ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು

ಭಾನುವಾರ, ಮೇ 26, 2019
32 °C

ಅಧಿಕಾರಿಗಳ ವಿರುದ್ಧ ಹರಿಹಾಯ್ದ ಗ್ರಾಮಸ್ಥರು

Published:
Updated:
Prajavani

ಬೆಂಗಳೂರು: ರಾತ್ರಿ ವೇಳೆ ವಿದ್ಯುತ್‌ ಕಡಿತ ಮಾಡಿದರೆ ಮಕ್ಕಳು ಓದುವುದಾದರೂ ಹೇಗೆ? ಹೋದ ವರ್ಷದ ಸಬ್ಸಿಡಿಯನ್ನೇ ನೀಡದ ರೇಷ್ಮೆ ಇಲಾಖೆಯು ಪ್ರಸಕ್ತ ಸಾಲಿನ ಸಬ್ಸಿಡಿಗಾಗಿ ಅರ್ಜಿ ಸಲ್ಲಿಸಿ ಎಂದು ಹೇಳುವ ಔಚಿತ್ಯವಾದರೂ ಏನು ಎಂಬ ಹತ್ತಾರು ಆಕ್ರೋಶಭರಿತ ಪ್ರಶ್ನೆಗಳು ಕೆ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಕೇಳಿ ಬಂದವು.

ಕೆ.ಗೊಲ್ಲಹಳ್ಳಿಯಲ್ಲಿ ಆಯೋಜಿಸಲಾದ ಮೊದಲನೇಸುತ್ತಿನ ಗ್ರಾಮಸಭೆಯಲ್ಲಿ ಜನರು ಕೇಳಿದ ಪ್ರಶ್ನೆಗಳು ಹಾಜರಿದ್ದ ಕೆಲ ಅಧಿಕಾರಿಗಳನ್ನು ತಬ್ಬಿಬ್ಬುಗೊಳಿಸಿದವು. ಪಶು ಇಲಾಖೆ ಅಧಿಕಾರಿಯನ್ನು ಪ್ರಶ್ನಿಸಿದ ಗ್ರಾಮಸ್ಥರು ಮೆಕ್ಕೆಜೋಳದ ಬೀಜ ಭೂಮಿಯಿಂದ ಮೇಲೆ ಏಳಲೇ ಇಲ್ಲ. ಈ ವರ್ಷವಾದರೂ ಗುಣಮಟ್ಟದ ಬೀಜ ನೀಡಿ ಎಂದು ಒತ್ತಾಯಿಸಿದರು. ಲೋಡ್ ಶೆಡ್ಡಿಂಗ್ ಆದೇಶ ಇಲ್ಲದ ಮೇಲೂ ವಿದ್ಯುತ್ ಕಡಿತಗೊಳಿಸುತ್ತಿರುವ ಬಗ್ಗೆ ಬೆಸ್ಕಾಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಹಂಪಾಪುರ ಬಳಿ ನಿರ್ಮಿಸಿರುವ ನೂತನ ರಸ್ತೆಯ ಕಳಪೆ ಕಾಮಗಾರಿ ಬಗ್ಗೆಯೂ ದೂರಿದ ಗ್ರಾಮಸ್ಥರು ಕಾಮಗಾರಿ ನಡೆಸಿದ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಇನ್ನಿತರ ಅಧಿಕಾರಿಗಳು ನೀಡಿದ ಉತ್ತರ ಗ್ರಾಮಸ್ಥರಿಗೆ ಸಮಾಧಾನ ತರದ ಕಾರಣ ಕೆಲ ಕಾಲ ವಾಗ್ವಾದ ನಡೆದು ಸಭೆಯು ಗೊಂದಲದ ಗೂಡಾಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಮಹೇಶ್ ಮಾತನಾಡಿ, ‘ನೀರು. ವಿದ್ಯುತ್ ಹಾಗೂ ಶೈಕ್ಷಣಿಕ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ವಸತಿ ರಹಿತರಿಗೆ ಶೀಘ್ರದಲ್ಲಿ ಸೂರು ಒದಗಿಸುವ ಯೋಜನೆಯು ಪಂಚಾಯಿತಿಗೆ ಇದೆ. ಶೀಘ್ರದಲ್ಲಿ ಕಾರ್ಯಗತಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ನಾಗರತ್ನ ಕುಮಾರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕುಸುಮಾ ಶಿವಮಾದಯ್ಯ, ತಾಲೂಕು ಪಂಚಾಯಿತಿ ಸದಸ್ಯ ಕೆ.ವೈ.ಶಿವಣ್ಣ, ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಜಣ್ಣ, ಪಿಡಿಒ ರಾಮಕೃಷ್ಣ, ಬೆಸ್ಕಾಂ ಎಇಇ ಕಾಶಿರಾಮ್ ಪವಾರ್, ಕಾರ್ಯದರ್ಶಿ ಶ್ರೀನಿವಾಸ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !