ಭಾನುವಾರ, ಡಿಸೆಂಬರ್ 15, 2019
26 °C

ನೇಮಕಾತಿ ವಿಳಂಬ: ಪ್ರತಿಭಟನೆ, ಕೆಪಿಎಸ್‌ಸಿ ಧೋರಣೆ ಖಂಡಿಸಿದ ಅಭ್ಯರ್ಥಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ವಿವಿಧ ಇಲಾಖೆಗಳ ನೇಮಕಾತಿ ವಿಳಂಬ ಧೋರಣೆ ಖಂಡಿಸಿ ನೂರಾರು ಅಭ್ಯರ್ಥಿಗಳು ಕೆಪಿಎಸ್‌ಸಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

ಶಾಸಕ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಸರ್ಕಾರಕ್ಕೂ ಕೆಪಿಎಸ್‌ಸಿ ಸಂಬಂಧವಿಲ್ಲದಂತೆ ಕುಳಿತಿವೆ. ಕೆಪಿಎಸ್‌ಸಿ ಸೋಮಾರಿಯಂತೆ ವರ್ತಿಸುತ್ತಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

‘2015ನೇ ವೃಂದದ ಕೆಪಿಎಸ್‌ಸಿ ಪರೀಕ್ಷೆಗಾಗಿ ಅಧಿಸೂಚನೆ ಹೊರಡಿಸಿತ್ತು. ಬಳಿಕ 2017ರ ಆಗಸ್ಟ್‌ ಮತ್ತು ಡಿಸೆಂಬರ್‌ನಲ್ಲಿ ಪ್ರಾಥಮಿಕ ಮತ್ತು ಮುಖ್ಯ ಪರೀಕ್ಷೆ ನಡೆಸಿತ್ತು. ವರ್ಷವಾದರೂ ಫಲಿತಾಂಶ ಪ್ರಕಟವಾಗಿಲ್ಲ. ಈ ಕುರಿತು ಸರ್ಕಾರಕ್ಕೂ ಪತ್ರ ಬರೆದಿದ್ದೇವೆ. ಕೆಪಿಎಸ್‌ಸಿ ಅಧ್ಯಕ್ಷರೊಂದಿಗೆ ಮಾತನಾಡಿದರೂ ಪ್ರಯೋಜನವಾಗಿಲ್ಲ’ ಎಂದು ಉದ್ಯೋಗಾಂಕ್ಷಿಗಳು ಬೇಸರ ವ್ಯಕ್ತಪಡಿಸಿದರು.

‘ನೇಮಕಾತಿ ಆಯ್ಕೆ ಪ್ರಕ್ರಿಯೆಗೆ ಆಯೋಗ ಅಧಿಸೂಚನೆ ಹೊರಡಿಸುತ್ತದೆ. ಆದರೆ, ಆಯ್ಕೆ ಪ್ರಕ್ರಿಯೆಯನ್ನು ಮಾತ್ರ ತಡ ಮಾಡುತ್ತದೆ. ಇದರಿಂದ ವಯೋಮಿತಿ ಮತ್ತು ನಿರುದ್ಯೋಗದ ಸಮಸ್ಯೆ ಎದುರಾಗುತ್ತದೆ. ನಮ್ಮ ಭವಿಷ್ಯವನ್ನೂ ಅಂಧಕಾರಕ್ಕೆ ದೂಡುತ್ತಿದೆ. ಎರಡು ವರ್ಷವಾದರೂ ಬೆರಳಚ್ಚುಗಾರ (ಟೈಪಿಸ್ಟ್‌) ಹುದ್ದೆಗಳ ಆಯ್ಕೆ ಪಟ್ಟಿ, ಅಬಕಾರಿ, ಆರೋಗ್ಯ ನೀರಿಕ್ಷಕ ವಿವಿಧ ಇಲಾಖೆಗಳ ಹುದ್ದೆಗಳ ಪಟ್ಟಿ ಪ್ರಕಟಿಸಿಲ್ಲ’ ಎಂದು ಅಳಲು ತೋಡಿಕೊಂಡರು.

ಸುರೇಶ್‌ ಕುಮಾರ್‌, ‘ಕೆಪಿಎಸ್‌ಸಿ ವಿಳಂಬ ನೀತಿಯಿಂದ ಅಭ್ಯರ್ಥಿಗಳ ಭವಿಷ್ಯ ಮಂಕಾಗುತ್ತಿದೆ. ಇದು ಕೆಪಿಎಸ್‌ಸಿ ಅಥವಾ ಸರ್ಕಾರದ ಪ್ರಮಾದವೋ ತಿಳಿಯುತ್ತಿಲ್ಲ. ಕೂಡಲೇ ಪಟ್ಟಿ ಪ್ರಕಟಿಸಿ, ಆದೇಶ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

ಕೆಪಿಎಸ್‌ಸಿ ಅಧ್ಯಕ್ಷ ಶ್ಯಾಮ್‌ಭಟ್‌ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. 

ಶ್ಯಾಮ್‌ಭಟ್, ‘ಕೆಲವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದೆ. ನಾಲ್ಕೈದು ದಿನಗಳಲ್ಲಿ ಅಬಕಾರಿ ಗಾರ್ಡ್‌ ಪಟ್ಟಿ, ಜತೆಗೆ ಆರೋಗ್ಯ ಸಹಾಯಕರ ಪಟ್ಟಿಯೂ ಬಿಡುಗಡೆ ಆಗಲಿದೆ. ಯಾರೊಬ್ಬರೂ ಆತಂಕ ಪಡಬೇಡಿ’ ಎಂದು ಹೇಳಿದರು. ಬಳಿಕ ಅಭ್ಯರ್ಥಿಗಳು ಪ್ರತಿಭಟನೆ
ವಾಪಸ್‌ ಪಡೆದರು.

* ಡಿ.22ರವರೆಗೂ ಗಡುವು ನೀಡಿದ್ದೇವೆ. ಈ ಕುರಿತು ಅಧಿವೇಶನದಲ್ಲೂ ಚರ್ಚಿಸಬೇಕು. ಇಲ್ಲವಾದಲ್ಲಿ ಡಿ.26ರಂದು ಮತ್ತೆ ಕೆಪಿಎಸ್‌ಸಿ ಕದ ಬಡಿಯುತ್ತೇವೆ

ಸುರೇಶ್‌ ಕುಮಾರ್, ಶಾಸಕ 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು