ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನದು ಆತ್ಮವಂಚನೆಯ ರಾಜಕೀಯವಲ್ಲ: ಕೃಷ್ಣ ಬೈರೇಗೌಡ

ಪ್ರಜಾವಾಣಿ ಸಂದರ್ಶನ– ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ)
Last Updated 25 ಏಪ್ರಿಲ್ 2019, 7:26 IST
ಅಕ್ಷರ ಗಾತ್ರ

l ಕೊನೆಕ್ಷಣದಲ್ಲಿ ‘ಉತ್ತರ’ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ತುಮಕೂರು ಕಡೆಗೆ ದೇವೇಗೌಡರು ಮುಖ ಮಾಡಲು ಕಾರಣ?

ದೇವೇಗೌಡರೇ ಕಣಕ್ಕಿಳಿಯುತ್ತಾರೆ ಎಂಬ ಕಾರಣಕ್ಕೆ ಕ್ಷೇತ್ರ ಹಂಚಿಕೆ ವೇಳೆ ‘ಉತ್ತರ’ದ ಬಗ್ಗೆ ಚರ್ಚೆಯೇ ಆಗಿಲ್ಲ. ಆದರೆ, ತುಮಕೂರಿನಲ್ಲಿ ಅವರ ಪಕ್ಷದಲ್ಲಿ 2–3 ಗುಂಪುಗಳಿದ್ದು, ದೇವೇಗೌಡರನ್ನು ಬಿಟ್ಟು ಬೇರೊಬ್ಬ ಅಭ್ಯರ್ಥಿ ಬಗ್ಗೆ ಸಹಮತ ಇರಲಿಲ್ಲವಂತೆ. ಅವರ ನಡುವೆ ಒಮ್ಮತ ಮೂಡಿಸುವ ಬಗ್ಗೆ ದೇವೇಗೌಡರಿಗೆ ಸ್ವತಃ ಕುಮಾರಸ್ವಾಮಿ ಮಾತು ಕೊಟ್ಟಿದ್ದರು. ಹೀಗಾಗಿ, ಎರಡೂ ಕಡೆ ನಾಮಪತ್ರ ಸಲ್ಲಿಸಿ ಕೊನೆಕ್ಷಣದಲ್ಲಿ ತುಮಕೂರಿನಿಂದ ನಾಮಪತ್ರ ಹಿಂತೆಗೆದುಕೊಳ್ಳುವ ಚಿಂತನೆ ಗೌಡರಿಗಿತ್ತು. ಆದರೆ, ಕೊನೆವರೆಗೂ ಸಹಮತ ಮೂಡದ ಕಾರಣ ಅನಿವಾರ್ಯವಾಗಿ ತುಮಕೂರಿನಲ್ಲಿ ಸ್ಪರ್ಧಿಸಲು ತೀರ್ಮಾನಿಸಿದರು. ‘ಉತ್ತರ’ದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಹಾಕುವಂತೆ ವರಿಷ್ಠರಿಗೆ ಸಲಹೆ ನೀಡಿದ್ದೂ ಅವರೇ.

l ಒಕ್ಕಲಿಗ ಸಮುದಾಯದ ಪ್ರಬಲರಿಬ್ಬರ ಮಧ್ಯೆ ಸ್ಪರ್ಧೆ ಬೇಡ ಎಂಬ ಕಾರಣಕ್ಕೆ ದೇವೇಗೌಡರು ತುಮಕೂರು ಆಯ್ಕೆ ಮಾಡಿಕೊಂಡರು ಎಂಬ ಮಾತಿದೆಯಲ್ಲ...

ಆ ರಾಜಕೀಯ ಲೆಕ್ಕಾಚಾರ ನನಗೆ ಗೊತ್ತಿಲ್ಲ. ಅವರೇ ಮುಂದೆ ನಿಂತು ಗೆಲ್ಲಿಸುವುದಾಗಿ ನನಗೆ ಮತ್ತು ‌ವರಿಷ್ಠರಿಗೆ ಆಶ್ವಾಸನೆ ನೀಡಿದ್ದಾರೆ. ಚುನಾವಣಾ ಪ್ರಚಾರವನ್ನೂ ಮಾಡುತ್ತೇನೆ ಎಂದಿದ್ದಾರೆ. ಚುನಾವಣೆಯಲ್ಲಿ ಸಮುದಾಯ ಕೂಡಾ ದೊಡ್ಡ ಪಾತ್ರ ನಿರ್ವಹಿಸುತ್ತದೆ ನಿಜ. ಆದರೆ, ರಾಜಕೀಯವನ್ನು ಸಮುದಾಯಕ್ಕೆ ಸೀಮಿತಗೊಳಿಸಲು ಆಗುವುದಿಲ್ಲ.

l ಲೋಕಸಭೆಗೆ ಸ್ಪರ್ಧಿಸಲ್ಲ ಎಂದು ಹೇಳುತ್ತಿದ್ದವರು ಮನಸ್ಸು ಬದಲಿಸಿದ್ದು ಯಾಕೆ.

ತುಮಕೂರು ಸ್ಪರ್ಧಿಸಲು ತೀರ್ಮಾನಿಸಿದ ದೇವೇಗೌಡರು, ನಮ್ಮ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಕೆಪಿಸಿಸಿ ಅಧ್ಯಕರ ಜೊತೆ ಮಾತನಾಡಿ ಕಾಂಗ್ರೆಸ್‌ನವರೇ ಇಲ್ಲಿ ಅಭ್ಯರ್ಥಿಯಾಗಲಿ ಎಂದು ಸಲಹೆ ನೀಡಿದ್ದರು. ಸಿದ್ದರಾಮಯ್ಯ ನಿವಾಸದಲ್ಲಿ ಸುಮಾರು ನಡೆದ ಉಭಯ ಪಕ್ಷಗಳ ಶಾಸಕರು ಮತ್ತು ನಾಯಕರ ಸಭೆಯಲ್ಲಿ ನಾನು ಕಣಕ್ಕಿಳಿಯಬೇಕು ಎಂಬ ಒಮ್ಮತದ ಸಲಹೆ ಬಂತು. ನಾನಾಗ, ‘ವಿಧಾನಸಭೆ ಚುನಾವಣೆಯಿಂದ ಇನ್ನೂ ಸುಧಾರಿಸಿಲ್ಲ. ಕಣಕ್ಕಿಳಿಯಲು ತಯಾರಿಲ್ಲ’ ಎಂದಿದ್ದೆ. ಕ್ಷೇತ್ರದ ಕಾರ್ಯಕರ್ತರ ಅಭಿಪ್ರಾಯವೂ ಅದೇ ಆಗಿತ್ತು. ಆದರೆ, ಸಿದ್ದರಾಮಯ್ಯ, ಪರಮೇಶ್ವರ... ಹೀಗೆ ಹಿರಿಯರು, ಸಹೋದ್ಯೋಗಿಗಳ ಒತ್ತಾಯಕ್ಕೆ ಮಣಿಯಬೇಕಾಯಿತು.

l ನಿಮ್ಮನ್ನು ರಾಷ್ಟ್ರ ರಾಜಕಾರಣಕ್ಕೆ ಕಳುಹಿಸಿಬಿಡುವ ತಂತ್ರವಿದು ಎನ್ನಲಾಗುತ್ತಿದೆಯಲ್ಲ?

ಅವೆಲ್ಲ ಅಪಪ್ರಚಾರ. ಅಂಥ ಭಾವನೆ ಯಾರಲ್ಲೂ ಇರಲ್ಲ ಅಂದುಕೊಂಡಿದ್ದೇನೆ. ಅಷ್ಟೇ ಅಲ್ಲ, ರಾಜಕೀಯದಲ್ಲಿ ಅವಕಾಶ ಕಸಿದುಕೊಳ್ಳಲು, ಇಲ್ಲದ ಅವಕಾಶ ಪಡೆದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಬರಬೇಕಾದುದು ಬಂದೇ ಬರುತ್ತದೆ ಎನ್ನುವುದು ನನ್ನ ನಂಬಿಕೆ. ಈ ಚುನಾವಣೆ ನನ್ನ ರಾಜಕೀಯ ಬದುಕಿಗೊಂದು ಮಹತ್ವದ ತಿರುವಿಗೂ ಏಕೆ ಕಾರಣವಾಗಲೂ ಸಾಧ್ಯವಿದೆ. ಸಂಸದನಾಗಿಯೂ ಕೆಲಸ ಮಾಡಲು ಸಿದ್ಧನಿದ್ದೇನೆ.

l ಹಾಗಾದರೆ, ರಾಷ್ಟ್ರ ರಾಜಕಾರಣದ ಒಲವು ಇದೆ ಎಂದಾಯಿತು...‌

ರಾಜಕೀಯದಲ್ಲಿ ಹೀಗೇ ಇರಬೇಕು ಎಂದು ಗೆರೆ ಎಳೆಯಲು ಆಗುವುದಿಲ್ಲ. ಅದು ತನ್ನದೇ ಆದ ಹಾದಿ ಹುಡುಕಿಕೊಂಡು ಹೋಗುತ್ತದೆ. ಸೂತ್ರದಂತೆ ಯಾವುದೂ ನಡೆಯುವುದಿಲ್ಲ. ಈಗಾಗಲೇ ಶಾಸಕನಾಗಿ, ಸಚಿವನಾಗಿ ರಾಜ್ಯ ರಾಜಕೀಯದ ಬಗ್ಗೆ ತಕ್ಕಮಟ್ಟಿನ ಅನುಭವ ಪಡೆದಿದ್ದೇನೆ. ಸಂಸತ್‌ ಸದಸ್ಯನಾಗಿ ಕೆಲಸ ಮಾಡಿದರಷ್ಟೆ ರಾಷ್ಟ್ರೀಯ ವಿದ್ಯಮಾನ, ತೀರ್ಮಾನ, ಚರ್ಚೆಯ ಅನುಭವ ಪಡೆಯಲು ಸಾಧ್ಯ.

l ಒಲ್ಲದ ಮನಸ್ಸಿನಿಂದ ಕಣದಲ್ಲಿದ್ದಿರಿ ಎಂಬ ಮಾತು ಕ್ಷೇತ್ರದಲ್ಲಿ ಹರಿದಾಡುತ್ತಿದೆಯಲ್ಲ...

ಮೂರ್ನಾಲು ದಿನಗಳ ಹಿಂದೆ ನನ್ನ ಗಮನಕ್ಕೂ ಇದು ಬಂದಿದೆ. ಬಿಜೆಪಿಯವರು ಹಬ್ಬಿಸುತ್ತಿರುವ ಸುಳ್ಳು ಸುದ್ದಿಯಿದು. ಇಂಥ ವಿಷಯಗಳಲ್ಲಿ ಬಿಜೆಪಿಯವರು ನಿಸ್ಸೀಮರು. ವಾಮಮಾರ್ಗದ ಮೂಲಕ ಮತದಾರರ ಮನಸ್ಸು ಕೆಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅವರ ಹತಾಶೆಯ ಸಂಕೇತವಿದು. ರಾಜಕೀಯ ಜೀವನದಲ್ಲಿ ನಂಬಿಕೆ. ವಿಶ್ವಾಸ ಅಗತ್ಯ. ಮಂತ್ರಿಗಿರಿಗೆ ನಾನು ಹಪಾಹಪಿ ಹೊಂದಿದವನಲ್ಲ. ಅಷ್ಟಕ್ಕೂ, ಕೇವಲ ನಾಟಕಕ್ಕೆ ಚುನಾವಣೆ ಎದುರಿಸುವುದು ಆತ್ಮವಂಚನೆ ಮಾಡಿಕೊಂಡಂತೆ. ಸ್ಪರ್ಧೆಗಿಳಿದ ಮೇಲೆ ಗೆಲ್ಲಲು ಯತ್ನಿಸಲೇಬೇಕು.

l ಕ್ಷೇತ್ರ ಸುತ್ತಾಡಿದ್ದೀರಿ. ಮತದಾರ ಮನಸ್ಥಿತಿ ಅರ್ಥ ಮಾಡಿಕೊಂಡಿದ್ದೀರಾ?

ಮೋದಿ ಹವಾ ಕ್ಷೇತ್ರದಲ್ಲಿದೆ ನಿಜ. ಆದರೆ, ಅದು ವಿರೋಧಿ ಅಲೆ. ಅದರಲ್ಲೂ ಮಧ್ಯಮ, ದುಡಿಯುವ ವರ್ಗ ಮೋದಿಗೆ ವಿರುದ್ಧವಾಗಿದೆ. ‘ಅಚ್ಚೇ ದಿನ್‌ ಬಂದೇ ಬರುತ್ತದೆ’ ಎಂದು ಹೇಳಿಕೊಂಡು ಬಂದವರು ಈಗ ಆ ಪದವನ್ನು ಉಚ್ಛರಿಸಲೂ ಸಿದ್ಧರಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಾಗಿಬಿಟ್ಟಿದೆ. ಧ್ವನಿಯೇ ಇಲ್ಲದ ಬಹುಸಂಖ್ಯಾತರು ಈ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸುವ ಮೂಲಕ ಮೋದಿ ವಿರುದ್ಧ ಸಿಟ್ಟು ತೋರಿಸುವುದು ಖಚಿತ.

l ಅಂದರೆ, ಬಿಜೆಪಿಯವರ ಮತ್ತೊಮ್ಮೆ ಮೋದಿ, ರಾಷ್ಟ್ರೀಯತೆ, ಭಾವನಾತ್ಮಕ ವಿಷಯಗಳು ಕೆಲಸ ಮಾಡಲ್ಲ ಎಂದೇ?

ಬಿಜೆಪಿಯವರ ಬಂಡವಾಳವೇ ಅದು. ಅವುಗಳನ್ನೇ ಮುಂದಿಟ್ಟು ಮತಗಳಾಗಿ ‍ಪರಿವರ್ತಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಆದರೆ, ಹೊಟ್ಟೆಪಾಡಿನ ವಿಷಯ ಬಂದಾಗ ಜನರ ಸಾಮಾನ್ಯ ಪ್ರಜ್ಞೆ ಜಾಗೃತವಾಗಲಿದೆ. ಜನ ಅಷ್ಟೊಂದು ಮೂರ್ಖರಲ್ಲ ಅಂದುಕೊಂಡಿದ್ದೇನೆ. ಮೂರ್ಖರನ್ನಾಗಿ ಮಾಡಲು ಕೂಡಾ ಸಾಧ್ಯ ಇಲ್ಲ.

l ನಿಮ್ಮ ಕ್ಷೇತ್ರ ವಲಸಿಗ ಮತದಾರರನ್ನು ಹೆಚ್ಚು ಹೊಂದಿದೆ. ಈ ವರ್ಗ ಮೋದಿ ಪರ ಎಂಬ ಭಾವನೆ ಇದೆಯಲ್ಲ...

ಈ ಕ್ಷೇತ್ರ ವ್ಯಾಪ್ತಿಯ ದಾಸರಹಳ್ಳಿ, ಮಹಾಲಕ್ಷ್ಮೀ ಲೇಔಟ್‌, ಯಶವಂತಪುರ, ಕೆ.ಆರ್‌. ಪುರ, ಪುಲಿಕೇಶಿ ನಗರದಲ್ಲಿ ದುಡಿಯುವ ವರ್ಗ ಹೆಚ್ಚಿದೆ. ನನ್ನ ವಿಧಾನಸಭಾ ಕ್ಷೇತ್ರದಲ್ಲಿ (ಬ್ಯಾಟರಾಯನಪುರ) ಎರಡೂ ವರ್ಗವರಿದ್ದಾರೆ. ಹೆಬ್ಬಾಳದ ಒಂದು ಭಾಗದಲ್ಲಿ ದುಡಿಯುವ ವರ್ಗ ಇನ್ನೊಂದು ಭಾಗದಲ್ಲಿ ಮಧ್ಯಮ ವರ್ಗದವರಿದ್ದಾರೆ. ಮಲ್ಲೇಶ್ವರದಲ್ಲಿ ಶೇ 70ರಷ್ಟು ಮಧ್ಯಮ ವರ್ಗದವರಿದ್ದಾರೆ. ವಲಸಿಗರಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಹಾಸನ ಭಾಗದವರೇ ಹೆಚ್ಚಿದ್ದಾರೆ. ಅವರೆಲ್ಲ ಬಿಜೆಪಿ ಪರ ಇಲ್ಲ.

l ನೀವು ಮತ್ತು ಈಶ್ವರ ಖಂಡ್ರೆ ಲೋಕಸಭೆ ಪ್ರವೇಶಿಸಿದರೆ ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಯತ್ನ ಸಲೀಸು ಅಲ್ಲವೇ?

ಲೋಕಸಭೆ ಚುನಾವಣೆಯಲ್ಲಿ ನಾನು ಕಣಕ್ಕಿಳಿಯಬೇಕೆಂದು ಡಿಸೆಂಬರ್‌ನಲ್ಲೇ ಪಕ್ಷದ ವಲಯದಲ್ಲಿ ಚರ್ಚೆಯಾಗಿತ್ತು. ಈ ಮಧ್ಯೆ, ಹಾಲಿ ಶಾಸಕರಿಗೆ ಟಿಕೆಟ್‌ ಬೇಡ ಎಂಬ ತೀರ್ಮಾನಕ್ಕೂ ವರಿಷ್ಠರು ಬಂದಿದ್ದರು. ಆದರೆ, ಅನಿವಾರ್ಯ ಇದ್ದ ಕಡೆ ನಿಲ್ಲಿಸಲು ತೀರ್ಮಾನಿಸಲಾಯಿತು. ನೀವು ಹೇಳುವುದು ನಿಜ. ಉಮೇಶ ಜಾಧವ (ಚಿಂಚೋಳಿ) ರಾಜೀನಾಮೆ ಮತ್ತು ಸಿ.ಎಸ್‌. ಶಿವಳ್ಳಿ (ಕುಂದಗೋಳ) ನಿಧನದಿಂದ ಎರಡು ಕ್ಷೇತ್ರಗಳು ಖಾಲಿಯಾಗಿವೆ. ನಾನು ಮತ್ತು ಈಶ್ವರ ಖಂಡ್ರೆ (ಭಾಲ್ಕಿ) ಆರಿಸಿ ಬಂದರೆ ಬಿಜೆಪಿ ಯತ್ನಕ್ಕೆ ಸುಲಭ ಆಗಬಹುದು ಎನ್ನುವುದು ಚರ್ಚೆಗೆ ಬಂದಿತ್ತು. ಆದರೆ, ಬಿಜೆಪಿಯ ಇಂಥ ದಾಳಿಯನ್ನು ಸಮರ್ಥವಾಗಿ ಎದುರಿಸಿದ್ದೇವೆ. ಅಷ್ಟೇ ಅಲ್ಲ, ಉಪ ಚುನಾವಣೆಗಳಲ್ಲಿ ಈ ಕ್ಷೇತ್ರಗಳನ್ನು ಮತ್ತೆ ಗೆಲ್ಲುವ ವಿಶ್ವಾಸವಿದೆ. ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದರೆ ಕಷ್ಟವೇನೂ ಅಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT