ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಲಹಳ್ಳಿ ಕೆಳಸೇತುವೆ: ಆಮೆಗತಿ ಕಾಮಗಾರಿ, ಸವಾರರಿಗೆ ಕಿರಿಕಿರಿ

ಕಿಲೋ ಮೀಟರ್‌ಗಟ್ಟಲೇ ಸಾಲುಗಟ್ಟಿ ನಿಲ್ಲುವ ವಾಹನಗಳಿಂದ ಸ್ಥಳೀಯರಿಗೆ ತೊಂದರೆ
Last Updated 21 ಮೇ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಅತಿ ದಟ್ಟಣೆಯ ಕುಂದಲಹಳ್ಳಿ ರಸ್ತೆಯಲ್ಲಿ ಕೆಳಸೇತುವೆ ಕಾಮಗಾರಿ ಆಮೆಗತಿಯಲ್ಲಿ ನಡೆಯುತ್ತಿದ್ದು, ಇಲ್ಲಿ ವಾಹನ ದಟ್ಟಣೆ ಸಮಸ್ಯೆ ಮತ್ತಷ್ಟುಉಲ್ಬಣಗೊಂಡಿದೆ.

ವೆಲ್ಲಾರ ಜಂಕ್ಷನ್‌ನಿಂದವೈಟ್‌ಫೀಲ್ಡ್‌ನ ಹೋಪ್ ಫಾರ್ಮ್ ಜಂಕ್ಷನ್‌ವರೆಗೆ ಸಿಗ್ನಲ್‌ ಮುಕ್ತ ಕಾರಿಡಾರ್‌ ನಿರ್ಮಿಸಲು ಬಿಬಿಎಂಪಿ ಯೋಜನೆ ರೂಪಿಸಿತ್ತು. ಇದರ ಅಡಿ ನಗರದ ಮೂರು ಕಡೆ ಕೆಳಸೇತುವೆಗಳನ್ನು ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಕುಂದಲಹಳ್ಳಿಯದೂ ಒಂದು. ಇಲ್ಲಿನ ಜಂಕ್ಷನ್‌ ಮೂಲಕ ಪ್ರತಿ ಗಂಟೆಗೆ ಸರಾಸರಿ 2,000 ವಾಹನಗಳು (ದಟ್ಟಣೆ ಅವಧಿಯಲ್ಲಿ ಪರ್‌ ಕಾರ್‌ ಯೂನಿಟ್‌) ಹಾದುಹೋಗುತ್ತವೆ.

ದಶಕಗಳ ಹಿಂದೆಯೇ ಈ ಯೋಜನೆ ರೂಪಿಸಲಾಗಿತ್ತು. ಆದರೆ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಕು ಉಂಟಾದ ಕಾರಣ ಕಾಮಗಾರಿ ಆರಂಭವಾಗಲು ವಿಳಂಬವಾಗಿತ್ತು. ಎರಡು ತಿಂಗಳ ಹಿಂದಷ್ಟೇ ನಾಲ್ಕು ಪಥಗಳ ಕೆಳ ಸೇತುವೆ ಕಾಮಗಾರಿ ಆರಂಭಿಸಲಾಗಿದೆ. ಅದಕ್ಕಾಗಿ ರಸ್ತೆಯ ಒಂದು ಪಾರ್ಶ್ವವನ್ನು ಅಗೆಯಲಾಗಿದ್ದು, ಅದರ ಸುತ್ತ ಬ್ಯಾರಿಕೇಡ್‌ ಹಾಕಲಾಗಿದೆ. ಏಕಕಾಲದಲ್ಲಿ ಎರಡು ವಾಹನಗಳು ಹೋಗುವಷ್ಟು ಅಗಲದಷ್ಟು ಜಾಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ವೈಟ್‌ಫೀಲ್ಡ್‌, ಐಟಿಪಿಎಲ್‌ ಮುಂತಾದ ಪ್ರದೇಶಗಳಲ್ಲಿ ಶಾಲಾ–ಕಾಲೇಜುಗಳು, ಬಹುರಾಷ್ಟ್ರೀಯಕಂಪನಿಗಳಿದ್ದು, ಅವುಗಳಿಗೆ ಕುಂದಲಹಳ್ಳಿ ಜಂಕ್ಷನ್‌ ಪ್ರವೇಶ ದ್ವಾರದಂತಿದೆ. ಮಾರತ್ತಹಳ್ಳಿ ಮತ್ತು ಶಿರಡಿ ಸಾಯಿ ಬಡಾವಣೆ ಕಡೆಗೆ ತೆರಳುವ ವಾಹನಗಳೂ ಇಲ್ಲಿಂದಲೇ ಹಾದುಹೋಗಬೇಕು. ಈ ಜಂಕ್ಷನ್‌ನಲ್ಲಿ ವಾರಾಂತ್ಯದಲ್ಲಿಒಂದು ಕಿಲೊ ಮೀಟರ್‌ವರೆಗೂ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿದ್ದು, ಇದರಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ.

ಪ್ರಯಾಣಿಕರ ತಂಗುದಾಣ ಸ್ಥಳಾಂತರ: ಜಂಕ್ಷನ್‌ ಬಳಿ ಇದ್ದ ಬಸ್‌ ಪ್ರಯಾಣಿಕರ ತಂಗುದಾಣವನ್ನು ಕಾಮಗಾರಿ ಸಲುವಾಗಿ ಸ್ಥಳಾಂತರಿಸಲಾಗಿದೆ. ಪರ್ಯಾಯ ವ್ಯವಸ್ಥೆ ಮಾಡದ ಕಾರಣ ಜನ ಅಲ್ಲಿಯೇ ನಿಂತು ಬಿಸಿಲಿನಲ್ಲಿ ಬೇಯುತ್ತ ಬಸ್‌ಗಳಿಗಾಗಿ ಕಾಯಬೇಕಾದ ಸ್ಥಿತಿ ಇದೆ.

‘ಶಾಲಾ–ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದರಿಂದ ಶಾಲಾ ವಾಹನಗಳು ಸಂಚರಿಸುತ್ತಿಲ್ಲ. ಜೂನ್‌ನಲ್ಲಿ ಶಾಲಾ–ಕಾಲೇಜುಗಳು ಪ್ರಾರಂಭವಾಗುವುದರಿಂದ ದಟ್ಟಣೆ ಮತ್ತಷ್ಟು ಹೆಚ್ಚಲಿದೆ’ ಎಂದು ಇಲ್ಲಿಯ ನಿವಾಸಿಗಳು ಆತಂಕ ವ್ಯಕ್ತಪಡಿಸುತ್ತಾರೆ.

‘ನಾಲ್ವರು ಸಂಚಾರ ಪೊಲೀಸ್‌ ಸಿಬ್ಬಂದಿಯನ್ನು ಕೆಲಸಕ್ಕೆ ನಿಯೋಜಿಸಿದರೂ ಇಲ್ಲಿ ವಾಹನ ಸಂಚಾರ ನಿಯಂತ್ರಣ
ತುಂಬಾ ಕಷ್ಟ. ವಾರಾಂತ್ಯದಲ್ಲಿ ಇಲ್ಲಿ ಪರಿಸ್ಥಿತಿ ನಿಭಾಯಿಸಲು ಬೇರೆ ಕಡೆ ಕಾರ್ಯನಿರ್ವಹಿಸುವ ಸಿಬ್ಬಂದಿಯ ಸಹಾಯ ಪಡೆಯುತ್ತೇವೆ’ ಎಂದುಇಲ್ಲಿನ ಸಂಚಾರ ಪೊಲೀಸ್‌ ಸಿಬ್ಬಂದಿಯೊಬ್ಬರು ಪರಿಸ್ಥಿತಿಯನ್ನು ವಿವರಿಸಿದರು.

‘10 ವರ್ಷಗಳ ಹಿಂದೆ ಇಲ್ಲಿ ಸಿಗ್ನಲ್‌ ಇರಲಿಲ್ಲ. ಆದರೂ ಸಂಚಾರ ವ್ಯವಸ್ಥೆಸುಗಮವಾಗಿತ್ತು. ಈಗ ವಾಹನಗಳ
ಸಂಖ್ಯೆ ಜಾಸ್ತಿ ಆಗಿದೆ. ಕಾಮಗಾರಿಯಿಂದ ದಟ್ಟಣೆ ಇನ್ನಷ್ಟು ಹೆಚ್ಚಾಗಿದೆ’ ಎಂದು ಇಲ್ಲಿನ ನಿವಾಸಿ ಮುನಿಯಪ್ಪ ತಿಳಿಸಿದರು.

ದಟ್ಟಣೆಗೂ ಮಾಲ್‌ಗಳಿಗೂ ನಂಟು

ಕುಂದಲಹಳ್ಳಿ ಪ್ರದೇಶದ ಸುತ್ತಮುತ್ತ ಮಾಲ್‌ಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಸಂಜೆ ಸಮಯದಲ್ಲಿ ಗ್ರಾಹಕರು ಮಾಲ್‌ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ಈ ಪ್ರದೇಶದಲ್ಲಿ ವಾಹನ ದಟ್ಟಣೆ ಹೆಚ್ಚಾಗಲು ಇದೂ ಕಾರಣ. ಜಂಕ್ಷನ್‌ನಲ್ಲಿ ನಾಲ್ವರು ಸಂಚಾರ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಿದರೂ
ದಟ್ಟಣೆಯು ನಿಯಂತ್ರಣಕ್ಕೆ ಬರುತ್ತಿಲ್ಲ.

ಪಾಲಿಕೆ– ಸ್ಥಳೀಯರ ಹಗ್ಗಜಗ್ಗಾಟ

ಕಾಮಗಾರಿಯನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಬೇಕಾದರೆ, ರಸ್ತೆ ಬಂದ್‌ ಮಾಡುವುದು ಅನಿವಾರ್ಯ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳುತ್ತಾರೆ. ಆದರೆ, ಸ್ಥಳೀಯ ನಿವಾಸಿಗಳು ರಸ್ತೆ ಬಂದ್‌ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

‘ಕಾಮಗಾರಿ ಸಲುವಾಗಿ ಇಲ್ಲಿನ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಿದರೆ ನಮಗೆ ಸಮಸ್ಯೆ ಆಗುತ್ತದೆ. ಇಲ್ಲಿ ಪರ್ಯಾಯ ರಸ್ತೆ ಸಂಪರ್ಕ ಒದಗಿಸಲೂ ಸಾಧ್ಯವಾಗುವುದಿಲ್ಲ’ ಎಂಬುದು ಸ್ಥಳೀಯರ ಅಳಲು.

‌ಎರಡು ಕಡೆಯವರ ಹಗ್ಗಜಗ್ಗಾಟದಿಂದಾಗಿ ಈ ಕಾಮಗಾರಿ ಶೀಘ್ರ ಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ.

ಅಂಕಿ–ಅಂಶಗಳು

2013 - ಟೆಂಡರ್‌ ಕರೆದ ವರ್ಷ

311.14 ಮೀ -ಸೇತುವೆಯ ಉದ್ದ

21 - ಸ್ವಾಧೀನ ಪಡಿಸಿಕೊಂಡ ಖಾಸಗಿ ಸ್ವತ್ತುಗಳು

₹20 ಕೋಟಿ -ಭೂಸ್ವಾಧೀನಕ್ಕೆ ವ್ಯಯಿಸಿದ ಹಣ

***

ಕಾಮಗಾರಿ ಪೂರ್ಣಗೊಳಿಸಲು ರಸ್ತೆ ಬಂದ್‌ ಮಾಡಬೇಕು. ಹೀಗೆ ಮಾಡಿದರೆ ನಾಲ್ಕು ತಿಂಗಳಲ್ಲೇ ಕೆಲಸ ಮುಗಿಯಲಿದೆ. ಸಾರ್ವಜನಿಕರು ಸಮಸ್ಯೆಯನ್ನು ಸಹಿಸಿಕೊಳ್ಳಬೇಕು.

- ಕೆ.ಟಿ.ನಾಗರಾಜ್‌, ಮುಖ್ಯ ಎಂಜಿನಿಯರ್‌, ಬಿಬಿಎಂಪಿ (ಯೋಜನೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT