ಸೆಲ್ಫಿ ತೆಗೆದುಕೊಳ್ಳುವಾಗ ಇರಿದು ಕೊಂದರು!

7

ಸೆಲ್ಫಿ ತೆಗೆದುಕೊಳ್ಳುವಾಗ ಇರಿದು ಕೊಂದರು!

Published:
Updated:

ಬೆಂಗಳೂರು: ಕೆ.ಜಿ.ರಸ್ತೆಯ ಮೈಸೂರು ಬ್ಯಾಂಕ್ ವೃತ್ತದಲ್ಲಿ ಶುಕ್ರವಾರ ರಾತ್ರಿ ದುಷ್ಕರ್ಮಿಗಳು ಗೌತಮ್ ಕೃಷ್ಣ (24) ಎಂಬುವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.

ಕೇರಳದ ಗೌತಮ್, ವಾರದ ಹಿಂದೆ ನಗರಕ್ಕೆ ಬಂದು ಹಲಸೂರು ಗೇಟ್ ಸಮೀಪದ ‘ಸುಂದು ಕಾರ್ಗೋ’ ಟ್ರಾವೆಲ್ಸ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು. ಸ್ನೇಹಿತ ವೈಶಾಖ್ ಜತೆ ರಾತ್ರಿ ಮೆಜೆಸ್ಟಿಕ್‌ಗೆ ಹೋಗಿದ್ದ ಅವರು, ಹೋಟೆಲ್‌ನಲ್ಲಿ ಊಟ ಮಾಡಿಕೊಂಡು 12 ಗಂಟೆ ಸುಮಾರಿಗೆ ಮನೆಗೆ ಮರಳುತ್ತಿದ್ದರು.

‘ನಾನು ಹಾಗೂ ಗೌತಮ್ ಫುಟ್‌ಪಾತ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದೆವು. ಈ ವೇಳೆ ಸ್ಕೂಟರ್‌ನಲ್ಲಿ ಬಂದ ಮೂವರು ಏಕಾಏಕಿ ಗಲಾಟೆ ಪ್ರಾರಂಭಿಸಿದರು. ‘ಇವನೇ ಕಣೋ.. ಇವನೇ ಕಣೋ...’ ಎಂದು ಒಬ್ಬಾತ ಹೇಳುತ್ತಿದ್ದ. ಅವರು ಏನೇನೋ ಕೇಳುತ್ತಿದ್ದರು. ನಮಗೆ ಅಷ್ಟಾಗಿ ಕನ್ನಡ ಭಾಷೆ ಬಾರದ ಕಾರಣ, ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯಿಸುತ್ತಿದ್ದೆವು. ಈ ಹಂತದಲ್ಲಿ ಒಬ್ಬಾತ ಗೌತಮ್‌ನ ಎದೆಗೆ ಚುಚ್ಚಿಬಿಟ್ಟ. ಕೆಲ ಆಟೊ ಚಾಲಕರು ಸ್ಥಳಕ್ಕೆ ಬರುತ್ತಿದ್ದಂತೆಯೇ ಮೂವರೂ ಸ್ಕೂಟರ್‌ನಲ್ಲಿ ಹೊರಟು ಹೋದರು’ ಎಂದು ವೈಶಾಖ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

‘ಸ್ನೇಹಿತನನ್ನು ಕೂಡಲೇ ಆಟೊದಲ್ಲಿ ಆಸ್ಪತ್ರೆಗೆ ಕರೆದೊಯ್ದೆ. ಆದರೆ, ಮಾರ್ಗಮಧ್ಯೆಯೇ ಆತ ಕೊನೆಯುಸಿರೆಳೆದ. ಕತ್ತಲಿನಲ್ಲಿ ಸ್ಕೂಟರ್‌ನ ನೋಂದಣಿ ಸಂಖ್ಯೆಯೂ ಕಾಣಿಸಲಿಲ್ಲ. ಆ ಮೂವರನ್ನು ನೋಡಿದ್ದು ಇದೇ ಮೊದಲು’ ಎಂದು ವೈಶಾಖ್ ಹೇಳಿರುವುದಾಗಿ ಉಪ್ಪಾರಪೇಟೆ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 1

  Frustrated
 • 1

  Angry

Comments:

0 comments

Write the first review for this !