ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್‌.ಮಾರುಕಟ್ಟೆ: ರಾತ್ರೋರಾತ್ರಿ ಪುತ್ಥಳಿ

Last Updated 13 ಡಿಸೆಂಬರ್ 2018, 19:41 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ವೃತ್ತದಲ್ಲಿರುವ ಬಿಬಿಎಂಪಿ ಜಾಗದಲ್ಲಿ ರಾತ್ರೋರಾತ್ರಿ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿ ಪ್ರತ್ಯಕ್ಷವಾಗಿದೆ. ಅದನ್ನು ಯಾರು, ಯಾವಾಗತಂದಿಟ್ಟರು ಎಂಬುದು ಯಾರಿಗೂ ಗೊತ್ತಿಲ್ಲ. ಈ ಘಟನೆಯಿಂದ ಇಕ್ಕಟ್ಟಿಗೆ ಸಿಲುಕಿರುವ ಬಿಬಿಎಂಪಿ ಅಧಿಕಾರಿಗಳು, ಪುತ್ಥಳಿ ತಂದಿಟ್ಟವರನ್ನು ಪತ್ತೆ ಹಚ್ಚುವಂತೆ ಸಿಟಿ ಮಾರ್ಕೆಟ್ ಪೊಲೀಸರಿಗೆ ದೂರು ನೀಡಿದ್ದಾರೆ.

119ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಯ ಇಂದಿರಾ ಕ್ಯಾಂಟಿನ್ ಹಿಂಭಾಗದಲ್ಲೇ ಬಿಬಿಎಂಪಿ ಜಾಗವಿದೆ. ಅದನ್ನು ಯಾರೂ ಒತ್ತುವರಿ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಜಾಗದ ಸುತ್ತಲೂ ಕಬ್ಬಿಣದ ಗ್ರೀಲ್‌ಗಳನ್ನು ಅಳವಡಿಸಲಾಗಿದೆ. ಆ ಗ್ರೀಲ್‌ಗಳನ್ನು ಮುರಿದು ಜಾಗದೊಳಗೆ ನುಗ್ಗಿದ್ದ ಅಪರಿಚಿತರು, ರಾತ್ರೋರಾತ್ರಿ ಪುತ್ಥಳಿಇರಿಸಿ, ಪೂಜೆ ಸಲ್ಲಿಸಿ ಹೋಗಿದ್ದಾರೆ.

‘ಡಿಸೆಂಬರ್ 5ರಂದು ರಾತ್ರಿ 10.30 ಗಂಟೆಯಿಂದ ಮರುದಿನ ಬೆಳಿಗ್ಗೆ 6.30 ಗಂಟೆ ಅವಧಿಯಲ್ಲಿ ಯಾರೋ ಅಪರಿಚಿತರು, ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ನಸುಕಿನಲ್ಲಿ ಗಸ್ತಿನಲ್ಲಿದ್ದಸಹಾಯಕ ಎಂಜಿನಿಯರ್ ವೆಂಕಟೇಶ್‌, ಪುತ್ಥಳಿ ಗಮನಿಸಿ ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳ ಪರಿಶೀಲನೆ ನಡೆಸಿದಾಗ ಪುತ್ಥಳಿಯನ್ನು ಅಕ್ರಮವಾಗಿ ಸ್ಥಾಪನೆ ಮಾಡಿರುವುದು ಗೊತ್ತಾಯಿತು’ ಎಂದು ಕೆಂಪೇಗೌಡ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್‌.ಪಿ.ನಾಗರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಬಿಎಂಪಿ ಜಾಗದಲ್ಲಿ 5 ಅಡಿ ಎತ್ತರದ ಚೌಕಾಕಾರದ ಇಟ್ಟಿಗೆ ಗೋಡೆ ನಿರ್ಮಿಸಿರುವ ಅಪರಿಚಿತರು, ಆ ಗೋಡೆ ಮೇಲೆ ಡಾ. ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿ ಸ್ಥಾಪಿಸಿದ್ದಾರೆ. ಸಂಘರ್ಷಕ್ಕೆ ಕಾರಣವಾಗುವ ಉದ್ದೇಶದಿಂದಲೇ ಅಪರಿಚಿತರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಅವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದೇವೆ’ ಎಂದು ಅವರು ಹೇಳಿದರು.

ಸರ್ಕಾರದ ಆದೇಶ ಉಲ್ಲಂಘನೆ: ‘ಸರ್ಕಾರಿ ಜಾಗದಲ್ಲಿ ಗಣ್ಯವ್ಯಕ್ತಿಗಳ ಪುತ್ಥಳಿ ಸ್ಥಾಪನೆ ಮಾಡುವುದು ಸೂಕ್ತವಲ್ಲವೆಂದು ರಾಜ್ಯ ಸರ್ಕಾರ 2012ರ ಜೂನ್ 11ರಂದು ಆದೇಶ ಹೊರಡಿಸಿದೆ. ಅದನ್ನು ಉಲ್ಲಂಘಿಸಿ ಕೆ.ಆರ್.ಮಾರುಕಟ್ಟೆಯಲ್ಲಿ ಅಂಬೇಡ್ಕರ್ ಅವರ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ’ ಎಂದು ದೂರಿನಲ್ಲಿ ನಾಗರಾಜು ತಿಳಿಸಿದ್ದಾರೆ.

ಪುತ್ಥಳಿ ತೆರವು ಗೊಂದಲ

ಪುತ್ಥಳಿಯನ್ನು ಯಾರು ತೆರವು ಮಾಡಬೇಕು ಎಂಬ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಪೊಲೀಸರ ನಡುವೆಯೇ ಗೊಂದಲ ಉಂಟಾಗಿದೆ.

‘ಪೊಲೀಸರಿಗೆ ದೂರು ಕೊಟ್ಟಿದ್ದೇವೆ. ಆರೋಪಿಗಳನ್ನು ಅವರೇ ಪತ್ತೆ ಹಚ್ಚಬೇಕು. ಅದೇ ರೀತಿ ಪುತ್ಥಳಿ ತೆರವಿಗೂ ಅವರೇ ಮೊದಲಿಗೆ ಕ್ರಮ ಕೈಗೊಳ್ಳಬೇಕು. ಅದಕ್ಕೆ ನಾವು ಸಹಕಾರ ನೀಡಲಿದ್ದೇವೆ’ ಎಂದು ಎಂಜಿನಿಯರ್ ನಾಗರಾಜು ಹೇಳಿದರು.

ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು, ‘ಎಫ್‌ಐಆರ್ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಪುತ್ಥಳಿ ತೆರವಿಗೆ ಬಿಬಿಎಂಪಿ ಅಧಿಕಾರಿಗಳೇ ಮೊದಲಿಗೆ ಕ್ರಮ ಕೈಗೊಳ್ಳಬೇಕು. ತೆರವು ವೇಳೆ ಅವರಿಗೇನಾದರೂ ಭದ್ರತೆ ಬೇಕಾದರೆ ಒದಗಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT