ಬುಧವಾರ, ಆಗಸ್ಟ್ 21, 2019
28 °C
25 ನಿಮಿಷದಲ್ಲೇ ನಿಲ್ದಾಣ ತಲುಪಬಹುದು* 9 ತಿಂಗಳಲ್ಲಿ ನಿಲ್ದಾಣ ನಿರ್ಮಾಣ

ವಿಮಾನ ನಿಲ್ದಾಣಕ್ಕೆ ಉಪನಗರ ರೈಲು ಸಂಪರ್ಕ

Published:
Updated:

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇನ್ನು ಒಂಬತ್ತು ತಿಂಗಳಲ್ಲೇ ಉಪನಗರ ರೈಲು ಯೋಜನೆ ಸಂಪರ್ಕ ಕಲ್ಪಿಸಲಾಗುವುದು. ವಿಮಾನ ನಿಲ್ದಾಣದ ಕ್ಯಾಂಪಸ್‌ನಲ್ಲೇ ರೈಲು ನಿಲ್ದಾಣ ಕಾರ್ಯಾರಂಭಗೊಳ್ಳಲಿದ್ದು, ಇಲ್ಲಿಂದ ಟರ್ಮಿನಲ್‌ ತನಕ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ನಿಲ್ದಾಣ ನಿರ್ಮಾಣ ಸಂಬಂಧ ನೈರುತ್ಯ ರೈಲ್ವೆ ಮತ್ತು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ (ಬಿಐಎಎಲ್‌) ನಡುವೆ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ‘ತಾಂತ್ರಿಕ ಸಮನ್ವಯವು ಒಂದು ತಿಂಗಳಿಂದ ಪ್ರಗತಿಯಲ್ಲಿದ್ದು, ಒಂಬತ್ತು ತಿಂಗಳಲ್ಲಿ ರೈಲು ನಿ‍ಲುಗಡೆ ತಾಣ ಆರಂಭವಾಗುವುದು ಖಚಿತ’ ಎಂದು ಬಿಐಎಎಲ್‌ ವಕ್ತಾರರು ಹೇಳಿದರು.

ವಿಮಾನ ನಿಲ್ದಾಣದಿಂದ 3.5 ಕಿ.ಮೀ ದೂರದಲ್ಲಿ ಈ ನಿಲ್ದಾಣ ನಿರ್ಮಾಣವಾಗಲಿದೆ. ಪ್ರಯಾಣಿಕರ ಸಂಚಾರಕ್ಕೆ ಬಿಐಎಎಲ್‌ ಸ್ವಂತ ಬಸ್‌ಗಳ ಸಂಚಾರ ಆರಂಭಿಸಲಿದೆ. 10 ನಿಮಿಷಕ್ಕೂ ಕಡಿಮೆ ಅವಧಿಯ ಪ್ರಯಾಣ ಇದಾಗಲಿದೆ ಎಂದು ಮಾಹಿತಿ ನೀಡಿದರು.

ವಿಮಾನ ಪ್ರಯಾಣಿಕರು ಮತ್ತು ನಿಲ್ದಾಣ ಉದ್ಯೋಗಿಗಳು ಬಿಎಂಟಿಸಿ ಬಸ್ ಮತ್ತು ದುಬಾರಿ ವೆಚ್ಚದ ಕ್ಯಾಬ್‌ಗಳನ್ನು ಅವಲಂಬಿಸಿದ್ದು, ಈ ನಿಲ್ದಾಣ ತಲೆ ಎತ್ತಿದರೆ ಇವರಿಗೆ ಹೆಚ್ಚು ಅನುಕೂಲವಾಗಲಿದೆ.

ವಿಮಾನ ನಿಲ್ದಾಣಕ್ಕೆ ಹೋಗುವ ‌ರೈಲುಗಳು ಯಶವಂತಪುರ ರೈಲು ನಿಲ್ದಾಣದಿಂದ ಆರಂಭವಾಗಲಿವೆ. ಯಲಹಂಕ ನಿಲ್ದಾಣದಲ್ಲಿ ನಿಲುಗಡೆ ನೀಡಿ, ನೇರವಾಗಿ ವಿಮಾನ ನಿಲ್ದಾಣಕ್ಕೆ ಹೋಗಲಿದೆ. ಇಷ್ಟು ದೂರ ಪ್ರಯಾಣಕ್ಕೆ 25 ನಿಮಿಷ ಸಾಕಾಗಲಿದೆ.

ಉದ್ಯೋಗಿಗಳ ಅನುಕೂಲಕ್ಕಾಗಿ ಹೆಬ್ಬಾಳದಿಂದ ವಿಮಾನ ನಿಲ್ದಾಣಕ್ಕೆ ಬಿಎಂಟಿಸಿ ಬಸ್ ಸೇವೆಯನ್ನು ಕಲ್ಪಿಸಲಾಗಿದೆ. ಟ್ರಂಪೆಟ್ ಫ್ಲೈಓವರ್, ಟೋಲ್ ಪ್ಲಾಜಾ, ಚಿಕ್ಕಜಾಲ ಮತ್ತು ಯಲಹಂಕದಲ್ಲಿ ನಿಲುಗಡೆ ಅವಕಾಶವನ್ನೂ ನೀಡಲಾಗಿದೆ. ಈ ನಡುವೆ ವಿಮಾನ ನಿಲ್ದಾಣಕ್ಕೆ ಮೆಟ್ರೊ ರೈಲು ಸಂಪರ್ಕ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ. ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 6 ವರ್ಷ ಬೇಕಾಗಲಿದೆ.

9 ತಿಂಗಳಲ್ಲಿ ರೈಲು ನಿಲುಗಡೆ ತಾಣ ಆರಂಭ

ಯಶವಂತಪುರ ರೈಲು ನಿಲ್ದಾಣದಿಂದ ಸೇವೆಗೆ ಚಾಲನೆ

25 ನಿಮಿಷದಲ್ಲೇ ನಿಲ್ದಾಣ ತಲುಪಬಹುದು

Post Comments (+)