂ ಒಕ್ಕಲೆಬ್ಬಿಸಿದರೆ, ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ–2007ರ ಉಲ್ಲಂಘನೆ ಮಾಡಿದಂತಾಗುತ್ತದೆ.

* ಯಾವುದೇ ನ್ಯಾಯೋಚಿತ ಮಾರ್ಗಗಳನ್ನು ಅನುಸರಿಸದೆ ನಮ್ಮನ್ನು ಇಲ್ಲಿಂದ ತೆರವುಗೊಳಿಸುವುದು ಕಾನೂನು ಬಾಹಿರ, ಅಸಾಂವಿಧಾನಿಕ ಮತ್ತು ಏಕಪಕ್ಷೀಯ.

* ಪ್ರತಿವಾದಿಗಳು ನಮ್ಮ ಬದುಕುವ ಹಕ್ಕು, ವಸತಿ, ಆರೋಗ್ಯ, ಶಿಕ್ಷಣ, ನಾಗರಿಕ ಸೌಕರ್ಯ ಸೇರಿದಂತೆ ಘನತೆಯಿಂದ ಬದುಕುವ ಹಕ್ಕನ್ನೂ ಕಸಿದುಕೊಳ್ಳುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು