ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸದ ತುಂಬೆಲ್ಲ ಪಟಾ ಪಟಾ... ಗಾಳಿಪಟ...

Last Updated 25 ಡಿಸೆಂಬರ್ 2018, 19:56 IST
ಅಕ್ಷರ ಗಾತ್ರ

ಡಿಸೆಂಬರ್‌ ಚಳಿ ಏರುತ್ತಿದೆ. ಹೊಸವರ್ಷದ ಆರಂಭಕ್ಕೆ ಚಳಿಯ ಜತೆಗೆ ಗಾಳಿಯೂ ಸೇರಿಕೊಂಡಿದೆ. ಆವರಿಸಿಕೊಳ್ಳುತ್ತಿರುವ ಧನುರ್ಮಾಸದ ಅಂಚಿಗೆ ಎಷ್ಟೋ ಜನ ಆಕಾಶವನ್ನು ಜ್ಞಾಪಿಸಿಕೊಳ್ಳುತ್ತಾರೆ. ಏಕೆಂದರೆ, ಗಾಳಿಪಟ ಹಾರಿಸುವುದಕ್ಕೆ ಈ ಸಮಯ ಸಕಾಲವೂ ಹೌದು.

ಗಾಳಿಪಟವೆಂದರೆ ಅದು ಬದುಕಿನ ಸಾಂಕೇತಿಕ ರೂಪ. ಸೂತ್ರ ಕಟ್ಟಿದ ಗಾಳಿಪಟ ಬಾನಿಗೇರಬಹುದು ಅಥವಾ ಗೋತಾ ಹೊಡೆದು ಧರೆಗುರುಳಬಹುದು. ನಮ್ಮ ಬದುಕಿನಲ್ಲಿಯೂ ಇದೇ ರೀತಿ ಗೆಲುವಿರಬಹುದು, ಸೋಲೂ ಇರಬಹುದು. ಸೋತರೆ ಮತ್ತೆ ಸೂತ್ರ ಕಟ್ಟಿ ಗೆಲುವಿನ ಆಗಸಕ್ಕೆ ಏರುವುದೇ ಬದುಕಿನ ಆರೋಹಣ.ಮಕ್ಕಳು ವಿಶೇಷವಾಗಿ ಓದುವುದರಲ್ಲಿ ಅಥವಾ ಶಾಲಾ ಸ್ಪರ್ಧೆಗಳಲ್ಲಿ ಸೋತರೆ ಮತ್ತೆ ಗೆಲುವಿನ ಛಲದೊಂದಿಗೆ ಭರವಸೆಯ ಸೂತ್ರ ಕಟ್ಟಿ ಬಾನಿಗೇರುವ ಧ್ಯೇಯವಿರಬೇಕು. ಗಾಳಿಪಟಗಳ ಆರೋಹಣ-ಅವರೋಹಣವನ್ನು ಇದೇ ರೀತಿ ಮಕ್ಕಳು ತಮ್ಮ ಬದುಕಿನಲ್ಲೂ ಅಳವಡಿಸಬೇಕಾದ ಅನಿವಾರ್ಯತೆ ಇದೆ.

ಈ ನಿಟ್ಟಿನಲ್ಲಿ ಧಾರವಾಡ ಮನಸೂರ ರಸ್ತೆಯಲ್ಲಿರುವಸಾಲಿಮಠ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವರ್ಷದ ಗಾಳಿಪಟ ಉತ್ಸವದಲ್ಲಿ, ಸೂತ್ರದ ಹಿಡಿತದಿಂದ ಬಾನಂಗಳದಲ್ಲಿ ತೇಲಾಡುತ್ತ, ಒದ್ದಾಡುತ್ತ, ನಸು ನಗುತ್ತ, ಮನಸ್ಸಿಗೆ ಮುದ ನೀಡುತ್ತ, ಬಾನು-ಭುವಿಗಳನ್ನು ಅಪ್ಪಿಕೊಳ್ಳಲು ಹಾತೊರೆಯುವ ಗಾಳಿಪಟಗಳ ಚೆಲ್ಲಾಟವೇ ಅದ್ಭುತ. ಕಣ್ಣೆತ್ತಿ ನೋಡುವುದಕ್ಕಿಂತ ಕತ್ತು ಎತ್ತರಿಸಿ ಬಾನಂಗಳದಲ್ಲಿ ಕಣ್ಣು ಪಿಳುಕಿಸುತ್ತ, ಅತ್ತಿಂದಿತ್ತ ಕಣ್ಣೋಟ ಹಾಯಿಸುತ್ತ ಆಕಾಶದಗಲ ಸೂರ್ಯನೆದುರಿಸಿ ಗಾಳಿಪಟಗಳನ್ನು ನೋಡುವ ಅನುಭವವನ್ನು ಮಕ್ಕಳು ಪಡೆದರು.

ವಿದ್ಯಾರ್ಥಿಗಳು, ಪೋಷಕರು ಒಟ್ಟಿಗೆ ಸೇರಿ ವಿಭಿನ್ನ ರೀತಿಯಲ್ಲಿ ಫೈಬರ್‌ ಕಡ್ಡಿ, ಪ್ಲಾಸ್ಟಿಕ್, ಬಟ್ಟೆ, ಬಣ್ಣ, ಬಣ್ಣದ ಕಾಗದ, ತೆಳು ಪ್ಲಾಸ್ಟಿಕ್‌ ಹಾಳೆ, ಬಿದಿರಿನ ಕಡ್ಡಿಗಳನ್ನು ಬಳಸಿ ಆಗಸಕ್ಕೆ ಹಾರಲು ಅಗತ್ಯವಿರುವ ಸೂತ್ರ(ದಾರ) ಬಳಸಿ ಬಂಧಿಸಿ ಗಾಳಿಪಟ ತಯಾರಿಸಿ, ಆಗಸದೆತ್ತರೆತ್ತರಕ್ಕೆ ಗಾಳಿ ಜಾಸ್ತಿ ಇರುವ ಪ್ರದೇಶಕ್ಕೆ ಒಯ್ದು ಎತ್ತರದ ಪ್ರದೇಶದಿಂದ ಪಟ ಹಾರಿಸಿದರು.

ತಾವು ತಂದಿದ್ದ ಗಾಳಿಪಟ ಬಾನೆತ್ತರಕ್ಕೆ ಹಾರುತ್ತಿದ್ದಂತೆ ಅದನ್ನು ನೋಡಿದ ಖುಷಿಯಲ್ಲಿ ಚಿಕ್ಕಮಕ್ಕಳು ಕುಣಿದು ಕುಪ್ಪಳಿದ್ದು ಸಾಮಾನ್ಯವಾಗಿತ್ತು. ಇನ್ನು ಗಾಳಿಯ ರಭಸ ಹೆಚ್ಚಾಗಿ ಪಟ ಭರ್ರನೇ ಮೇಲೆ ಹಾರಿದಾಗ ಭಾಗವಹಿಸಿದವರ ಆನಂದ ಇಮ್ಮಡಿಯಾಗಿತ್ತು. ಗಾಳಿ ಬೀಸಿದಾಗೊಮ್ಮೆ ಪಟಗಳು ಮೇಲೆ ಮೇಲೆ ಹಾರುತ್ತಾ ಸಾಗಿದವು. ಪಟ ಹಾರಿಸುವಲ್ಲಿ ನಿರತರಾದ ಚಿಕ್ಕ ಮಕ್ಕಳಿಗೆ ಅವರ ಪಾಲಕರು ನೆರವಾಗುತ್ತಿದ್ದರು.

ಬೆಳಿಗ್ಗೆ 11.30ಕ್ಕೆ ಆರಂಭವಾದ ಗಾಳಿಪಟ ಉತ್ಸವ ಸಂಜೆ 6 ಗಂಟೆಯವರೆಗೂ ಮುಂದುವರಿದಿತ್ತು. ಮುಂಬೈನ ದಾನುನಗರದಿಂದ 60 ರಿಂದ 70 ವಿಶೇಷವಾದ ಗಾಳಿಪಟಗಳನ್ನು ತರಿಸಲಾಗಿತ್ತು. ಗಾಳಿಪಟ ಉತ್ಸವದಲ್ಲಿ ಧಾರವಾಡ ತಾಲ್ಲೂಕಿನ ಗ್ರಾಮೀಣ ಭಾಗದ ಮಕ್ಕಳು ಆಗಮಿಸಿದ್ದು ವಿಶೇಷವಾಗಿತ್ತು. ಗಾಳಿಪಟ ಹಾರಿಸುವವರನ್ನು ಪ್ರೋತ್ಸಾಹಿಸಲು ಆಗಮಿಸಿದ್ದ ಹಲವಾರು ಜನ ಉತ್ಸವಕ್ಕೆ ಮೆರುಗು ತಂದರು. ಮಕ್ಕಳು ಹಾಗೂ ಪಾಲಕರ ಹುಮ್ಮಸ್ಸಿನಿಂದ ಆಕಾಶದಲ್ಲಿ ಬಗೆ ಬಗೆಯ ಗಾಳಿಪಟಗಳು ಹಾರಾಡಿದವು. ರಾಕೆಟ್ ರೂಪದ, ಪಾರಿವಾಳ , ರಣಹದ್ದು, ಪಕ್ಷಿಗಳ, ಅನುಕೊಂಡ ಹಾವಿನ ರೂಪದ ಹಾಗೂ ವಿವಿಧ ಮಾದರಿಯ ಬಣ್ಣ ಬಣ್ಣದ ಗಾಳಿಪಟಗಳು ಬಾನಂಗಳದಲ್ಲಿ ಹರಿದಾಡಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT