ಸೋಮವಾರ, ಅಕ್ಟೋಬರ್ 21, 2019
24 °C
ಅಮೆರಿಕ ಸಂಸತ್‌ ಸದಸ್ಯರ ಭೇಟಿ ಸಂದರ್ಭ ಇಮ್ರಾನ್‌ಖಾನ್‌ ಸ್ಪಷ್ಟನೆ

ಕಾಶ್ಮೀರದ ಪರಿಸ್ಥಿತಿ ಶಮನವಾಗದೇ ಮಾತುಕತೆ ಅಸಾಧ್ಯ: ಇಮ್ರಾನ್

Published:
Updated:
prajavani

ಇಸ್ಲಾಮಾಬಾದ್‌: ‘ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷಾಧಿಕಾರವನ್ನು ಭಾರತ ರದ್ದುಪಡಿಸಿದ ಬಳಿಕ ಮೂಡಿರುವ ಪರಿಸ್ಥಿತಿ ಶಮನಗೊಳ್ಳುವವರೆಗೂ ಭಾರತದ ಜೊತೆಗೆ ಮಾತುಕತೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ತಿಳಿಸಿದ್ದಾರೆ.

ಇಸ್ಲಾಮಾಬಾದ್‌ಗೆ ಭೇಟಿ ನೀಡಿರುವ ಅಮೆರಿಕ ಸಂಸತ್‌ ಸದಸ್ಯರಾದ ಕ್ರಿಸ್‌ ವಾನ್‌ ಹೊಲೆನ್‌, ಮ್ಯಾಗಿ ಹಾಸನ್‌ ಅವರ ಜೊತೆಗಿನ ಭೇಟಿ ಸಂದರ್ಭದಲ್ಲಿ ಈ ವಿಷಯ ತಿಳಿಸಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಸ್ಥಿತಿ ಕುರಿತ ಅನಿಸಿಕೆಯನ್ನು ಅಮೆರಿಕ ಸಂಸದರು ಹಂಚಿಕೊಂಡರು ಎಂದು ಜಿಯೊ ನ್ಯೂಸ್‌ ವರದಿ ಮಾಡಿದೆ. ‘ಪಾಕಿಸ್ತಾನ–ಭಾರತ ನಡುವೆ ಮಾತುಕತೆ ನಡೆಯುವುದನ್ನು ನಾನು ಪ್ರಬಲವಾಗಿ ಬೆಂಬಲಿಸುತ್ತೇನೆ. ಆದರೆ, ಸದ್ಯ ಕಾಶ್ಮೀರದಲ್ಲಿನ ಪರಿಸ್ಥಿತಿ ಬದಲಾಗದೇ ಚರ್ಚೆ ಅಸಾಧ್ಯ’ ಎಂದು ಇಮ್ರಾನ್‌ ಖಾನ್‌ ಹೇಳಿದರು.

ಗಡಿಯಲ್ಲಿ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುವುದು ನಿಲ್ಲುವವರೆಗೆ ಪಾಕಿಸ್ತಾನದ ಜೊತೆ ಮಾತುಕತೆ ನಡೆಸುವ ಪ್ರಶ್ನೆಯೇ ಇಲ್ಲ ಎಂದು ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಕಾಶ್ಮೀರ ಉಭಯ ರಾಷ್ಟ್ರಗಳಿಗೆ ಸಂಬಂಧಿಸಿದ ವಿಷಯ. ಈ ಕುರಿತು ಮೂರನೆಯವರ ಮಧ್ಯಸ್ಥಿಕೆ ಅನಗತ್ಯ’ ಎಂದೂ ಭಾರತ ಸ್ಪಷ್ಟಪಡಿಸಿದೆ.

ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ರಾಜಕೀಯ ಲಾಭಕ್ಕಾಗಿ ಮಹಿಳೆಯರ ಹಕ್ಕುಗಳನ್ನು ಆಯುಧವನ್ನಾಗಿ ಬಳಸಿಕೊಳ್ಳುತ್ತಿರುವ ಪಾಕಿಸ್ತಾನದ ಕ್ರಮವನ್ನು ಭಾರತ ಟೀಕಿಸಿದೆ.

ಗೌರವದ ಹೆಸರಿನಲ್ಲಿ ಮಹಿಳೆಯರ ಬದುಕುವ ಹಕ್ಕುಗಳನ್ನೇ ಕಸಿಯುವ ದೇಶವೊಂದು ಭಾರತ ಕುರಿತು ಆಧಾರವಿಲ್ಲದ ಹೇಳಿಕೆಗಳನ್ನು ನೀಡುತ್ತಿರುವುದು ವಿಪರ್ಯಾಸ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಅಭಿಯಾನದ ಪ್ರಥಮ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಹೇಳಿದರು.

‘ಕಾಶ್ಮೀರ ಪಾಕಿಸ್ತಾನದ ರಕ್ತವಿದ್ದಂತೆ’

‘ಕಾಶ್ಮೀರ ಪಾಕಿಸ್ತಾನ ದೇಶದ ರಕ್ತವಿದ್ದಂತೆ. ದೇಶ ಮತ್ತು ಸೇನೆ ಯಾವುದೇ ಸ್ಥಿತಿ ಎದುರಾದರೂ ಕಾಶ್ಮೀರಿ ಜನರ ಜೊತೆಗೆ ನಿಲ್ಲಲಿದೆ’ ಎಂದು ಸಕ್ರಿಯ ರಾಜಕಾರಣಕ್ಕೆ ಮರಳಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಹೇಳಿದ್ದಾರೆ.

ಸದ್ಯ ದುಬೈನಲ್ಲಿರುವ ಜನರಲ್‌ (ನಿವೃತ್ತ) ಮುಷರಫ್‌, ಕಾರ್ಗಿಲ್‌ ಸಂಘರ್ಷವನ್ನು ಉಲ್ಲೇಖಿಸಿದ್ದಾರೆ. ‘ಭಾರತ ಪದೇ ಪದೇ ಪಾಕಿಸ್ತಾನಕ್ಕೆ ಬೆದರಿಕೆ ಒಡ್ಡುತ್ತಿದೆ. ‘ಬಹುಶಃ ಭಾರತೀಯ ಸೇನೆ ಕಾರ್ಗಿಲ್‌ ಯುದ್ಧ ಮರೆತಿದೆ. 1999ರಲ್ಲಿ ಸಂಘರ್ಷಕ್ಕೆ ಕೊನೆ ಹಾಡಲು ಭಾರತ ಅಮೆರಿಕ ಅಧ್ಯಕ್ಷರ ನೆರವು ಪಡೆಯಿತು’ ಎಂದಿದ್ದಾರೆ. ಆಲ್‌ ಪಾಕಿಸ್ತಾನ್ ಮುಸ್ಲಿಂ ಲೀಗ್‌ (ಎಂಪಿಎಂಎಲ್‌) ಅಧ್ಯಕ್ಷರೂ ಆದ 76 ವರ್ಷ ವಯಸ್ಸಿನ ಮುಷರಫ್‌, ಇಸ್ಲಾಮಾಬಾದ್‌‌ನಲ್ಲಿ ನಡೆದ ಸ್ಥಾಪನಾ ದಿನದ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.

Post Comments (+)