ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎತ್ತರಿಸಿದ ಪಾದಚಾರಿ ಮಾರ್ಗದಲ್ಲಿ ಸುಗಮ ಸಂಚಾರ

ಮೆಟ್ರೊ ನಿಲ್ದಾಣದಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಸಂಪರ್ಕ ವ್ಯವಸ್ಥೆ
Last Updated 30 ಮೇ 2019, 20:12 IST
ಅಕ್ಷರ ಗಾತ್ರ

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೆಟ್ರೊ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಎತ್ತರಿಸಿದ ಪಾದಚಾರಿ ಮಾರ್ಗ ಸಂಚಾರಕ್ಕೆ ಮುಕ್ತವಾಗಿದ್ದು, ಪ್ರಯಾಣಿಕರು ನೆಮ್ಮದಿಯಿಂದ ನಡೆದಾಡುವಂತಾಗಿದೆ.

ರೈಲು ನಿಲ್ದಾಣ ಬಳಿಯ ಮೆಟ್ರೊ ನಿಲ್ದಾಣವನ್ನು ಪ್ರತಿದಿನ ಸರಾಸರಿ 25 ಸಾವಿರ ಮಂದಿ ಬಳಸುತ್ತಿದ್ದಾರೆ. ಇವರಲ್ಲಿ ಬಹುತೇಕರು ರೈಲು ನಿಲ್ದಾಣಕ್ಕೆ ಬರುತ್ತಾರೆ. ಈ ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಮುನ್ನ ಮೆಟ್ರೊ ನಿಲ್ದಾಣದಿಂದ 300 ಮೀಟರ್ ಉದ್ದದ ಮಣ್ಣಿನ ರಸ್ತೆಯಲ್ಲೇ ರೈಲು ನಿಲ್ದಾಣಕ್ಕೆ ಜನ ಬರಬೇಕಿತ್ತು. ಈಗ ಅವರು ನಿರಾಯಾಸವಾಗಿ ರೈಲು ನಿಲ್ದಾಣ ತಲುಪುತ್ತಿದ್ದಾರೆ.

‘10ನೇ ಪ್ಲ್ಯಾಟ್‍ಫಾರಂಗೆ ಸಂಪರ್ಕ ಕಲ್ಪಿಸುವ ಈ ಪಾದಚಾರಿ ಮಾರ್ಗದಿಂದ ನಡೆದಾಡಲು ಸುಲಭವಾಗಿದೆ’ ಎಂದು ಪ್ರಯಾಣಿಕ ಪ್ರಸನ್ನ ಹೇಳಿದರು.

ಪಾದಚಾರಿ ಮಾರ್ಗದಿಂದ ರೈಲು ನಿಲ್ದಾಣಕ್ಕೆ ಪ್ರವೇಶಿಸುವಲ್ಲಿ ಟಿಕೆಟ್ ಕೌಂಟರ್ ಇದೆ. ಇಲ್ಲಿ ನಿತ್ಯ 6 ಗಂಟೆಗಳ ಒಂದು ಪಾಳಿಯಲ್ಲಿ ಸರಾಸರಿ 900 ಟಿಕೆಟ್‍ಗಳು ಖರೀದಿಯಾಗುತ್ತಿವೆ. ಇದಲ್ಲದೇ, ಕಾಯ್ದಿರಿಸಿದ ಟಿಕೆಟ್ ಹೊಂದಿದ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲೇ ಬರುತ್ತಾರೆ.

ಇನ್ನೂ ಅಷ್ಟೇ ಪ್ರಮಾಣದ ಪ್ರಯಾಣಿಕರು ರೈಲು ಇಳಿದು ಮೆಟ್ರೊ ನಿಲ್ದಾಣದ ಕಡೆಗೆ ಹೋಗುತ್ತಾರೆ. ಹೀಗಾಗಿ ಹೆಚ್ಚಿನ ಅನುಕೂಲವಾಗಿದೆ ಎನ್ನುತ್ತಾರೆಕೆಎಸ್‍ಆರ್ ರೈಲು ನಿಲ್ದಾಣದ ನಿರ್ದೇಶಕ ಸಂತೋಷ್ ಹೆಗಡೆ.

ಐಆರ್‌ಎಸ್‌ಡಿಸಿಗೆ ನಿರ್ವಹಣೆ: ‘ರೈಲು ನಿಲ್ದಾಣದ ಸ್ವಚ್ಛತಾ ನಿರ್ವಹಣೆಯ ಜವಾಬ್ದಾರಿಯನ್ನುರೈಲು ನಿಲ್ದಾಣಗಳ ಅಭಿವೃದ್ಧಿ ನಿಗಮಕ್ಕೆ (ಐಆರ್‌ಎಸ್‌ಡಿಸಿ) ವಹಿಸಲಾಗಿದೆ. ನಿರ್ವಹಣಾ ವೆಚ್ಚ ಸರಿದೂಗಿಸಿಕೊಳ್ಳಲು ಒಳಭಾಗದಲ್ಲಿರುವ 15 ಸಣ್ಣ ಮಳಿಗೆಗಳಅದಾಯವನ್ನು ನಿಗಮವೇ ಪಡೆದುಕೊಳ್ಳಲಿದೆ. ಹೆಚ್ಚಿನ ಮಳಿಗೆಗಳಿಗೆ ಅನುಮತಿ ನೀಡುವ ಅವಕಾಶವನ್ನೂ ಅವರಿಗೇ ನೀಡಲಾಗಿದೆ’ ಎಂದರು.

ಇಳಿಯಲು ಎಸ್ಕಲೇಟರ್

ರೈಲು ನಿಲ್ದಾಣದಲ್ಲಿ ಈಗ ಮೇಲೆ ಹತ್ತಲು ಮಾತ್ರ ಎಸ್ಕಲೇಟರ್ ವ್ಯವಸ್ಥೆ ಇದ್ದು, ಮುಂದಿನ ದಿನಗಳಲ್ಲಿ ಇಳಿಯಲು ಕೂಡ ಎಸ್ಕಲೇಟರ್‌ಗಳು ಬರಲಿವೆ.

ಎರಡು ಫ್ಲ್ಯಾಟ್‌ಫಾರಂ ಹೊರತುಪಡಿಸಿ ಎಲ್ಲೆಡೆ ಹತ್ತಲು ಎಸ್ಕಲೇಟರ್‌ಗಳು ಇವೆ.ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ನಾಲ್ಕೈದು ತಿಂಗಳಲ್ಲಿ ಕಾಮಗಾರಿ ಮುಗಿಯಲಿದೆ. ಆಗ ಇಳಿಯಲು ಕೂಡ ಎಸ್ಕಲೇಟರ್ ಲಭ್ಯವಾಗಲಿವೆ ಎಂದು ಸಂತೋಷ್ ಹೆಗಡೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT