ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆ ತೆಗೆಸಿದ ವರ್ಷದೊಳಗೆ ಕಳಾಹೀನವಾದ ಕೊಡಿಗೆ ಸಿಂಗಸಂದ್ರ ಕೆರೆ

ಕಸ ಹಾಕುವುದಕ್ಕೆ ಕೆರೆಯೇ ತೊಟ್ಟಿ!
Last Updated 2 ಅಕ್ಟೋಬರ್ 2018, 20:01 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಿಗೆ ಇದೊಂದು ಕೆರೆ. ಪ್ಲಾಸ್ಟಿಕ್‌ ತೊಟ್ಟೆಗಳು, ಬಾಟಲಿಗಳು, ಥರ್ಮಾಕೋಲ್‌... ಒಂದು ಕೆರೆಯಲ್ಲಿ ಏನೇನಿರಬಾರದೋ, ಅಂತಹ ಎಲ್ಲ ಕೊಳಕುಗಳು ಇದರಲ್ಲಿ ತುಂಬಿಕೊಂಡಿವೆ. ಅದರ ಜೊತೆಗೆ ಒಳಚರಂಡಿಯ ಕೊಳಚೆ ನೀರು ಕೂಡ ಈ ಕೆರೆಯ ಒಡಲನ್ನು ಸೇರಿ ದುರ್ನಾತ ಬೀರುತ್ತಿದೆ.ಸಿಂಗಸಂದ್ರ ವಾರ್ಡ್‌ನಲ್ಲಿರುವ ಕೊಡಿಗೆ ಸಿಂಗಸಂದ್ರ ಕೆರೆಯ ದುಸ್ಥಿತಿ ಇದು.

‘ಇದರ ಸಂರಕ್ಷಣೆ ಬಗ್ಗೆ ಆಸುಪಾಸಿನ ನಿವಾಸಿಗಳು ಸ್ವಲ್ಪವೇ ಆಸ್ಥೆ ವಹಿಸಿದರೂ ಇದನ್ನೊಂದು ಸುಂದರ ತಾಣವನ್ನಾಗಿ ರೂಪಿಸಬಹುದು. ಆದರೆ, ಇಲ್ಲಿನವರು ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿ ಅರ್ಚನಾ.

‘ಇಲ್ಲಿಗೆ ಸಮೀಪ 40– 50 ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ ಸಮುಚ್ಚಯಗಳಿವೆ. ಇಲ್ಲಿನ ಕೆಲವು ನಿವಾಸಿಗಳು ಕಸವನ್ನು ಪೌರಕಾರ್ಮಿಕರಿಗೆ ನೀಡುವ ಬದಲು ಈ ಕೆರೆಗೆ ಸುರಿಯುತ್ತಾರೆ. ಮಳೆ ಬಂದಾಗ ಆಸುಪಾಸಿನ ಕಸಕಡ್ಡಿಗಳೂ ಈ ಕೆರೆಯನ್ನು ಸೇರಿಕೊಳ್ಳುತ್ತವೆ. ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಶಿ ರಾಶಿ ಪ್ಲಾಸ್ಟಿಕ್‌ ಕಸ ಇದರ ಒಡಲು ಸೇರಿದೆ’ ಎಂದು ಅವರು ವಿವರಿಸಿದರು.

ಇದರಲ್ಲಿ ಬೆಳೆದಿದ್ದ ಕಳೆ ಸಸ್ಯಗಳನ್ನು ವರ್ಷದ ಹಿಂದೆ ತೆರವುಗೊಳಿಸಲಾಗಿತ್ತು. ಬಿಬಿಎಂಪಿ ವತಿಯಿಂದ ಇದಕ್ಕೆ ಕಲ್ಲಿನ ದಂಡೆಯನ್ನು ನಿರ್ಮಿಸಲಾಗಿತ್ತು. ಕಳೆ ಗಿಡಗಳನ್ನು ತೆರವುಗೊಳಿಸಿದಾಗ ಸ್ವಚ್ಛ ನೀರಿನಿಂದ ಕಂಗೊಳಿಸುತ್ತಿದ್ದ ಈ ಜಲಮೂಲದ ಈಗಿನ ಸ್ಥಿತಿ ದೇವರಿಗೇ ಪ್ರೀತಿ ಎಂಬಂತಿದೆ.

‘ಕೆರೆಯ ಪುನರುಜ್ಜೀವನಕ್ಕಾಗಿ ಮೊದಲ ಹಂತದ ಕಾಮಗಾರಿಗೆ ₹2 ಕೋಟಿ ಖರ್ಚು ಮಾಡಲಾಗಿದೆ. ದುರಸ್ತಿಯ ಬಳಿಕ ಇದರ ನಿರ್ವಹಣೆಯನ್ನು ಯಾರಿಗೂ ವಹಿಸಿಲ್ಲ. ಹಾಗಾಗಿ ಇದು ಮತ್ತೆ ಕಸದ ತೊಟ್ಟಿಯಂತಾಗಿದೆ’ ಎಂದು ಸ್ಥಳೀಯ ಪಾಲಿಕೆ ಸದಸ್ಯೆ ಶಾಂತಾ ಬಾಬು ಹೇಳುತ್ತಾರೆ.

‘ಆಸುಪಾಸಿನಲ್ಲಿರುವ ಕೆಲವು ಕಾರ್ಖಾನೆಗಳ ಕಲುಷಿತ ನೀರು ಹಾಗೂ ಒಳಚರಂಡಿ ನೀರನ್ನು ಶುದ್ಧೀಕರಿಸದೆಯೇ ಬಿಡುತ್ತಿರುವುದೇ ಈ ದುಸ್ಥಿತಿಗೆ ಕಾರಣ. ಈ ಕೆರೆಗೆ ಕಸ ಹಾಕದಂತೆ ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತೇವೆ. ಜಲಮೂಲವವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾದರೆ ಸ್ಥಳೀಯರ ಸಹಕಾರವೂ ಅಗತ್ಯ’ ಎಂದು ಅಭಿಪ್ರಾಯಪಡುತ್ತಾರೆ.

‘ಕೆರೆಗೆ ಬೇಲಿಯನ್ನು ಅಳವಡಿಸುವ ಹಾಗೂ ದಂಡೆಯಲ್ಲಿ ವಿಹಾರ ಪಥವನ್ನು ನಿರ್ಮಿಸಲಾಗುತ್ತದೆ. ಈ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಉದ್ದೇಶದಿಂದ ಇಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸುವ ಉದ್ದೇಶವಿದೆ. ಈ ಬಗ್ಗೆ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದೇವೆ. ಮಂಜೂರಾತಿ ಇನ್ನೂ ಸಿಕ್ಕಿಲ್ಲ’ ಎಂದು ವಿವರಿಸುತ್ತಾರೆ. ‘ಎಸ್‌ಟಿಪಿ ಅಳವಡಿಸುವುದಕ್ಕೆ ಅನುದಾನ ಮಂಜೂರಾಗಿಲ್ಲ’ ಎಂದು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

‘ಉಳಿದಿಲ್ಲ ಗಿಡಗಳು’

‘ಕೆರೆಯ ಆಸುಪಾಸಿನ ಪರಿಸರದಲ್ಲಿ ಕಳೆದ ವರ್ಷ ಗಿಡಗಳನ್ನು ನೆಡಲಾಗಿತ್ತು. ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಬಹುತೇಕ ಗಿಡಗಳು ಬದುಕಿ ಉಳಿದಿಲ್ಲ’ ಎಂದು ಅರ್ಚನಾ ಹೇಳುತ್ತಾರೆ.

‘ಈ ಕೆರೆ ಉಳಿಸಲು ಸ್ಥಳೀಯರು ಎಲ್ಲರೂ ಒಂದಾಗಬೇಕು. ಬಿಬಿಎಂಪಿ ಅದಕ್ಕೆ ಪೂರಕ ನೆರವು ನೀಡಬೇಕು. ಇದನ್ನು ಉಳಿಸುವ ಬಗ್ಗೆ ಸಮಗ್ರ ಯೋಜನೆ ರೂಪಿಸಬೇಕು’ ಎಂದು ಅವರು ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT