ಮೂರು ಮರಗಳ ತೊಗಟೆ ಕತ್ತರಿಸಿದರು

7
ಅರಣ್ಯ ಬಡಾವಣೆ ಬಳಿ ಹಸಿರು ಹನನ ಯತ್ನ

ಮೂರು ಮರಗಳ ತೊಗಟೆ ಕತ್ತರಿಸಿದರು

Published:
Updated:
Prajavani

ಬೆಂಗಳೂರು: ಕೆಂಗೇರಿ ಸಮೀಪದ ಅರಣ್ಯ ಬಡಾವಣೆಯ ಬಳಿ ಮೂರು ಮರಗಳ ತೊಗಟೆ ಕತ್ತರಿಸಿರುವ ಕಿಡಿಗೇಡಿಗಳು ಅವುಗಳನ್ನು ನಾಶ ಮಾಡುವ ಪ್ರಯತ್ನ ನಡೆಸಿದ್ದಾರೆ.

ಈ ಬಗ್ಗೆ ಸ್ಥಳೀಯ ಪರಿಸರ ಕಾರ್ಯಕರ್ತರೊಬ್ಬರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಧಾವಿಸಿದ ಸಸ್ಯ ವೈದ್ಯ ವಿಜಯ್‌ ನಿಶಾಂತ್‌ ತೊಗಟೆ ಕತ್ತರಿಸಿರುವ ಮರಗಳನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

‘ಎರಡು ನೀಲಗಿರಿ ಮರಗಳು ಹಾಗೂ ಒಂದು ಹಳದಿ ಗುಲ್‌ಮೊಹರ್‌ ಮರದ ತೊಗಟೆಯನ್ನು ಕತ್ತರಿಸಿದ್ದಾರೆ. ನೀಲಗಿರಿ ಮರಗಳು ಖಾಲಿ ಜಾಗದಲ್ಲಿದ್ದರೆ, ಹಳದಿ ಗುಲ್‌ಮೊಹರ್‌ ಮರವು ಮನೆಯೊಂದರ ಮುಂಭಾಗದಲ್ಲಿತ್ತು. ಮರಗಳನ್ನು ಕೊಲ್ಲಲು ಉದ್ದೇಶಪೂರ್ವಕವಾಗಿಯೇ ಯಾರೋ ಈ ಕೃತ್ಯ ನಡೆಸಿದ್ದಾರೆ’ ಎಂದು ವಿಜಯ್‌ ನಿಶಾಂತ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಡ

‘ತೊಗಟೆ ಕತ್ತರಿಸಿರುವ ಮರಗಳಿಗೆ ಜೇನು ಮೇಣ ಹಾಗೂ ಕಿತ್ತಳೆ ಎಣ್ಣೆ ಬಳಸಿ ತಯಾರಿಸಿದ ಮುಲಾಮು ಹಚ್ಚಿದ್ದೇನೆ. ಈ ಲೇಪನವು ಅವುಗಳಿಗೆ ಸೋಂಕು ತಗುಲದಂತೆ ತಡೆಯುತ್ತದೆ. ಸಿಪ್ಪೆ ಎದ್ದಿರುವ ಜಾಗದಲ್ಲಿ ತೇವಾಂಶ ಕಾಪಾಡಿಕೊಂಡರೆ ಈ ಮರಗಳನ್ನು ಉಳಿಸಿಕೊಳ್ಳಬಹುದು. ನೀಲಗಿರಿ ಮರಗಳು ಚಿಕಿತ್ಸೆ ಬಳಿಕ ಚೇತರಿಸಿಕೊಳ್ಳಲಿವೆ. ಆದರೆ, ಹಳದಿ ಗುಲ್‌ಮೊಹರ್‌ ಮರವನ್ನು ಉಳಿಸಿಕೊಳ್ಳುವುದು ತುಸು ಕಷ್ಟ’ ಎಂದರು.

‘ಸುಮಾರು 15 ವರ್ಷ ಹಳೆಯದಾದ ಮೂರೂ ಮರಗಳು ಸುಮಾರು 12 ಮೀಟರ್‌ಗಳಿಗೂ ಎತ್ತರ ಬೆಳೆದಿದ್ದವು. ಪ್ರತಿಯೊಂದು ಮರವೂ 150 ಸೆಂಟಿ ಮೀಟರ್‌ಗೂ ಹೆಚ್ಚು ಸುತ್ತಳತೆ ಹೊಂದಿತ್ತು’ ಎಂದರು.

‘ನೀಲಗಿರಿ ಮರಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದೆ. ತೊಗಟೆ ಕತ್ತರಿಸಿದ ಬಳಿಕ ಮರವು ನಿಧಾನವಾಗಿ ಸಾಯುತ್ತದೆ. ಬಳಿಕ ಅದನ್ನು ಸಾಗಿಸುವ ಹುನ್ನಾರ ಅವರದು. ನಗರದಲ್ಲಿ ಕೆಂಗೇರಿ ಹಾಗೂ ಜ್ಞಾನಭಾರತಿ ಪ್ರದೇಶದಲ್ಲಿ ಹಸಿರು ವಾತಾವರಣ ಈಗಲೂ ಇದೆ. ಅವುಗಳನ್ನು ಉಳಿಸಿಕೊಳ್ಳಬೇಕಿದೆ’ ಎಂದರು.

**

ಬೆಂಗಳೂರಿನಲ್ಲಿ ತೊಗಟೆಯನ್ನು ಕತ್ತರಿಸಿ ಮರಗಳನ್ನು ಸಾಯಿಸುವ ಕೃತ್ಯಗಳು ಪದೇ ಪದೇ ನಡೆಯುತ್ತಿವೆ. ಇಂತಹ ಕೃತ್ಯಗಳಿಗೆ ಅರಣ್ಯ ಇಲಾಖೆ ಕಡಿವಾಣ ಹಾಕಬೇಕು.

-ವಿಜಯ್‌ ನಿಶಾಂತ್‌, ಸಸ್ಯವೈದ್ಯ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !