ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ ಎಇಇ ಕೃಷ್ಣಲಾಲ್‌ ಜಾಮೀನು ರದ್ದು

Last Updated 27 ಮೇ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿ ಹಕ್ಕು ವರ್ಗಾವಣೆ’ (ಟಿಡಿಆರ್) ವಂಚನೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿದ್ದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಕೃಷ್ಣಲಾಲ್‌ ಜಾಮೀನನ್ನು ಇಲ್ಲಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಸೋಮವಾರ ರದ್ದುಪಡಿಸಿದೆ.

ಷರತ್ತು ಉಲ್ಲಂಘನೆ ಆರೋಪದ ಮೇಲೆ ಕೃಷ್ಣಲಾಲ್‌ ಅವರ ಜಾಮೀನನ್ನು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳಾ ಇಟ್ಟಿ ರದ್ದುಪಡಿಸಿದರು ಎಂದು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮೂಲಗಳು ತಿಳಿಸಿವೆ.

ಇದರಿಂದಾಗಿ ಕೃಷ್ಣಲಾಲ್‌ ಅವರಿಗೆ ಪುನಃ ಸಂಕಷ್ಟ ಎದುರಾಗಿದೆ. ಅಭಿವೃದ್ಧಿ ಹಕ್ಕು ವರ್ಗಾವಣೆ ವಂಚನೆ ಪ್ರಕರಣ
ದಲ್ಲಿ ಎಸಿಬಿ ತನಿಖಾಧಿಕಾರಿಗಳ ಮುಂದೆ ಕೃಷ್ಣಲಾಲ್‌ ಹಾಜರಾಗಬೇಕಿತ್ತು. ಗುರುವಾರ, ಶುಕ್ರವಾರ ಮತ್ತು ಶನಿವಾರ ಎಸಿಬಿ ಕಚೇರಿಗೆ ಎಇಇ ಬಂದಿದ್ದರಾದರೂ ವಿಚಾರಣೆಗೆ ಹಾಜರಾಗಿರಲಿಲ್ಲ. ಯಾರನ್ನೂ ಭೇಟಿ ಮಾಡದೆ ಹಿಂತಿರುಗಿದ್ದರು ಎಂದು ಮೂಲಗಳು ಹೇಳಿವೆ.

ಎಸಿಬಿ ಕಚೇರಿಗೆ ವಿಚಾರಣೆಗೆ ಬರುವ ಆರೋಪಿಗಳು ಮತ್ತು ಸಂದರ್ಶಕರು ಸ್ವಾಗತಕಾರರ ಬಳಿ ಯಾವ ಅಧಿಕಾರಿಯನ್ನು ಭೇಟಿ ಮಾಡಬೇಕು ಎಂದು ಹೇಳಿ ಚೀಟಿ ಪಡೆಯಬೇಕು. ನಿರ್ದಿಷ್ಟ ಅಧಿಕಾರಿಯನ್ನು ಭೇಟಿ ಮಾಡಿ ಮರಳುವಾಗ ಚೀಟಿಗೆ ಅವರ ಸಹಿ ಪಡೆದು ಸ್ವಾಗತಕಾರರಿಗೆ ಪುನಃ ಹಿಂತಿರುಗಿಸಬೇಕು. ಆದರೆ, ಕೃಷ್ಣಲಾಲ್‌ ಚೀಟಿಯನ್ನು ಹಿಂತಿರುಗಿಸದೆ ಹೋಗಿದ್ದರು ಎಂದು ಮೂಲಗಳು ತಿಳಿಸಿವೆ.

ಕೃಷ್ಣಲಾಲ್‌, ನ್ಯಾಯಾಲಯದ ಷರತ್ತು ಉಲ್ಲಂಘಿಸಿರುವುದರಿಂದ ಅವರ ಜಾಮೀನು ರದ್ದುಪಡಿಸಬೇಕು ಎಂದು ಮನವಿ ಮಾಡಿ ಎಸಿಬಿ ಅಧಿಕಾರಿಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆರೋಪಿ ಅತ್ಯಂತ ಪ್ರಭಾವಿಯಾ
ಗಿದ್ದು ಸಾಕ್ಷ್ಯ ನಾಶಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ಈ ಅಧಿಕಾರಿಯ ಪ್ರಾಸಿಕ್ಯೂಷನ್‌ಗೆ ಸರ್ಕಾರ ನೀಡಿರುವ ಅನುಮತಿ ಪ್ರತಿಯೂ ಅವರ ಮನೆಯಲ್ಲಿ ಸಿಕ್ಕಿದೆ. ಹೀಗಾಗಿ ಜಾಮೀನು ರದ್ದುಪಡಿಸಬೇಕು ಎಂದು ಪ್ರಾಸಿಕ್ಯೂಷನ್‌ ಪರ ವಕೀಲರು ಮನವಿ ಮಾಡಿದ್ದರು.

ಬಿಬಿಎಂಪಿ ರಸ್ತೆ ವಿಸ್ತರಣೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪರಿಹಾರ ಇಲ್ಲವೆ ‘ಟಿಡಿಆರ್‌’ (ಅಭಿವೃದ್ಧಿ ಹಕ್ಕು ಹಸ್ತಾಂತರ) ನೀಡಿ ಸರ್ಕಾರಕ್ಕೆ ಭಾರಿ ನಷ್ಟ ಮಾಡಿದ ಆರೋಪ ಸಂಬಂಧ ಕೃಷ್ಣಲಾಲ್‌ ಮತ್ತು ಅವರ ಆಪ್ತರ ಮನೆ– ಕಚೇರಿ ಒಳಗೊಂಡಂತೆ 6 ಸ್ಥಳಗಳ ಮೇಲೆ ಏಪ್ರಿಲ್‌ 26ರಂದು ಎಸಿಬಿ ದಾಳಿ ನಡೆದಿತ್ತು. ಸುಮಾರು 5.6 ಕಿ.ಮೀ ಉದ್ದದ ಭಟ್ಟರಳ್ಳಿ– ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆಗೆ ಸ್ವಾಧೀನ‍‍ಪಡಿಸಿಕೊಂಡಿರುವ ಜಮೀನೊಂದಕ್ಕೆ ನೀಡಿರುವ ಪರಿಹಾರದಿಂದ ಸರ್ಕಾರಕ್ಕೆ ಸುಮಾರು ₹56 ಕೋಟಿ ನಷ್ಟ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಎಸಿಬಿ ತನಿಖೆ ನಡೆಯುತ್ತಿದೆ. ಪ್ರಕರಣದ ಉಳಿದ ಆರೋಪಿಗಳು ತನಿಖೆಗೆ ಸಹಕಾರ ನೀಡುತ್ತಿದ್ದು, ಅವರ ಮಧ್ಯಂತರ ಜಾಮೀನು ಮುಂದುವರಿದಿದೆ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಟಿಡಿಆರ್‌ ವಂಚನೆ ಪ್ರಕರಣವನ್ನು ಎಸಿಬಿ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಐಜಿಪಿ ಚಂದ್ರಶೇಖರ್‌ ಮಾರ್ಗದರ್ಶನದಲ್ಲಿ ಎಸ್‍ಪಿ ಡಾ. ಸಂಜೀವ ಪಾಟೀಲ ಅವರ ನೇತೃತ್ವದಲ್ಲಿ ಡಿವೈಎಸ್‌ಪಿ ರವಿ ಕುಮಾರ್‌ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಪ್ರಕರಣಗಳನ್ನು ಬಯಲಿಗೆಳೆಯುವ ಸಿದ್ಧತೆ ನಡೆಸಿದ್ದಾರೆ.

ಲೋಕಾಯುಕ್ತ ವರ್ಸಸ್ ಎಸಿಬಿ?

ಟಿಡಿಆರ್ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಎಸಿಬಿ ಅಧಿಕಾರಿಗಳು ಪ್ರಯತ್ನಿಸುತ್ತಿರುವುದರ ನಡುವೆಯೇ ಬಿಬಿಎಂಪಿಗೆ ಲೋಕಾಯುಕ್ತ ಪೊಲೀಸರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿರುವುದು ಕುತೂಹಲ ಕೆರಳಿಸಿದೆ.

‘ಈ ಹಗರಣದಲ್ಲಿ ನೂರಾರು ಕೋಟಿ ವಂಚನೆ ಆಗಿರಬಹುದು’ ಎಂದು ಎಸಿಬಿ ಅಧಿಕಾರಿಗಳು ಶಂಕಿಸಿರುವ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರ ರಂಗ ಪ್ರವೇಶ ಅನೇಕರು ಹುಬ್ಬೇರಿಸುವಂತೆ ಮಾಡಿದೆ. ಟಿಡಿಆರ್‌ ವ್ಯವಸ್ಥೆ 2005ರಲ್ಲಿ ಜಾರಿಗೆ ಬಂದಿದ್ದು, 2015ರವೆಗೆ ಟಿಡಿಆರ್‌ ಹಕ್ಕು ವಿತರಿಸುವ ಅಧಿಕಾರ ಬಿಬಿಎಂಪಿ ನಿಯಂತ್ರಣದಲ್ಲಿತ್ತು. ಆನಂತರ ಬಿಡಿಎಗೆ ಹಸ್ತಾಂತರಿಸಲಾಯಿತು.

2005ರಿಂದ 2019ರವರೆಗೂ ಎಷ್ಟು ರಸ್ತೆಗಳನ್ನು ವಿಸ್ತರಿಸಲಾಗಿದೆ. ಎಷ್ಟು ಪರಿಹಾರ ಅಥವಾ ಟಿಡಿಆರ್‌ ಹಕ್ಕು ವಿತರಿಸಲಾಗಿದೆ ಎಂಬ ವಿವರ ನೀಡುವಂತೆ ಎಸಿಬಿ ಅಧಿಕಾರಿಗಳು ಈಗಾಗಲೇ ಬಿಬಿಎಂಪಿ ಮತ್ತು ಬಿಡಿಎಗೆ
ಪತ್ರ ಬರೆದಿದ್ದಾರೆ. ಈ ಹಂತದಲ್ಲಿ ಲೋಕಾಯುಕ್ತ ಪೊಲೀಸರ ಪ್ರವೇಶ ಎರಡೂ ಸಂಸ್ಥೆಗಳ ನಡುವೆ ಶೀತಲ ಸಮರಕ್ಕೆ ಕಾರಣವಾಗಬಹುದೇ ಎಂಬ ಅನುಮಾನ ಹುಟ್ಟಿಸಿದೆ.

ಬಿಬಿಎಂಪಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿರುವುದರಿಂದ ಸಾರ್ವಜನಿಕರಿಗೆ ಕಿರುಕುಳವಾಗುತ್ತಿದೆ. ಈ ಬಗ್ಗೆ ಪರಿಶೀಲಿಸಲು ಲೋಕಾಯುಕ್ತ ಪೊಲೀಸರು ಅಲ್ಲಿಗೆ ಭೇಟಿ ನೀಡಿರಬಹುದು ಎಂದು ಲೋಕಾಯುಕ್ತದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯ ಸರ್ಕಾರ ಎಸಿಬಿ ಸ್ಥಾಪನೆ ಮಾಡಿರುವುದರ ಔಚಿತ್ಯ ಪ್ರಶ್ನಿಸಿ ಲೋಕಾಯುಕ್ತ ಈಗಾಗಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತೀರ್ಪು ಕಾಯ್ದಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT