ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲೇವಾರ್ಡ್‌ ಜಾಗಕ್ಕೆ ಸಾಹಿತ್ಯ ಪರಿಷತ್‌ ಕಣ್ಣು

ಉದ್ಯಾನ ಬಿಟ್ಟು ಬೇರೆಲ್ಲಾದರೂ ಕನ್ನಡ ಭವನ ನಿರ್ಮಿಸಲಿ: ಸ್ಥಳೀಯರು
Last Updated 17 ಜನವರಿ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಸುಂಕೇನಹಳ್ಳಿ ವಾರ್ಡ್‌ನಲ್ಲಿ ನ್ಯಾಷನಲ್‌ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಿರುವ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್‌ನಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ನೀಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ.

ಕೆ.ಆರ್‌.ರಸ್ತೆ ಪಕ್ಕದಲ್ಲಿರುವ 142 x47 ಅಡಿ ಜಾಗವನ್ನು ನೀಡುವಂತೆ ಪರಿಷತ್ತಿನಬೆಂಗಳೂರು ನಗರ ಜಿಲ್ಲಾ ಘಟಕವು ಎರಡು ವರ್ಷಗಳ ಹಿಂದೆ ಪಾಲಿಕೆಯನ್ನು ಕೋರಿತ್ತು. ಈ ಜಾಗ ಹಸ್ತಾಂತರ ಆಗಿಲ್ಲ. ಈ ಪ್ರಕ್ರಿಯೆಗೆ ಕೆಲವರು ಅಡ್ಡಗಾಲು ಹಾಕುತ್ತಿದ್ದಾರೆ ಎಂಬುದು ಪರಿಷತ್ತಿನ ಬೆಂಗಳೂರು ನಗರ ಜಿಲ್ಲಾ ಘಟಕದ ಆರೋಪ. ಜಾಗವನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಭಾನುವಾರದಿಂದ ಪ್ರತಿಭಟನೆ ನಡೆಯುತ್ತಿದೆ.

ಇದು ಪಾಲಿಕೆಯ ಬುಲೇವಾರ್ಡ್‌ ಜಾಗ. ಇಲ್ಲಿ ಈ ಹಿಂದೆ ಸಾಕಷ್ಟು ಮರಗಳಿದ್ದವು. ಮೆಟ್ರೊ ಕಾಮಗಾರಿ ಸಲುವಾಗಿ ಈ ಜಾಗವನ್ನು ಬಿಟ್ಟುಕೊಡಲಾಗಿತ್ತು. ಅಲ್ಲಿ ಮತ್ತೆ ಬುಲೇವಾರ್ಡ್‌ ನಿರ್ಮಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

‘ಇಲ್ಲಿ ಜಲಮಂಡಳಿ ಕಚೇರಿಯಿಂದ ಮಹಿಳಾ ಸಮಾಜ ಶಾಲೆಯವರೆಗೂ ಉದ್ಯಾನ ಇತ್ತು. ಮೆಟ್ರೊ ನಿಲ್ದಾಣಕ್ಕಾಗಿ ಸಾಕಷ್ಟು ಮರಗಳನ್ನು ಕಳೆದುಕೊಂಡಿದ್ದೇವೆ. ಬುಲೇವಾರ್ಡ್‌ನ ಜಾಗದಲ್ಲಿ ಮತ್ತೆ ಗಿಡ ಮರ ಬೆಳೆಸಬೇಕು. ಕಟ್ಟಡ ನಿರ್ಮಿಸುವುದಕ್ಕೆ ಈ ಜಾಗವನ್ನು ಬಳಸುವುದು ಒಳ್ಳೆಯದಲ್ಲ. ಈ ಪರಿಸರದಲ್ಲಿ ಇನ್ನಷ್ಟು ಕಟ್ಟಡಗಳು ಬರುವುದು ಬೇಡ’ ಎಂದು ಸ್ಥಳೀಯ ನಿವಾಸಿ ಮುರಳಿ ತಿಳಿಸಿದರು.

‘ಈ ಬುಲೇವಾರ್ಡ್‌ನಲ್ಲಿ ಮತ್ತೆ ಗಿಡಗಳನ್ನು ನೆಟ್ಟು ಬೆಳೆಸಬೇಕು. ಹಿರಿಯ ನಾಗರಿಕರಿಗೆ ಅನುಕೂಲವಾಗುವಂತೆ ವ್ಯಾಯಾಮ ಪರಿಕರಗಳನ್ನೂ ಈ ಉದ್ಯಾನದಲ್ಲಿ ಅಳವಡಿಸಬೇಕು’ ಎಂದು ಅವರು ಒತ್ತಾಯಿಸಿದರು.

ನಗರಾಭಿವೃದ್ಧಿ ಇಲಾಖೆಯು 2011ರಲ್ಲೇ ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಬಯಲು ಪ್ರದೇಶ (ಸಂರಕ್ಷಣೆ ಮತ್ತು ನಿಯಂತ್ರಣ) ಕಾಯ್ದೆ– 1985ರ ಪ್ರಕಾರ ಪಾಲಿಕೆ ವ್ಯಾಪ್ತಿಯ ಉದ್ಯಾನ ಹಾಗೂ ಆಟದ ಮೈದಾನಗಳನ್ನು ಗುರುತಿಸಿ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಉದ್ಯಾನಗಳ ಪಟ್ಟಿಯಲ್ಲಿ ಕೆ.ಆರ್‌.ರಸ್ತೆ ಪಕ್ಕದ ಬುಲೇವಾ‌ರ್ಡ್‌ಗಳೂ ಸೇರಿವೆ. ಉದ್ಯಾನ ಎಂದು ಗುರುತಿಸಿದ ಜಾಗವನ್ನು ಮಾರಾಟ ಮಾಡುವುದು, ಉಡುಗೊರೆ ನೀಡುವುದು,ಅಡಮಾನ ಇಡುವುದು, ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡುವುದಕ್ಕೆ ಅವಕಾಶವಿಲ್ಲ. ಇಲ್ಲಿ ಕಟ್ಟಡ ಕಟ್ಟುವುದಕ್ಕೆ ಅನುಮತಿಯನ್ನೂ ನೀಡುವಂತಿಲ್ಲ. ಒಂದು ವೇಳೆ ನೀಡಿದರೂ ಅದು ಅನೂರ್ಜಿತವಾಗುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದರು.

‘ಅನ್ಯಉದ್ದೇಶಕ್ಕೆ ನೀಡಿಲ್ಲವೇ?’

‘ನಾವು ಕೇಳಿದ್ದ ಜಾಗದಲ್ಲಿ ಈ ಹಿಂದೆ ಬುಲೇವಾರ್ಡ್‌ ಉದ್ಯಾನ ಇದ್ದುದು ನಿಜ. ಆದರೆ ಆ ಜಾಗವನ್ನು ಮೆಟ್ರೊ ಕಾಮಗಾರಿಗಾಗಿ ಬಿಎಂಆರ್‌ಸಿಎಲ್‌ ಸ್ವಾಧೀನಪಡಿಸಿಕೊಂಡಿದೆ. ಅವರು ಮೆಟ್ರೊ ನಿಲ್ದಾಣಕ್ಕೆ ಬಳಸಿ ಉಳಿದಿರುವ 7000 ಚದರ ಅಡಿ ಜಾಗವನ್ನು ಮಾತ್ರ ನಾವು ಕೇಳುತ್ತಿದ್ದೇವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದ ಅಧ್ಯಕ್ಷ ಮಾಯಣ್ಣ ತಿಳಿಸಿದರು.

‘ಬುಲೇವಾರ್ಡ್‌ ಉದ್ಯಾನದ ಜಾಗವನ್ನು ಬೆಸ್ಕಾಂ, ನ್ಯಾಷನಲ್‌ ಕಾಲೇಜು, ಜೈನ ಸಮಾಜ ಹಾಗೂ ಮೆಟ್ರೊ ಕಾಮಗಾರಿಗೆ ನೀಡಬಹುದು. ಆದರೆ ಕನ್ನಡ ಭವನಕ್ಕೆ ನೀಡಲು ಸಾಧ್ಯವಿಲ್ಲ ಎಂದರೆ ಏನರ್ಥ’ ಎಂದು ಅವರು ಪ್ರಶ್ನಿಸಿದರು.

ಕ.ಸಾ.ಪ ನಗರ ಜಿಲ್ಲಾ ಘಟಕಕ್ಕೆ ಎಲ್ಲೂ ಸ್ವಂತ ಜಾಗ ಇಲ್ಲ. ಅನೇಕ ಕಡೆ ಹುಡುಕಾಟ ನಡೆಸಿದ ಬಳಿಕ ನಾವು ಈ ಜಾಗವನ್ನು ನೀಡುವಂತೆ ಕೇಳಿದ್ದೇವೆ. ಬಿಬಿಎಂಪಿಯ ಶಿಕ್ಷಣ, ತೋಟಗಾರಿಕೆ, ಎಂಜಿನಿಯರಿಂಗ್‌ ಹಾಗೂ ಸಾಮಾಜಿಕ ನ್ಯಾಯ ವಿಭಾಗಗಳು ಈ ಜಾಗವನ್ನು ಕನ್ನಡ ಭವನ ನಿರ್ಮಾಣಕ್ಕೆ ನೀಡುವುದಕ್ಕೆ ಆಕ್ಷೇಪಣೆ ಇಲ್ಲ ಎಂದು ಹೇಳಿವೆ. ಆದರೂ ಕೆಲವರು ಇದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. 2018ರ ಆಗಸ್ಟ್‌ನಿಂದ ಈ ಪ್ರಸ್ತಾವ ಪಾಲಿಕೆ ಸಭೆಯಲ್ಲಿ ಕಾರ್ಯಸೂಚಿಯಲ್ಲಿ ಉಲ್ಲೇಖವಾಗುತ್ತಲೇ ಇದೆ. ಅದರೂ ಮಂಜೂರು ಮಾಡುತ್ತಿಲ್ಲ’ ಎಂದು ಅವರು ಆರೋಪ ಮಾಡಿದರು.

ಕನ್ನಡ ಭವನಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದವರು ಭಾನುವಾರದಿಂದ ನಿತ್ಯವೂ ಧರಣಿ ನಡೆಸುತ್ತಿದ್ದಾರೆ –ಪ್ರಜಾವಾಣಿ ಚಿತ್ರ
ಕನ್ನಡ ಭವನಕ್ಕೆ ಜಾಗ ನೀಡುವಂತೆ ಒತ್ತಾಯಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕದವರು ಭಾನುವಾರದಿಂದ ನಿತ್ಯವೂ ಧರಣಿ ನಡೆಸುತ್ತಿದ್ದಾರೆ –ಪ್ರಜಾವಾಣಿ ಚಿತ್ರ

‘ಸೂಕ್ತ ನಿರ್ಧಾರ’

‘ಕನ್ನಡ ಭವನಕ್ಕೆ ಕೆ.ಆರ್‌.ರಸ್ತೆ ಪಕ್ಕದಲ್ಲಿ ಜಾಗ ನೀಡುವಂತೆ ಕ.ಸಾ.ಪ ನಗರ ಜಿಲ್ಲಾ ಘಟಕದವರು ಕೇಳಿರುವುದು ನಿಜ. ಬುಲೇವಾರ್ಡ್‌ ಉದ್ಯಾನ ಎಂದು ಈ ಹಿಂದೆಯೇ ಅಧಿಸೂಚನೆ ಹೊರಡಿಸಿದ್ದ ಜಾಗ ಅದಾಗಿದ್ದರೆ ನೀಡಲು ಸಾಧ್ಯವಿಲ್ಲ. ಈ ಬಗ್ಗೆ ನಾನು ಖುದ್ದು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

* ಕನ್ನಡ ಭವನಕ್ಕೆ ಕಾನೂನು ಪ್ರಕಾರವಾಗಿ ಜಾಗ ನೀಡಲಿ. ಇನ್ನೂ ₹ 2 ಕೋಟಿ ಅನುದಾನ ನೀಡಲಿ

-ಡಿ.ಎನ್.ರಮೇಶ್‌, ಸುಂಕೇನಹಳ್ಳಿ ವಾರ್ಡ್‌ ಕಾರ್ಪೊರೇಟರ್‌

*ಜಾಗ ಬಿಡದಿದ್ದರೆ ಮುಂದಿನ ಭಾನುವಾರದಿಂದ ಉಪವಾಸ ಸತ್ಯಾಗ್ರಹ ಆರಂಭಿಸುತ್ತೇವೆ

-ಮಾಯಣ್ಣ, ಕ.ಸಾ.ಪ ನಗರ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT