ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಒಯು: ಹೈಕೋರ್ಟ್‌ಗೆ ಬಿ ರಿಪೋರ್ಟ್‌ ಸಲ್ಲಿಕೆ

Last Updated 7 ಆಗಸ್ಟ್ 2019, 18:55 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ (ಕೆಎಸ್‌ಒಯು) ನಡೆದಿದೆ ಎನ್ನಲಾದ ನೇಮಕ ಮತ್ತು ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದ ‘ಬಿ’ ರಿಪೋರ್ಟ್‌ ಪ್ರತಿಯನ್ನು ಸರ್ಕಾರ ಬುಧವಾರ ಹೈಕೋರ್ಟ್‌ಗೆ ಸಲ್ಲಿಸಿತು.

ರಾಜ್ಯ ವಿಶ್ವವಿದ್ಯಾಲಯಗಳು ಮತ್ತು ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಾಲೇಜುಗಳ ಅಧ್ಯಾಪಕರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠಕ್ಕೆ ಸರ್ಕಾರಿ ವಕೀಲರು ಈ ಪ್ರತಿ ನೀಡಿದರು.

ಅದನ್ನು ದಾಖಲಿಸಿಕೊಂಡ ನ್ಯಾಯಪೀಠ, ಬಿ ರಿಪೋರ್ಟ್‌ನಲ್ಲಿರುವ ಅಂಶಗಳನ್ನು ಪರಿಶೀಲಿಸಿದ ನಂತರ ಅರ್ಜಿ ಕುರಿತು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ‍ಮುಂದೂಡಿತು.

ಕೆಎಸ್‌ಒಯುನಲ್ಲಿ ನೇಮಕಾತಿ ಮತ್ತು ಹಣಕಾಸು ವಹಿವಾಟಿನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳ ವಿಚಾರಣೆಗೆ ನ್ಯಾ.ಕೆ.ಭಕ್ತವತ್ಸಲ ನೇತೃತ್ವದ ಸಮಿತಿ ರಚಿಸಲಾಗಿತ್ತು. ಸಮಿತಿ ಸಲ್ಲಿಸಿದ್ದ ವರದಿ ಆಧರಿಸಿ ರಾಜ್ಯಪಾಲರು ತನಿಖೆಗೆ ಆದೇಶಿಸಿದ್ದರು.

ಮೈಸೂರಿನ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಕೆಎಸ್‌ಒಯು ಮಾಜಿ ಕುಲಪತಿಗಳಾದ ಪ್ರೊ. ಕೆ.ಎಸ್‌.ರಂಗಪ್ಪ ಮತ್ತು ಎಂ.ಜಿ ಕೃಷ್ಣನ್ ಹಾಗೂ ಇತರೆ ನಾಲ್ವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.

ತನಿಖೆ ಪೂರ್ಣಗೊಳಿಸಿದ್ದ ಪೊಲೀಸರು ಅಧೀನ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರು ತಪ್ಪಿತಸ್ಥರ ವಿರುದ್ಧ ಸರ್ಕಾರ ಯಾವುದೇ ಕ್ರಮ ಜರುಗಿಸದೆ, ಈ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದ್ದರು. ಹೀಗಾಗಿ, ಬಿ ರಿಪೋರ್ಟ್ ಮತ್ತು ತನಿಖೆ ವಿವರ ಸಲ್ಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.

ಖುಲಾಸೆ ಪ್ರಕರಣ ಸಮಿತಿಯ ಮಾಹಿತಿಗೆ ಆದೇಶ

ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯಗಳ ಆದೇಶ ಅಧ್ಯಯನಕ್ಕೆ ರಚಿಸಿರುವ ‘ರಾಜ್ಯ ಕ್ರಿಮಿನಲ್ ಪ್ರಕರಣಗಳ ಖುಲಾಸೆ ತೀರ್ಪುಗಳ ಪರಿಶೀಲನಾ ಸಮಿತಿ’ ನಡೆಸಿರುವ ಸಭೆಯ ನಡಾವಳಿಯ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

ವಕೀಲ ಎಸ್.ಉಮಾಪತಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ಪೀಠವು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಹಾಗೆ, ಪರಿಶೀಲನಾ ಸಮಿತಿ ಈವರೆಗೆ ನಡೆಸಿದ ಸಭೆಗಳ ನಡಾವಳಿಗಳನ್ನು ಸಲ್ಲಿಸಬೇಕು ಎಂದು ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆ ಮುಂದೂಡಿತು.

ರಾಜ್ಯ ಕ್ರಿಮಿನಲ್ ಪ್ರಕರಣಗಳ ಖುಲಾಸೆ ತೀರ್ಪುಗಳ ಪರಿಶೀಲನಾ ಸಮಿತಿಯು ಪ್ರತಿ ಮೂರು ತಿಂಗಳೊಳಗೆ ಆರೋಪಿಗಳನ್ನು ಖುಲಾಸೆಗೊಳಿಸಿದ ರಾಜ್ಯದ ಎಲ್ಲ ಕೋರ್ಟ್‌ಗಳ ತೀರ್ಪುಗಳನ್ನು ಪಡೆದು, ಖುಲಾಸೆಗೆ ನೀಡಲಾಗಿರುವ ಕಾರಣ ಪರಿಶೀಲಿಸಬೇಕು. ಆರೋಪಿಗಳು ಖುಲಾಸೆಯಾಗಲು ಪ್ರಾಸಿಕ್ಯೂಷನ್ ಇಲಾಖೆ ಅಥವಾ ತನಿಖಾಧಿಕಾರಿಯ ಅಸಮರ್ಪಕ ಕಾರ್ಯನಿರ್ವಹಣೆ ಇವೆರಡರಲ್ಲಿ ಯಾವುದು ಕಾರಣ ಎಂದು ಪತ್ತೆ ಹಚ್ಚಿ, ಆ ಕುರಿತು ಗೃಹ ಇಲಾಖೆಗೆ ವರದಿ ಸಲ್ಲಿಸಬೇಕು. ಅದನ್ನು ಆಧರಿಸಿ ಕರ್ತವ್ಯಲೋಪ ಎಸಗಿದವರ ವಿರುದ್ಧ ಸರ್ಕಾರ ಕ್ರಮ ಜರುಗಿಸುವಂತೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ.

ಆದರೆ, ಆ ಆದೇಶವನ್ನು ರಾಜ್ಯ ಕ್ರಿಮಿನಲ್ ಪ್ರಕರಣಗಳ ಖುಲಾಸೆ ತೀರ್ಪುಗಳ ಪರಿಶೀಲನಾ ಸಮಿತಿ ಪಾಲಿಸುತ್ತಿಲ್ಲ ಎಂದು ಅರ್ಜಿಯಲ್ಲಿ ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT