ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ ನಾಯಕಿ ಈಗ ಸಭಾನಾಯಕಿ

Last Updated 12 ಜೂನ್ 2018, 8:17 IST
ಅಕ್ಷರ ಗಾತ್ರ

ಹದಿಮೂರನೇ ವಯಸ್ಸಿನಲ್ಲಿ ತುಳು ಸಿನಿಮಾ ‘ಕಾಸ್‌ದಾಯೆ ಕಂಡನಿ’ಗೆಂದು ಮುಖಕ್ಕೆ ಬಣ್ಣ ಹಚ್ಚಿದಾಗ, ಬದುಕು ಮುಂದೊಂದು ದಿನ ಹೀಗೆ ಕೈಹಿಡಿದು ಬಿರಬಿರನೆ ಎಳೆದೊಯ್ದು ವಿಧಾನಸೌಧದ ಎರಡನೇ ಮಹಡಿಯ ಸಚಿವರ ಕೊಠಡಿಯಲ್ಲಿ ಕೂರಿಸುತ್ತದೆ ಎಂಬ ಯಾವ ಕಲ್ಪನೆಯೂ ಜಯಮಾಲ ಅವರಿಗೆ ಇರಲಿಲ್ಲ; ಇರಲು ಸಾಧ್ಯವೂ ಇಲ್ಲ ಬಿಡಿ. ‘ಅದು ಬಿಡಿ, ಕನ್ನಡ ಸಿನಿಮಾ ನಟಿಯಾಗುತ್ತೇನೆಂಬ ಕಲ್ಪನೆಯೂ ನನಗೆ ಇರಲಿಲ್ಲ’ ಎಂದು ನಗುತ್ತಾರೆ ಜಯಮಾಲ. ಅವರೀಗ ಕರ್ನಾಟಕ ಸರ್ಕಾರದ ಏಕೈಕ ಮಹಿಳಾ ಸಚಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ, ಸಾರ್ವಜನಿಕ ಸಂಪರ್ಕ ಇಲಾಖೆ ಜತೆಗೆ ಮಹತ್ವದ ಕನ್ನಡ–ಸಂಸ್ಕೃತಿ ಖಾತೆಯ ಹೊಣೆಗಾರಿಕೆ ‌ದೊರೆತಿದೆ. ಕಾಂಗ್ರೆಸ್‌ ಪಕ್ಷದಿಂದ ವಿಧಾನ ಪರಿಷತ್ತಿನ ಸದಸ್ಯೆಯಾಗಿ, ರಾಜ್ಯದಾದ್ಯಂತ ಓಡಾಡಿ ದುರ್ಬಲ ಮಹಿಳೆಯರ ಏಳಿಗೆಗಾಗಿ ತನ್ನ ಮಿತಿಯಲ್ಲೇ ಕೆಲಸ ಮಾಡಿಕೊಂಡಿದ್ದ ಜಯಮಾಲ ಅವರನ್ನು ಕರ್ನಾಟಕದ ಸಮ್ಮಿಶ್ರ ಶಕ್ತಿ ರಾಜಕಾರಣ ಈಗ ಅಧಿಕಾರದ ನಡುಚಾವಡಿಗೆ ತಂದು ನಿಲ್ಲಿಸಿದೆ. ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಬಂದಾಗ, ಬಹುತೇಕ ಶಾಸಕರು ಸಚಿವರಾಗಬೇಕೆಂದು ಪದ್ಮನಾಭ ನಗರ– ನವದೆಹಲಿ ನಡುವೆ ಓಡಾಡುತ್ತಿದ್ದರೆ, ಜಯಮಾಲ ತೆಪ್ಪಗೆ ಬೆಂಗಳೂರಿನ ಡಾಲರ್ಸ್‌ ಕಾಲನಿಯ ಮನೆಯಲ್ಲಿದ್ದರು. ಆದರೆ, ‘ಕೊಡುವ ದೇವರು ಕೊಡಬೇಕೆಂದುಕೊಂಡಾಗ ಛಾವಣಿಯನ್ನೂ ಛಿದ್ರ ಮಾಡಿ ಕೊಡುತ್ತಾನೆ’ ಎಂಬ ಹಿಂದಿಯ ಗಾದೆ ಮಾತಿನಂತೆ, ಸಚಿವೆಯಾಗುವ ಅದೃಷ್ಟ ಅವರನ್ನು ಅರಸಿಕೊಂಡು ಬಂದಿದೆ. ಸಚಿವೆ ಮಾತ್ರವಲ್ಲ, ಅವರೀಗ ಮೇಲ್ಮನೆಯ ಸಭಾನಾಯಕಿ (leader of the house). ಹೀಗೆ, ವಿಧಾನ ಪರಿಷತ್ತಿನಲ್ಲಿ ‘ಸಭಾನಾಯಕಿ’ ಆಗುತ್ತಿರುವ ಕರ್ನಾಟಕದ ಮೊದಲ ಮಹಿಳೆಯೂ ಹೌದು.

ದಕ್ಷಿಣ ಕನ್ನಡದ ಕಡಲತಡಿಯ ಪಣಂಬೂರು ಎಂಬ ಪುಟ್ಟ ಊರಿನಿಂದ ಬಾಲ್ಯದಲ್ಲೇ ಅಪ್ಪ– ಅಮ್ಮನ ಜತೆಗೆ ಚಿಕ್ಕಮಗಳೂರಿಗೆ ವಲಸೆ ಹೋದ, ಹಿಂದುಳಿದ ಬಿಲ್ಲವ ಜಾತಿಯ ಬಡ ಕುಟುಂಬ ಅವರದು. ಕೃಷಿಕ ತಂದೆ ಜಿ.ಓಮಯ್ಯ ಮತ್ತು ತಾಯಿ ಕಮಲಮ್ಮ ಅವರಿಗೆ ಆರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ. ಜಯಮಾಲ ಮೂರನೆಯ ಮಗಳು. ಹುಟ್ಟಿದ ಊರು ಬಿಟ್ಟು ವಲಸೆ ಹೋಗಲು ಕಾರಣ, ಪಣಂಬೂರಿನಲ್ಲಿ ನವಮಂಗಳೂರು ಬಂದರು ನಿರ್ಮಾಣವಾದದ್ದು. ನವಮಂಗಳೂರು ಬಂದರಿಗೆಂದು ಊರಿಗೆ ಊರೇ ಎತ್ತಂಗಡಿಯಾದಾಗ, ಅಲ್ಲಿನ ಜನರೆಲ್ಲ ಸುರತ್ಕಲ್‌ ಸಮೀಪದ ಕಾಟಿಪಳ್ಳದಲ್ಲಿ ಪುನರ್ವಸತಿ ಪಡೆದರು. ಆದರೆ ಅಜ್ಜನ ಜತೆಗಿನ ಜಗಳದಿಂದ ಸಿಟ್ಟಿಗೆದ್ದಿದ್ದ ಓಮಯ್ಯ ಅವರು, ಬದುಕು ಕಟ್ಟಿಕೊಳ್ಳಲು ಕುಟುಂಬ ಸಮೇತ ಘಟ್ಟದ ಮೇಲಿನ ಚಿಕ್ಕಮಗಳೂರಿಗೆ ತೆರಳಿದರು.

ಆಗಿನ್ನೂ ಜಯಮಾಲಾಗೆ ಮೂರೂವರೆ ವರ್ಷ. ಚಿಕ್ಕಮಗಳೂರಿನಲ್ಲೇ ಪ್ರಾಥಮಿಕ, ಪ್ರೌಢ ಶಿಕ್ಷಣ ನಡೆಯಿತು. ಹೈಸ್ಕೂಲ್‌ನಲ್ಲಿದ್ದಾಗಲೇ ತುಳು ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಕೆ.ಎನ್‌.ಟೈಲರ್‌ ಅವರ ಮೂಲಕ ತುಳು ಚಿತ್ರರಂಗದ ನಂಟು ಬೆಳೆಯಿತು. ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಲ್ಕು ತುಳು ಸಿನಿಮಾಗಳಲ್ಲಿ ನಟಿಸಿಯಾಗಿತ್ತು. ಗಾಂಧಿನಗರದಿಂದ ಮೊದಲು ಕರೆಬಂದದ್ದು ‘ಬೂತಯ್ಯನ ಮಗ ಅಯ್ಯು’ ಚಿತ್ರದ ಪುಟ್ಟ ಪೋಷಕ ಪಾತ್ರವೊಂದಕ್ಕೆ. ಆ ಚಿತ್ರ ಶತದಿನೋತ್ಸವ ಕಂಡಿತು. ಚಿತ್ರದ ಶತದಿನೋತ್ಸವ ಸಮಾರಂಭದಲ್ಲಿ ಫಲಕ ಸ್ವೀಕರಿಸಲೆಂದು ಅಮ್ಮ ಮತ್ತು ಅಕ್ಕನ ಜತೆಗೆ ಮೊತ್ತಮೊದಲು ಬೆಂಗಳೂರಿಗೆ ಕಾಲಿಟ್ಟರು ಜಯಮಾಲ.

ಅಲ್ಲಿ ವರದಪ್ಪನವರ ಕಣ್ಣಿಗೆ ಬಿದ್ದ ಈ ಪುಟ್ಟ ಹುಡುಗಿ, ನಟಸಾರ್ವಭೌಮ ಡಾ.ರಾಜ್‌ಕುಮಾರ್‌ ಕ್ಯಾಂಪಿಗೆ ನುಸುಳಿದ್ದು ಆಕಸ್ಮಿಕವೇ. ‘ಪ್ರೇಮದ ಕಾಣಿಕೆ’ಯಲ್ಲಿ ಡಾ.ರಾಜ್‌ ಅವರಿಗೆ ನಾಯಕಿಯಾಗುವ ಅವಕಾಶ! ಮದ್ರಾಸಿನಲ್ಲಿ ಚಿತ್ರದ ಶೂಟಿಂಗ್‌ನ ಮೊದಲ ದೃಶ್ಯದಲ್ಲಿ ನಾಯಕನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಜಯಮಾಲ ಡೈಲಾಗ್‌ ಹೇಳಬೇಕು. ಏನು ಮಾಡಿದರೂ ರಾಜ್‌ ಅವರ ಕಣ್ಣುಗಳನ್ನು ದಿಟ್ಟಿಸಿ ನೋಡಲು ಈ 16ರ ಬಾಲೆಗೆ ಆಗುತ್ತಿಲ್ಲ. ನಾಲ್ಕೈದು ಟೇಕ್‌ಗಳಾದರೂ ಸೀನ್‌ ಓಕೆ ಆಗುತ್ತಿಲ್ಲ!

ಕೊನೆಗೊಮ್ಮೆ ರಾಜ್‌ಕುಮಾರ್, ‘ಪಾರ್ವತೀ, ಈ ಹುಡುಗಿಯಿಂದ ಆಗಲಿಕ್ಕಿಲ್ಲ ನೋಡು...’ ಎಂದು ತಮ್ಮ ನಿರ್ಮಾಪಕಿ ಪತ್ನಿಗೆ ಹೇಳಿಯೂ ಆಗಿತ್ತು. ಆದರೆ, ಅದೃಷ್ಟ ಅಲ್ಲೂ ಕೈಹಿಡಿಯಿತು. ಸ್ವತಃ ರಾಜ್‌ಕುಮಾರ್ ಅಕ್ಕರೆಯಿಂದ, ನಟಿಯೊಬ್ಬಳಿಗೆ ಇರಬೇಕಾದ ಪರಕಾಯ ಪ್ರವೇಶದ ಅಕ್ಷರಮಾಲೆಯನ್ನು ಬಿಡಿಸಿ ಹೇಳಿಕೊಟ್ಟರು. ಅಲ್ಲಿಂದೀಚೆಗಿನದ್ದು ಸಿನಿಮಾ ರಂಗದ ಇತಿಹಾಸ. ತ್ರಿಮೂರ್ತಿ, ಗಿರಿಕನ್ಯೆ, ಶಂಕರ್‌ಗುರು– ಹೀಗೆ ಸಾಲಾಗಿ ರಾಜ್‌ ಕ್ಯಾಂಪಿನ ಸೂಪರ್‌ಹಿಟ್‌ ಚಿತ್ರಗಳು ಬಂದವು.

ಹಾಗೆ ಒಂದು ಕಾಲದಲ್ಲಿ ಕನ್ನಡದ ಮೇರುನಟನ ಜತೆಗೆ ಮೊದಲ ಕಣ್ಣೋಟದ ದೃಶ್ಯದಲ್ಲಿ ಕಂಗಾಲಾಗಿದ್ದ ಜಯಮಾಲ ಅವರತ್ತ ಇವತ್ತು ಆರೂವರೆ ಕೋಟಿ ಕನ್ನಡಿಗರು ಕಣ್ಣರಳಿಸಿ ಅಚ್ಚರಿಯಿಂದ ನೋಡುತ್ತಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಜಯಮಾಲ ಸಾರ್ವಜನಿಕ ಜೀವನದಲ್ಲಿ ಒಂದೊಂದೇ ಮೆಟ್ಟಿಲುಗಳನ್ನು ಏರಿ, ಸಾಕಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಐದು ಭಾಷೆಗಳ ಚಿತ್ರಗಳಲ್ಲಿ ನಟಿಸಿದರು. ಈ ಎತ್ತರವೂ ಒಮ್ಮಿಂದೊಮ್ಮೆಲೆ ದಕ್ಕಿದ್ದಲ್ಲ. ಸಿನಿಮಾ ಎಂಬ ಕಲ್ಲುಮುಳ್ಳಿನ ದಾರಿಯಲ್ಲಿ ಕಷ್ಟಪಟ್ಟು ಸವೆಸಿದ ದಾರಿಯದು. ಈ ದಾರಿಯಲ್ಲಿ ನಟಿಯಾಗಿ ಮಾತ್ರವಲ್ಲ, ನಿರ್ಮಾಪಕಿಯಾಗಿಯೂ ಜಯಮಾಲ ಗೆದ್ದರು. ಅವರು ನಿರ್ಮಾಪಕಿಯಾಗಿ ಹಣ ಹೂಡಿದ ನಾಲ್ಕನೇ ಚಿತ್ರ ಗಿರೀಶ್‌ ಕಾಸರವಳ್ಳಿ ನಿರ್ದೇಶನದ ‘ತಾಯಿಸಾಹೇಬ’ ರಾಷ್ಟ್ರಮಟ್ಟದಲ್ಲಿ ಸ್ವರ್ಣಕಮಲ ಪ್ರಶಸ್ತಿ ಗೆದ್ದಿತು. ಅದರಲ್ಲಿ ಅವರ ಪಾತ್ರಕ್ಕೂ ಜ್ಯೂರಿಗಳ ವಿಶೇಷ ಮೆಚ್ಚುಗೆ ಪ್ರಶಸ್ತಿ ಲಭಿಸಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷೆಯಾಗಿ ಜಯಮಾಲ ಆಯ್ಕೆಯಾದದ್ದು ಸಿನಿಮಾ ವೃತ್ತಿ ಬದುಕಿನ ಇನ್ನೊಂದು ಮಹತ್ವದ ಮಜಲು. ಪುರುಷ ಪಾರಮ್ಯದಿಂದ ನರಳುತ್ತಿದ್ದ ವಾಣಿಜ್ಯ ಮಂಡಳಿಯಲ್ಲಿ ಹೆಣ್ಣೊಬ್ಬಳು ಸಮರ್ಥವಾಗಿ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ಸು ಪಡೆದದ್ದು ಸಣ್ಣ ಮಾತಲ್ಲ. ಜತೆಗೆ, ಕನ್ನಡ ಚಿತ್ರಗಳ ಸಬ್ಸಿಡಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷತೆ, ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು– ಹೀಗೆ ಹತ್ತಾರು ಜವಾಬ್ದಾರಿಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದರು.

ಸಿನಿಮಾದಲ್ಲಿ ಪಡೆದ ಕೀರ್ತಿ ಅವರನ್ನು ರಾಜಕೀಯದ ಹಿತ್ತಲಿಗೆ ಕರೆತಂದಿತು. ಅಲ್ಲೂ ಶ್ರಮವಹಿಸಿ ದುಡಿದರು. ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ವಿಶೇಷವಾಗಿ ದುರ್ಬಲ ಮಹಿಳೆಯರ ಪರವಾಗಿ ಜಯಮಾಲ ಅವರದ್ದು ಸದಾ ಅಕ್ಕರೆಯ ‘ಶಕ್ತಿಧಾಮ’ದ ನೋಟ.

‘ಕರ್ನಾಟಕ ರಾಜ್ಯ ನಿರಾಶ್ರಿತ ಮಹಿಳೆಯರ ಪುನರ್ವಸತಿ: ಆಡಳಿತ ವ್ಯವಸ್ಥೆಯ ಅಧ್ಯಯನ’ ಎಂಬ ವಿಷಯಕ್ಕೆ ಸಂಬಂಧಿಸಿ ಸುದೀರ್ಘ ಪ್ರಬಂಧ ಮಂಡಿಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಭಾರತೀಯ ಚಿತ್ರರಂಗದಲ್ಲೇ ನಟಿಯೊಬ್ಬರ ಅದ್ವಿತೀಯ ಸಾಧನೆಯದು. ‘ಲೈಂಗಿಕ ವೃತ್ತಿನಿರತರ ಸ್ಥಿತಿಗತಿಗಳ ಅಧ್ಯಯನ ಸಮಿತಿ’ ಅಧ್ಯಕ್ಷೆಯಾಗಿ ರಾಜ್ಯದಾದ್ಯಂತ ಓಡಾಡಿ ಅತ್ಯುತ್ತಮ ವರದಿಯೊಂದನ್ನು ಸರ್ಕಾರಕ್ಕೆ ಸಲ್ಲಿಸಿದರು. ಇದೆಲ್ಲವೂ ಬದುಕಿನ ಕುರಿತ ಅವರ ಅತೀವ ಶ್ರಮ ಮತ್ತು ಶ್ರದ್ಧೆಗೆ ಸಾಕ್ಷಿ.

ಚಿತ್ರನಟಿಯೊಬ್ಬರು ಸಚಿವೆ ಆಗುವುದು ರಾಜ್ಯಕ್ಕೆ ಹೊಸತಲ್ಲ. ‘ಅತ್ಯುತ್ತಮ ನಟಿ’ ಉಮಾಶ್ರೀ ಅವರು ಹಿಂದಿನ ಸರ್ಕಾರದಲ್ಲಿ ಸಚಿವೆಯಾಗಿದ್ದರು. ಚುನಾವಣೆಯ ಚದುರಂಗದಾಟದಲ್ಲಿ ಅವರು ತಮ್ಮ ಶಾಸಕತ್ವವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಈಗ ಸಚಿವಸ್ಥಾನದ ಸುವರ್ಣಾವಕಾಶವೊಂದು ಜಯಮಾಲ ಅವರ ಕೈಹಿಡಿದಿದೆ. ಆದರೆ ಈಗಿನದ್ದು ಸಮ್ಮಿಶ್ರ ಸರ್ಕಾರ. ಹೆಜ್ಜೆಹೆಜ್ಜೆಯನ್ನೂ ಎಚ್ಚರದಿಂದ ಗಮನಿಸಿ ಇಡಬೇಕಾದ ಪರಿಸ್ಥಿತಿಯಿದೆ. ಸಿನಿಮಾದಲ್ಲಿ ಸಿದ್ಧವಾದ ಚಿತ್ರಕಥೆಯೊಂದಿರುತ್ತದೆ, ದಾರಿ ತೋರಲು ಬೆನ್ನ ಹಿಂದೆ ಒಬ್ಬ ನಿರ್ದೇಶಕ ಇರುತ್ತಾನೆ. ರಾಜಕೀಯದಲ್ಲಿ ಯಾವ ಚಿತ್ರಕಥೆಯೂ ಸಿದ್ಧವಾಗಿರುವುದಿಲ್ಲ. ನಮ್ಮ ಚಿತ್ರಕಥೆಯನ್ನು ನಾವೇ ರೂಪಿಸಿಕೊಳ್ಳಬೇಕು. ಜೀವನದುದ್ದಕ್ಕೂ ತಮ್ಮ ಶ್ರದ್ಧೆ ಮತ್ತು ಶ್ರಮದಿಂದ ಮೇಲಕ್ಕೆ ಬಂದ ಜಯಮಾಲ ಅವರಿಗೆ ಈ ಜವಾಬ್ದಾರಿ ಕಷ್ಟ ಅನ್ನಿಸಲಿಕ್ಕಿಲ್ಲ; ಆದರೆ, ದಾರಿ ಸುಲಭದ್ದಂತೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT