ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಶೀಘ್ರ

7
ಹೃದ್ರೋಗ ವಿಭಾಗ ನಿರ್ವಹಣೆಗೆ ಜಯದೇವ ಸಂಸ್ಥೆಗೆ ಮನವಿ: ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂ

ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭ ಶೀಘ್ರ

Published:
Updated:
Prajavani

ಹುಬ್ಬಳ್ಳಿ: ಸೂಪರ್ ಸ್ಟೆಷಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಉದ್ಘಾಟಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಹೇಳಿದರು.

ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಕಿಮ್ಸ್‌) ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಿಮ್ಸ್‌ ಆವರಣದಲ್ಲಿ ₹150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಣ್ಣ‍ಪುಟ್ಟ ಕೆಲಸಗಳು ಬಾಕಿ ಇವೆ. ಅವುಗಳನ್ನು ಕೂಡಲೇ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ. ಹೃದ್ರೋಗ ಆಸ್ಪತ್ರೆಯ ಕಾಮಗಾರಿಯೂ ಪೂರ್ಣಗೊಂಡಿದ್ದು, ಅದನ್ನು ನಿರ್ವಹಣೆ ಮಾಡುವಂತೆ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಇನ್ನೊಮ್ಮೆ ಮಾತನಾಡಲಾಗುವುದು. ಈ ಹಿಂದೆಯೂ ಈ ಬಗ್ಗೆ ಮಾತನಾಡಲಾಗಿದೆ ಎಂದು ಹೇಳಿದರು.

ಗುತ್ತಿಗೆದಾರರು ವಿಳಂಬ ಮಾಡಿದ ಕಾರಣ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಾಮಗಾರಿ ಇನ್ನೂ ಬಾಕಿ ಇದೆ. ಅದನ್ನು ಸಹ ಆದಷ್ಟು ಬೇಗ ಪೂರ್ಣಗೊಳಿಸಿ ಜನರ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುವುದು. ಅಲ್ಲದೆ ಇನ್ನೂ ₹20 ಕೋಟಿ ಮೊತ್ತವನ್ನು ಮಂಜೂರು ಮಾಡಿ, ಶಸ್ತ್ರ ಚಿಕಿತ್ಸಾ ಕೊಠಡಿ ಸೇರಿದಂತೆ ಅಗತ್ಯ ಸೌಲಭ ಒದಗಿಸಲಾಗುವುದು. ಕೆಲವೇ ದಿನಗಳಲ್ಲಿ ಮಹಿಳಾ ವಿಭಾಗದ ಒಂದು ಭಾಗವನ್ನು ಸ್ಥಳಾಂತರಿಸಲಾಗುವುದು. ಪ್ಲಾಸ್ಟಿಕ್ ಸರ್ಜರಿ ಮತ್ತು ಕ್ಯಾನ್ಸರ್ ಆಸ್ಪತ್ರೆಯನ್ನು ಸಹ ಬಲಪಡಿಸಲಾಗುವುದು ಎಂದು ತಿಳಿಸಿದರು.

ಅಸಮಾಧಾನ: ಮಹಿಳಾ ಮತ್ತು ಮಕ್ಕಳ ವಿಭಾಗದ ನೂತನ ಕಟ್ಟಡವನ್ನು ವೀಕ್ಷಿಸಿದ ಸಚಿವರು, ಕಾಮಗಾರಿ ವಿಳಂಬವಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಒಳ ಚರಂಡಿ ಕಾಮಗಾರಿ ಮಾತ್ರ ಬಾಕಿ ಇದೆ ಎಂಬ ಕಿಮ್ಸ್ ನಿರ್ದೇಶಕರ ಸ್ಪಷ್ಟನೆಗೆ ಅಸಮಾಧಾನ ವ್ಯಕ್ತಪಡಿಸಿದರು. ಗುತ್ತಿಗೆದಾರರು ಸ್ಥಳದಲ್ಲಿ ಇಲ್ಲದಿರುವುದು ಸಹ ಸಚಿವರ ಸಿಟ್ಟಿಗೆ ಕಾರಣವಾಯಿತು. ‘ನಾನು ಬರುವುದು ಗೊತ್ತಿದ್ದರೂ ಏಕೆ ಅವರನ್ನು ಕರೆಯಿಸಲಿಲ್ಲ. ಈಗಲೇ ಕರೆಯಿಸಿ ಅವರೇನು ಮುಂಬೈನಲ್ಲಿ ಇಲ್ಲವಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !