ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮೇಳಕ್ಕೆ ‘ಕರಿ ಸೈನಿಕರ’ ಲಗ್ಗೆ

ಕಸದಿಂದ ಮೇವು ಹೊಸ ತಂತ್ರ: ನ್ಯೂಜಿಲೆಂಡ್‌ನ ವಿಜ್ಞಾನಿ ನೀಲ್‌ ಬಿರ್ರೆಲ್‌ ಅಧ್ಯಯನ
Last Updated 15 ನವೆಂಬರ್ 2018, 19:35 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಕೃಷಿ ಮೇಳಕ್ಕೆ ‘ಕರಿ ಸೈನಿಕ’ರು ಲಗ್ಗೆ ಇಟ್ಟಿದ್ದಾರೆ. ಇವರು ಅಂಥಿಂಥ ಸೈನಿಕರಲ್ಲ. ಎಷ್ಟೇ ಜೈವಿಕ ಕಸವನ್ನು ರಾಶಿ ಹಾಕಿದರೂ ಎರಡೇ‌ ವಾರಗಳೊಳಗೆ ಮುಕ್ಕಿ ತಿನ್ನಬಲ್ಲ ಮಹಾನ್‌ ಶಕ್ತಿಶಾಲಿಗಳು. ‘ರಕ್ತಬೀಜಾಸುರ’ನಂತೆ ತಮ್ಮ ಸಂತತಿಯನ್ನು ಸಾವಿರ ಪಟ್ಟು ಹೆಚ್ಚಿಸಿಕೊಳ್ಳುವ ಸಾಮರ್ಥ್ಯವುಳ್ಳವರು!

ಹೌದು, ಇಲ್ಲಿ ಹೇಳ ಹೊರಟಿರುವುದು ಮಹಾನಗರಗಳನ್ನು ಕಸದ ಸಮಸ್ಯೆಯ ಕಬಂಧಬಾಹುಗಳಿಂದ ಮುಕ್ತಗೊಳಿಸುವ ಸಾಮರ್ಥ್ಯ ಹೊಂದಿರುವ ‘ಬ್ಲ್ಯಾಕ್‌ ಸೋಲ್ಜರ್‌’ ಹುಳುಗಳ (ವೈಜ್ಞಾನಿಕ ಹೆಸರು: ಹರ್ಮೆಷಿಯ ಇಲ್ಯುಕಾಸ್‌) ಬಗ್ಗೆ.

ಕೃಷಿ ಮೇಳದಲ್ಲಿ ಈ ಹುಳುಗಳ ಬಗ್ಗೆ ತಿಳಿದುಕೊಳ್ಳಲು ಗುರುವಾರ ಜನ ಸಾಲುಗಟ್ಟಿದ್ದರು. ಇವುಗಳ ಸಂತಾನಾಭಿವೃದ್ಧಿ ವಿಧಾನವನ್ನು ಅಧ್ಯಯನ ಮಾಡಿರುವ ನ್ಯೂಜಿಲೆಂಡ್‌ನ ವಿಜ್ಞಾನಿ ನೀಲ್‌ ಬಿರ್ರೆಲ್‌ ಅವರು ಈ ಹುಳುಗಳಿಂದಾಗುವ ಪ್ರಯೋಜನಗಳ ಬಗ್ಗೆ ಆಸಕ್ತರಿಗೆ ವಿವರಿಸಿದರು.

‘ಕರಿ ಸೈನಿಕ ಹುಳುವಿನ ಮೊಟ್ಟೆಗಳನ್ನು ಜೈವಿಕ ಕಸದ ಮೇಲೆ ಹಾಕಿದರೆ ಸಾಕು. ಅವು ಲಾರ್ವಾಗಳಾಗಿ ಪರಿವರ್ತನೆ ಹೊಂದಿ ಕಸವನ್ನೆಲ್ಲ ತಿನ್ನುತ್ತವೆ. ಕಸವು ಹುಳುವಿನ ರೂಪದ ಪ್ರೋಟೀನ್‌ ಆಗಿ ಮಾರ್ಪಾಡಾಗುತ್ತದೆ. 1 ಟನ್‌ ಕಸದಿಂದ 600 ಕಿಲೊ ಗ್ರಾಂನಷ್ಟು ಪ್ರೋಟೀನ್‌ ಪಡೆಯಬಹುದು. ಈ ಹುಳುಗಳನ್ನು ಕೋಳಿಗಳಿಗೆ, ಹಂದಿಗಳಿಗೆ ಆಹಾರವಾಗಿ ಬಳಸಬಹುದು ಅಥವಾ ಅವುಗಳಿಂದ ಪ್ರೋಟೀನ್‌ ಸಾರವನ್ನು ತೆಗೆದು ಉಪ ಉತ್ಪನ್ನಗಳನ್ನು ತಯಾರಿಸಬಹುದು’ ಎಂದು ಹೆಕ್ಸಾ ಸೈಕಲ್‌ ಸ್ಟಾರ್ಟ್‌ಅಪ್‌ನ ನಿರ್ದೇಶಕರಾಗಿರುವ ನೀಲ್‌ ಬಿರ್ರೆಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹುಳುಗಳು ಕಸವನ್ನು ಸಾವಯವ ಗೊಬ್ಬರವನ್ನಾಗಿಯೂ ಪರಿವರ್ತಿಸುತ್ತವೆ. ಅವುಗಳ ಲಾರ್ವದಲ್ಲಿರುವ ಪೆಪ್ಟೈಡ್‌ಗಳು ಇ– ಕೋಲೈ, ಸಾಲ್ಮೊನೆಲ್ಲಾದಂತಹ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತವೆ’ ಎಂದರು.

‘ಈ ಹುಳುಗಳ ನಿಯಂತ್ರಿತ ಸಂತಾನೋತ್ಪಾದನೆ, ಅವುಗಳ ಮೊಟ್ಟೆಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸುವುದುನಮ್ಮ ಮುಂದಿದ್ದ ಸವಾಲು. ಇದರಲ್ಲಿ ನಾವು ಯಶಸ್ಸು ಕಂಡಿದ್ದೇವೆ. ಕಸ ವಿಲೇವಾರಿ ಸಮಸ್ಯೆಗೆ ಉತ್ತರವಾಗಬಲ್ಲ ಈ ಹುಳುಗಳ ಬಗ್ಗೆ ವಿಶ್ವದಾದ್ಯಂತ ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭದ್ರಾವತಿಯ ಬಿ.ಎಚ್‌.ಶ್ರೀಕಾಂತ್‌ ಅವರು ಈ ಹುಳುಗಳ ಕೃಷಿಯ ಬಗ್ಗೆ ಸಲಹೆ ನೀಡುತ್ತಿದ್ದಾರೆ.

‘ಸಮಸ್ಯೆಗಳಿಗೆ ಜೈವಿಕ ಪರಿಹಾರ ಕಂಡುಕೊಳ್ಳುವುದರಲ್ಲಿ ನನಗೆ ಆಸಕ್ತಿ. ಹಾಗಾಗಿ ಕರಿ ಸೈನಿಕ ಹುಳುಗಳ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿದ್ದೇನೆ. ಇವುಗಳನ್ನು ಬಳಸಿ ತಯಾರಿಸುವ ಗೊಬ್ಬರ ದುರ್ವಾಸನೆ ಇರುವುದಿಲ್ಲ. ಇದರಲ್ಲಿ ಆಮ್ಲದ ಅಂಶ ಕಡಿಮೆ ಇರುತ್ತದೆ. ಮನೆಯಲ್ಲಿರುವ ಕಸವನ್ನು ವಿಲೇ ಮಾಡುವುದಕ್ಕೂ ಇವುಗಳನ್ನು ಬಳಸಬಹುದು’ ಎಂದು ಶ್ರೀಕಾಂತ್‌ ಅಭಿಪ್ರಾಯಪಟ್ಟರು.

ಕೇರಳದ ಕೊಚ್ಚಿಯ ಅಭಿಲಾಷ್‌ ಹ್ಯಾಚರೀಸ್‌ ಸಂಸ್ಥೆಯು ‘ಶೂನ್ಯ ಕಸ’ ಉತ್ಪಾದನೆಗೆಈ ಹುಳುಗಳನ್ನು ಬಳಸುವ ವಿಧಾನವನ್ನು ಪ್ರಚುರಪಡಿಸಲುಮುಂದಾಗಿದೆ.

*******

ಜಗತ್ತಿನಲ್ಲಿ ಪ್ರೋಟೀನ್‌ ಕೊರತೆ ವ್ಯಾಪಕವಾಗಿದೆ. ಕರಿ ಸೈನಿಕ ಹುಳುಗಳು ಈ ಕೊರತೆ ನೀಗಿಸುವ ಜತೆಗೆ ಕಸದ ಸಮಸ್ಯೆಗೂ ಮುಕ್ತಿ ನೀಡಬಲ್ಲವು.

– ನೀಲ್‌ ಬಿರ್ರೆಲ್‌, ಹೆಕ್ಸಾ ಸೈಕಲ್‌ ಸಂಸ್ಥೆಯ ನಿರ್ದೇಶಕ

ಸ್ಥಳೀಯ ಆಡಳಿತ ಸಂಸ್ಥೆಗಳು ಕಸ ವಿಲೇವಾರಿಗೆ ಇವುಗಳನ್ನು ಬಳಸುವಂತೆ ಉತ್ತೇಜನ ನೀಡಿದರೆ ನಗರಗಳಲ್ಲಿ ಕಸದ ಸಮಸ್ಯೆಯೇ ಇರಲಾರದು.

– ಬಿ.ಎಚ್‌.ಶ್ರೀಕಾಂತ್‌, ಕರಿ ಸೈನಿಕ ಹುಳು ಕೃಷಿ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT