ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ‘ಒಕ್ಕಲಿಗ ಸಚಿವ’ರ ಹಣಾಹಣಿ!

Last Updated 25 ಮಾರ್ಚ್ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಹಿನ್ನೆಲೆಯ ಇಬ್ಬರು ಸಚಿವರ ಹಣಾಹಣಿಗೆ ವೇದಿಕೆ ಸಜ್ಜಾಗಿದೆ.

30 ಲಕ್ಷ ಮತದಾರರನ್ನು ಹೊಂದಿ ದೇಶದ ಎರಡನೇ ದೊಡ್ಡ ಲೋಕಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಉತ್ತರದಲ್ಲಿ ಕಳೆದ ಸಲ ಡಿ.ವಿ.ಸದಾನಂದ ಗೌಡ ಅವರು 2.30 ಲಕ್ಷ ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದರು. ಮೈತ್ರಿಕೂಟದ ಒಪ್ಪಂದದಂತೆ ಈ ಸಲ ಕಾಂಗ್ರೆಸ್‌ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿತ್ತು. ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಇಲ್ಲಿ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಕೊನೆಯ ಗಳಿಗೆಯಲ್ಲಿ ಅವರು ತುಮಕೂರಿನತ್ತ ಚಿತ್ತ ಬದಲಿಸಿದರು.

ಆ ಹಂತದಲ್ಲಿ ಸಚಿವ ಕೃಷ್ಣ ಬೈರೇಗೌಡರ ಮನೆಗೆ ಭೇಟಿ ಕೊಟ್ಟ ದೇವೇಗೌಡರು, ಉತ್ತರದಲ್ಲಿ ಕಣಕ್ಕೆ ಇಳಿಯುವಂತೆ ಮನವೊಲಿಸುವ ಯತ್ನ ಮಾಡಿದರು. ಅದಕ್ಕೆ ಅವರು ಸಮ್ಮತಿ ಸೂಚಿಸಲಿಲ್ಲ. ಅದಾದ ಬಳಿಕ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ ಪಕ್ಷದಡಿ ಕಾಂಗ್ರೆಸ್‌ನ ಬಿ.ಎಲ್‌.ಶಂಕರ್‌ ಅವರನ್ನು ಕಣಕ್ಕೆ ಇಳಿಸುವ ಪ್ರಸ್ತಾಪವನ್ನು ಗೌಡರು ಮುಂದಿಟ್ಟರು. ಅದಕ್ಕೆ ಶಂಕರ್‌ ಒಪ್ಪಲಿಲ್ಲ. ಪಕ್ಷದಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆ ಕಾರಣಕ್ಕೆ ಕ್ಷೇತ್ರವನ್ನು ಕಾಂಗ್ರೆಸ್‌ಗೆ ಜೆಡಿಎಸ್‌ ಬಿಟ್ಟುಕೊಟ್ಟಿತು.

ರಾಜ್ಯಸಭಾ ಸದಸ್ಯ ಪ್ರೊ.ರಾಜೀವ್‌ ಗೌಡ, ವಿಧಾನ ಪರಿಷತ್‌ ಸದಸ್ಯ ಕೆ.ಗೋವಿಂದರಾಜು ಹೆಸರು ಮುನ್ನೆಲೆಗೆ ಬಂದಿತ್ತು. ಈ ಮಧ್ಯೆ ಅಖಾಡಕ್ಕೆ ಇಳಿದ ಸಮ್ಮಿಶ್ರ ಸರ್ಕಾರದ ಸಮನ್ವಯ ಅಧ್ಯಕ್ಷ ಸಿದ್ದರಾಮಯ್ಯ ಅವರು ಉತ್ತರ ಕ್ಷೇತ್ರ ಅಭ್ಯರ್ಥಿ ಆಯ್ಕೆ ಸಂಬಂಧ ಕ್ಷೇತ್ರ ವ್ಯಾಪ್ತಿಯ ಶಾಸಕರ ಸಭೆ ಕರೆದರು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ, ಸಚಿವರಾದ ಕೃಷ್ಣ ಬೈರೇಗೌಡ, ಜಮೀರ್ ಅಹಮದ್, ಕಾಂಗ್ರೆಸ್‌ ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಸುರೇಶ್, ಭೈರತಿ ಬಸವರಾಜು, ಅಖಂಡ ಶ್ರೀನಿವಾಸ ಮೂರ್ತಿ, ಜೆಡಿಎಸ್‌ನ ಕೆ.ಗೋಪಾಲಯ್ಯ, ಆರ್‌. ಮಂಜುನಾಥ್ ಕೂಡಾ ಪಾಲ್ಗೊಂಡಿದ್ದರು.

‘ಗೆಲ್ಲಿಸಿಕೊಂಡು ಬರುವುದು ನನ್ನ ಜವಾಬ್ದಾರಿ. ದೇವೇಗೌಡರು ಸಹ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ನೀವು ಸ್ಪರ್ಧಿಸಿ’ ಎಂದು ಕೃಷ್ಣ ಬೈರೇಗೌಡರನ್ನು ಸಿದ್ದರಾಮಯ್ಯ ಒಪ್ಪಿಸಿದರು ಎಂದು ಮೂಲಗಳು ಹೇಳಿವೆ.

ಕೃಷ್ಣಬೈರೇಗೌಡ ಅಖಾಡಕ್ಕೆ ಇಳಿದರೆ ಸದಾನಂದ ಗೌಡ ವಿರುದ್ಧ ಗೆಲುವು ಸಾಧಿಸಬಹುದು ಎನ್ನುವ ಲೆಕ್ಕಾಚಾರ ಕಾಂಗ್ರೆಸ್‌ ನಾಯಕರದ್ದು. ಈ ಕ್ಷೇತ್ರ ವ್ಯಾಪ್ತಿಯಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಿದ್ದು, ಕಾಂಗ್ರೆಸ್‌ನ ಐವರು, ಜೆಡಿಎಸ್‌ನ ಇಬ್ಬರು ಹಾಗೂ ಬಿಜೆಪಿಯ ಒಬ್ಬರು ಶಾಸಕರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT