ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋರಿಕೆಗಷ್ಟೇ ಸರ್ಕಾರಕ್ಕೆ ಕನ್ನಡ ಕಾಳಜಿ

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ಆರೋಪ
Last Updated 18 ಜೂನ್ 2018, 9:41 IST
ಅಕ್ಷರ ಗಾತ್ರ

ಹೊಸಪೇಟೆ: ‘ಸರ್ಕಾರ ಕನ್ನಡ ಭಾಷೆಯ ಬಗ್ಗೆ ಕೇವಲ ಮಾತನಾಡುತ್ತಿದೆ ಹೊರತುಕಳಕಳಿಯಿಂದ ಅದನ್ನು ಉಳಿಸಿ, ಬೆಳೆಸುವ ಕೆಲಸ ಮಾಡುತ್ತಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ ದೂರಿದರು.

ತಾಲ್ಲೂಕಿನ ಕಮಲಾಪುರದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕದಿಂದ ಆಯೋಜಿಸಿದ್ದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ‘ಕಮಲಸಿರಿ’ ಸ್ಮರಣ ಸಂಚಿಕೆ ಹಾಗೂ ಲೇಖಕಿ ಎ. ನಾಗವೇಣಿ ಅವರ ‘ಹೂವಿನಹಡಗಲಿ ತಾಲ್ಲೂಕಿನ ದೇವಾಲಯಗಳು ಮತ್ತು ಶಾಸನಗಳ ಅಧ್ಯಯನ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

‘ಕನ್ನಡದ ಬಹುತೇಕ ಕೆಲಸಗಳು ತೋರಿಕೆಗೆ ಆಗುತ್ತಿವೆ. ಅದಕ್ಕೆ ತಾಜಾ ನಿದರ್ಶನ ಜಿಲ್ಲೆಯ ಗಡಿನಾಡ ಶಾಲೆಗಳು. ಶಾಲೆಗಳು ಆರಂಭವಾಗಿ ಹಲವು ದಿನಗಳು ಕಳೆದಿವೆ. ಆದರೆ, ಇಂದಿನವರೆಗೆ ಸರ್ಕಾರ ಪುಸ್ತಕಗಳನ್ನು ಪೂರೈಸಿಲ್ಲ. ಕಚೇರಿಗಳಲ್ಲಿ ಕನ್ನಡ ಕಟ್ಟುನಿಟ್ಟಿನಿಂದ ಜಾರಿಗೆ ಆಗುತ್ತಿಲ್ಲ. ಕನ್ನಡವನ್ನು ಕನ್ನಡಿಗರು ಮೈಗೂಡಿಸಿಕೊಳ್ಳುವವರೆಗೆ ಕನ್ನಡ ಬೆಳೆಯುವುದಿಲ್ಲ. ಆದರೆ, ಸಾಹಿತ್ಯ ಪರಿಷತ್ತು ಯಾರನ್ನೂ ನೆಚ್ಚಿಕೊಳ್ಳದೆ ಕನ್ನಡ‌ ಉಳಿಸಿ, ಬೆಳೆಸುವ ಕೆಲಸ ಮುಂದುವರಿಸಿಕೊಂಡು ಹೋಗುತ್ತಿದೆ’ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಕೆ. ಪನ್ನಂಗಧರ ಮಾತನಾಡಿ, ‘ಸ್ಥಳೀಯ ಜನರ ಆಚಾರ ವಿಚಾರ, ಸಂಸ್ಕೃತಿ, ಜಾನಪದದ ಮೇಲೆ ಸ್ಮರಣ ಸಂಚಿಕೆಯಲ್ಲಿ ಬೆಳಕು ಚೆಲ್ಲುವ ಲೇಖನಗಳಿವೆ. ಬಹುತೇಕ ಲೇಖನಗಳು ಕಮಲಾಪುರದ ಹೊರ ಆವರಣವನ್ನು ಗುರುತಿಸಿವೆ ಹೊರತು ಅದರ ಒಳಹೊಕ್ಕುವ ಪ್ರಯತ್ನ ಮಾಡಿಲ್ಲ’ ಎಂದು ಹೇಳಿದರು.

‘ಕಮಲಾಪುರದ ಜನ ಅನ್ಯಭಾಗದ ಜನರೊಂದಿಗೆ ಹೊಂದಿರುವ ಸಾಂಸ್ಕೃತಿಕ ಕೊಡು ಕೊಳ್ಳುವಿಕೆ, ನಾಯಕ ಸಮುದಾಯದ ಆಚಾರ ವಿಚಾರಗಳ ಬಗ್ಗೆ ಗಮನ ಹರಿಸುವ ಅಗತ್ಯವಿದೆ’ ಎಂದರು.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಹಾಗೂ ಪುರಾತತ್ವ ವಿಭಾಗದ ಪ್ರಾಧ್ಯಾಪಕ ಎಚ್‌.ತಿಪ್ಪೇಸ್ವಾಮಿ ಮಾತನಾಡಿ, ‘ಜಾಗತೀಕರಣದಿಂದ ನಮ್ಮ ಪರಂಪರೆ, ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಇಂಥಹ ಸಂದರ್ಭದಲ್ಲಿ ನಾಗವೇಣಿ ಅವರು ಹೂವಿನಹಡಗಲಿ ತಾಲ್ಲೂಕಿನ ದೇವಾಲಯಗಳು, ಶಾಸನಗಳ ಮೇಲೆ ಬೆಳಕು ಚೆಲ್ಲಿರುವುದು ಸ್ವಾಗತಾರ್ಹ. ಮುಂದಿನ ಪೀಳಿಗೆಗೆ ಅವರ ಪರಂಪರೆ ತಿಳಿದುಕೊಳ್ಳಲು ಸಹಾಯವಾಗಲಿದೆ’ ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಸಂಡೂರಿನ ಬಸವಪ್ರಭು ಸ್ವಾಮೀಜಿ, ‘ಜಿಲ್ಲೆಯಲ್ಲಿ ಅನೇಕ ಕೈಗಾರಿಕೆಗಳಿವೆ. ಅಲ್ಲಿ ಶೇ 80ರಷ್ಟು ಉದ್ಯೋಗಾವಕಾಶಗಳು ಸ್ಥಳೀಯ ಕನ್ನಡಿಗರಿಗೆ ಸಿಗುವಂತೆ ಮಾಡಬೇಕು. ಆಗ ಕನ್ನಡ ಹಾಗೂ ಕನ್ನಡಿಗರು ಉಳಿಯಲು ಸಾಧ್ಯ’ ಎಂದರು.

‘ಹಂಪಿ ಕರ್ನಾಟಕದ ಸ್ಪೂರ್ತಿಧಾಮ ಇದ್ದಂತೆ. ಕರ್ನಾಟಕ ಏಕೀಕರಣದ ಸಂಭ್ರಮವನ್ನು ಆಲೂರು ವೆಂಕಟರಾಯರು ಹಂಪಿಯಲ್ಲಿ ಆಚರಿಸಿದ್ದರು. ವಿಜಯನಗರ ಅರಸರು ಕಲೆ, ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಿದ್ದರು. ಅಂಥ ನೆಲದಲ್ಲಿ ಈಗಲೂ ಸಾಹಿತ್ಯ ಚಟುವಟಿಕೆಗಳು ಮುಂದುವರಿಯುತ್ತಿರುವುದು ಒಳ್ಳೆಯ ಬೆಳವಣಿಗೆ’ ಎಂದು ಹೇಳಿದರು.

ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ದಯಾನಂದ ಕಿನ್ನಾಳ್‌, ಮುಖಂಡರಾದ ಎನ್‌. ಓಬಯ್ಯ, ಈಡಿಗರ ಚಂದ್ರಪ್ಪ, ನಿವೃತ್ತ ಶಿಕ್ಷಕ ಮಾ.ಬ. ಸೋಮಣ್ಣ, ಲೇಖಕಿ ಎ. ನಾಗವೇಣಿ, ಎಂ.ಎ. ನಾಗನಗೌಡ ಇದ್ದರು.

ಗಡಿನಾಡಿನಲ್ಲಿ ಅನ್ಯಭಾಷಿಕರು ಅವರ ಸಂಸ್ಕೃತಿ, ಭಾಷೆ ನಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿದ್ದಾರೆ. ಗಡಿಭಾಗದ ಕನ್ನಡಿಗರು ಕಾವಲಿನ ರೀತಿಯಲ್ಲಿ ಕನ್ನಡವನ್ನು ಉಳಿಸಬೇಕಿದೆ.
ಸಿದ್ದರಾಮ ಕಲ್ಮಠ, ಜಿಲ್ಲಾ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT