ಉದ್ಯಮಿ ಪುತ್ರನ ಅಪಹರಿಸಿ ₹40 ಲಕ್ಷ ಸುಲಿಗೆ: 10 ಮಂದಿ ಆರೋಪಿಗಳ ಬಂಧನ

7

ಉದ್ಯಮಿ ಪುತ್ರನ ಅಪಹರಿಸಿ ₹40 ಲಕ್ಷ ಸುಲಿಗೆ: 10 ಮಂದಿ ಆರೋಪಿಗಳ ಬಂಧನ

Published:
Updated:
Deccan Herald

ಹುಬ್ಬಳ್ಳಿ: ರಿಯಲ್‌ ಎಸ್ಟೇಟ್ ಉದ್ಯಮಿ ಮಗನನ್ನು ಅಪಹರಿಸಿ ₹40 ಲಕ್ಷ ಸುಲಿಗೆ ಮಾಡಿದ್ದ 10 ಮಂದಿ ಆರೋಪಿಗಳನ್ನು ಉತ್ತರ ಉ‍ಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಶಾನು ಕಣವಿ, ಅಬ್ದುಲ್ ರೆಹಮಾನ, ಸೂರ್ಯಕಾಂತ, ಶಿವರಾಜ, ಮಾರುತಿ, ಭರತ, ಮಹಮ್ಮದ್ ಅಜೀದ್, ರಂಗನಾಥ, ಹರೀಶ ಹಾಗೂ ಧಾರವಡದ ಗೋಪನಕೊಪ್ಪದ ರವಿ ಬಂಧಿತರು. ಆರೋಪಿಗಳಿಂದ ₹26 ಲಕ್ಷ, ಕೃತ್ಯಕ್ಕೆ ಬಳಸಿದ ಆಟೊ ರಿಕ್ಷಾ, ಬೈಕ್  ಜಪ್ತಿ ಮಾಡಿದ್ದಾರೆ.

ಕೇಶ್ವಾಪುರದ ನಿವಾಸಿ ನಜೀರ್ ಅಹ್ಮದ್ ಅವರ 14 ವರ್ಷದ ಮಗ ನಗರದ ಖಾಸಗಿ ಶಾಲೆಯ ವಿದ್ಯಾರ್ಥಿ. ಜುಲೈ30ರಂದು ಆತ ಶಾಲೆಗೆ ಹೋಗಿದ್ದ. ಪ್ರಾರ್ಥನೆಗೆ ಮೊದಲೇ ಅಲ್ಲಿಗೆ ಹೋಗಿದ್ದ ಆರೋಪಿಗಳು ‘ನಿಮ್ಮ ಕಾರು ಚಾಲಕನಿಗೆ ಅಪಘಾತವಾಗಿದೆ. ಮನೆಗೆ ಬರಬೇಕಂತೆ’ ಎಂದು ಹೇಳಿ ಶಾಲೆಯಿಂದ ಹೊರಗೆ ಕರೆದುಕೊಂಡು ಬಂದು ಅಲ್ಲಿಂದ ಅಪಹರಿಸಿದ್ದರು. ಆ ನಂತರ ತಂದೆಗೆ ಕರೆ ಮಾಡಿ ₹1 ಕೋಟಿ ನೀಡಿದರೆ ಬಿಡುಗಡೆ ಮಾಡುವ, ಇಲ್ಲವಾದರೆ ಕೊಲ್ಲುವ ಬೆದರಿಕೆ ಹಾಕಿದ್ದರು. ಅಷ್ಟೊಂದು ಹಣ ನೀಡಲಾಗದು ಎಂದಾಗ ಕೊನೆಗೆ ₹40 ಲಕ್ಷಕ್ಕೆ ಒಪ್ಪಿಕೊಂಡಿದ್ದರು. ಗದಗ ರಸ್ತೆಯ ಕದಮಪುರದಲ್ಲಿ ಹಣ ಪಡೆದು, ಬಾಲಕನನ್ನು ಬಿಟ್ಟು ಕಳುಹಿಸಿದ್ದರು ಎಂದು ಕಮಿಷನರ್ ಎಂ.ಎನ್. ನಾಗರಾಜ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸುಳಿವು ನೀಡಿದ ವಿಶಿಷ್ಟ ಸಂಖ್ಯೆ:
ಮಗ ಮನೆಗೆ ಬಂದ ನಂತರ ನಜೀರ್ ದೂರು ನೀಡಿದ್ದರು. ಅಪಹರಣಕ್ಕೆ ಬಳಸಿದ್ದ ಆಟೊ ರಿಕ್ಷಾದ ಹಿಂದೆ ಇಟಿಪಿಎಸ್00022 ಎಂಬ ಸಂಖ್ಯೆ (ಸಂಚಾರ ವಿಭಾಗದ ಪೊಲೀಸರು ಎಲ್ಲ ಆಟೊಗಳಿಗೆ ವಿಶಿಷ್ಟ ಸಂಖ್ಯೆ ನೀಡುತ್ತಿದ್ದಾರೆ) ಬರೆದಿದ್ದ ಬಗ್ಗೆ ಬಾಲಕ ತನಿಖಾಧಿಕಾರಿಗೆ ಮಾಹಿತಿ ನೀಡಿದ್ದ. ಆ ಆಟೊ ರಿಕ್ಷಾದ ಮಾಲೀಕ ಶಾನು ಎಂದು ಪತ್ತೆ ಮಾಡಿ, ಆತನನ್ನು ವಶಕ್ಕೆ ಪಡೆದು ಉಳಿದ ಆರೋಪಿಗಳನ್ನು ಬಂಧಿಸಲಾಯಿತು ಎಂದು ಅವರು ಮಾಹಿತಿ ನೀಡಿದರು.

ನಜೀರ್ ಅವರ ಬಳಿ ನಳ ಕೆಲಸ ಮಾಡುತ್ತಿದ್ದ ಆರೋಪಿ ಅಬ್ದುಲ್‌ಗೆ ಅವರ ವಹಿವಾಟಿನ ಬಗ್ಗೆ ಸಂಪೂರ್ಣ ಮಾಹಿತಿ ಇತ್ತು. ಮಗನನ್ನು ಅಪಹರಿಸಿದರೆ ಹಣ ಸುಲಿಗೆ ಮಾಡಬಹುದು ಎಂದು ಉಪಾಯ ಮಾಡಿದ ಆತ ಇತರರೊಂದಿಗೆ ಆ ವಿಷಯ ಹಂಚಿಕೊಂಡ. ನಂತರ ಎಲ್ಲರೂ ಸೇರಿ ಅಪಹರಣದ ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದರು. ಹಣಕ್ಕೆ ಬೇಡಿಕೆ ಇಟ್ಟ ನಂತ ಬಾಲಕನ ತಂದೆಯ ಪ್ರತಿಯೊಂದು ನಡೆಯ ಮೇಲೆ ಅವರು ಕಣ್ಣಿಟ್ಟಿದ್ದರು. ಫೋನ್ ಮೂಲಕ ಅದನ್ನು ಅವರಿಗೆ ಹೇಳುತ್ತಿದ್ದರು. ಇದರಿಂದ ಇನ್ನಷ್ಟು ಆತಂಕಕ್ಕೆ ಒಳಗಾದ ನಜೀರ್ ದೂರು ನೀಡಿರಲಿಲ್ಲ. ಆ ನಂತರಷ್ಟೇ ಧೈರ್ಯ ಮಾಡಿ ಪೊಲೀಸರ ಗಮನಕ್ಕೆ ತಂದಿದ್ದರು ಎಂದರು.

ಹಣ ನೀಡಲು ಕಾರಿನಲ್ಲಿ ಬರಬಾರದು, ಬೈಕ್‌ನಲ್ಲಿ ಬರಬೇಕು ಹಾಗೂ ಟ್ಯಾಂಕ್ ಪೂರ್ತಿ ಪೆಟ್ರೋಲ್ ತುಂಬಿಸಿಕೊಂಡು ಬರಬೇಕು ಎಂದು ಷರತ್ತು ಹಾಕಿದ್ದರು. ಗದಗ ರಸ್ತೆಯ ಕದಪುರದ ಸಮೀಪ ಅವರು ಬಂದಾಗ ಅಲ್ಲಿಯೇ ಹೊಲವೊಂದರಲ್ಲಿ ಹಣದ ಬ್ಯಾಗ್ ಎಸೆಯುವಂತೆ ಸೂಚನೆ ನೀಡಿದ್ದರು. ಹಣ ಎಸೆದ ನಂತರ ಮುಂದಕ್ಕೆ ಮೂರು ಕಿ.ಮೀ ಹೋಗಿ ಬರುವಂತೆ ಸಹ ಹೇಳಿದ್ದರು. ಅವರು ಬರುವ ಮೊದಲೇ ಅಪಹರಣಕಾರರು ಹಣ ಎತ್ತಿಕೊಂಡು ಪರಾರಿಯಾಗಿದ್ದರು ಎಂದರು.

ಪ್ರಕರಣದ ಪ್ರಮುಖ ಆರೋಪಿ ಅಫ್ಜಲ್ ತಲೆಮರೆಸಿಕೊಂಡಿದ್ದಾರೆ. ಆರೋಪಿ ಅಬ್ದುಲ್ ಮೇಲೆ ಕೆಲವು ಪ್ರಕರಣಗಳು ದಾಖಲಾಗಿದ್ದವು, ಅವುಗಳಿಂದ ಆತ ಖುಲಾಸೆಗೊಂಡಿದ್ದಾನೆ ಎಂದು ಮಾಹಿತಿ ನೀಡಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ರೇಣುಕಾ ಸುಕುಮಾರ್, ಉತ್ತರ ವಿಭಾಗದ ಎಸಿಪಿ ಪಠಾಣ್, ಇನ್‌ಸ್ಪೆಕ್ಟರ್ ರತನ್ ಕುಮಾರ್ ಜಿರಗ್ಯಾಳ, ಪ್ರಭು ಸುರೀನ ಅವರ ತಂಡ ಆರೋಪಿಗಳನ್ನು ಬಂಧಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !