ಭಾನುವಾರ, ಜೂನ್ 7, 2020
22 °C
ಕೊರೊನಾ ಹರಡದಂತೆ ಸುರಕ್ಷತಾ ಕ್ರಮಗಳ ಅಳವಡಿಕೆ

ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧವಾದ ಕೆಐಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು : ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕೊರೊನಾ ಸೋಂಕು ಹರಡುವಿಕೆ ತಡೆಯುವ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿಮಾನ ನಿಲ್ದಾಣವು ಪ್ರಯಾಣಿಕರ ಸ್ವಾಗತಕ್ಕೆ ಸಿದ್ಧಗೊಂಡಿದೆ.

'ಕೊರೊನಾದಿಂದ ಪಾರಾಗಲು ಅನುಸರಿಸಬೇಕಾದ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳಿಗೆ ವಿಮಾನ ನಿಲ್ದಾಣದಲ್ಲಿ ಆದ್ಯತೆ ನೀಡಲಾಗಿದೆ. ಮುಖ್ಯವಾಗಿ ಪ್ರಯಾಣಿಕರಿಗೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಎಲ್ಲೆಡೆ ಗುರುತುಗಳನ್ನು ಹಾಕಲಾಗಿದೆ. ಪ್ರಯಾಣಿಕರು ವಿಮಾನ ಹತ್ತುವಾಗ ಮತ್ತು ನಿರ್ಗಮಿಸುವಾಗ ಟರ್ಮಿನಲ್‍ನಲ್ಲಿ ಅಂತರ ಕಾಯ್ದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಜಾಗ ಹಾಗೂ ಆಹಾರ-ಪೇಯಗಳ ಮಳಿಗೆಗಳಲ್ಲಿ ಅಂತರ ಕಾಯ್ದುಕೊಳ್ಳುವಂತೆ ಆಸನ ವ್ಯವಸ್ಥೆ ಮಾಡಲಾಗಿದೆ' ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ವ್ಯವಸ್ಥಾಪಕ ನಿರ್ದೇಶಕ ಹರಿ ಮಾರರ್ ತಿಳಿಸಿದರು.

'ನಾಗರಿಕ ವಿಮಾನಯಾನ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಪ್ರಯಾಣಿಕರ ಥರ್ಮಲ್ ಸ್ಕ್ರೀನಿಂಗ್ ತಪಾಸಣೆ ನಡೆಯಲಿದೆ. ಇದರಲ್ಲಿ ವಿಮಾನ ನಿಲ್ದಾಣ ಆರೋಗ್ಯಾಧಿಕಾರಿ (ಎಪಿಎಚ್‍ಒ) ಕಾರ್ಯನಿರ್ವಹಿಸಲಿದ್ದಾರೆ. ಡಿಜಿಟಲ್ ಸೂಚನಾ ಫಲಕಗಳ ಮೂಲಕ ಕೊರೊನಾ ಸುರಕ್ಷತಾ ಕ್ರಮಗಳನ್ನು ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲಾಗುವುದು' ಎಂದರು.

'ಚೆಕ್-ಇನ್ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸುವುದು ಹಾಗೂ ಸ್ಪರ್ಶಕ್ಕೆ ಅವಕಾಶ ನೀಡದಂತೆ ಆನ್‍ಲೈನ್ ಚೆಕ್-ಇನ್, ಎಲೆಕ್ಟ್ರಾನಿಕ್ ಅಥವಾ ಪ್ರಿಂಟೆಡ್ ಬೋರ್ಡಿಂಗ್ ಪಾಸ್ ಬಳಸಲು ಅವಕಾಶ ಕಲ್ಪಿಸಲಾಗಿದೆ. ನಿಲ್ದಾಣವನ್ನು ಪ್ರತಿದಿನ ಸೋಂಕು ನಿವಾರಕಗಳಿಂದ ಸ್ವಚ್ಛಗೊಳಿಸಲಾಗುವುದು. ಟರ್ಮಿನಲ್ ಪ್ರವೇಶಕ್ಕೂ ಮುನ್ನ ಪ್ರಯಾಣಿಕರು ಮಾಸ್ಕ್ ಧರಿಸುವುದು ಹಾಗೂ 'ಆರೋಗ್ಯ ಸೇತು' ಆ್ಯಪ್ ಡೌನ್‍ಲೋಡ್ ಮಾಡಿಕೊಂಡಿರುವುದು ಕಡ್ಡಾಯವಾಗಿದೆ. ಪ್ರಯಾಣಿಕರ ಬಳಕೆಗಾಗಿ ಟರ್ಮಿನಲ್‍ನ 500 ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಇಡಲಾಗಿದೆ' ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು