ಬುಧವಾರ, ಆಗಸ್ಟ್ 21, 2019
22 °C

ಮಹಡಿಯಿಂದ ಬಿದ್ದು ಕಾರ್ಮಿಕ ಸಾವು

Published:
Updated:

ಬೆಂಗಳೂರು: ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾರ್ಮಿಕ ಪ್ರೇಮ್‌ ಕುಮಾರ್ (32) ಎಂಬುವರು ಮೃತಪಟ್ಟಿದ್ದಾರೆ.

‘ಡಿ.ಜೆ. ಹಳ್ಳಿ ನಿವಾಸಿಯಾಗಿದ್ದ ಪ್ರೇಮ್‌ ಕುಮಾರ್ ಸಾವಿಗೆ ಕಟ್ಟಡದ ಮಾಲೀಕ ರಂದೀಪ್ ವಿಶ್ವಕರ್ಮ, ಎಂಜಿನಿಯರ್ ಸತೀಶ್ ವಿಶ್ವಕರ್ಮ ಹಾಗೂ ಗುತ್ತಿಗೆದಾರ ಶೇಖರ್ ಅವರೇ ಕಾರಣ. ಕೆಲಸದ ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ಮೃತರ ತಂದೆ ಡಿ. ಪುನಿಯಾ ದೂರು ನೀಡಿದ್ದಾರೆ. ‘ನಿರ್ಲಕ್ಷ್ಯದಿಂದ ಸಾವು (ಐಪಿಸಿ 304)’ ಆರೋಪದಡಿ ಮೂವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೆಬ್ಬಾಳ ಪೊಲೀಸರು ಹೇಳಿದರು.

‘ಇದೇ 7ರಂದು ಬೆಳಿಗ್ಗೆ ಹೆಬ್ಬಾಳದ ಮನೋರಾಯನಪಾಳ್ಯದ ನಂಜಮ್ಮ ಲೇಔಟ್‌ನಲ್ಲಿರುವ ನಿರ್ಮಾಣ ಹಂತದ ಕಟ್ಟಡದ ಕೆಲಸಕ್ಕೆ ಹೋಗಿದ್ದ ಪ್ರೇಮ್‌ಕುಮಾರ್, ಕಾಂಕ್ರಿಟ್‌ಗಾಗಿ ಕಬ್ಬಿಣದ ಚೌಕಟ್ಟುಗಳನ್ನು ಸಿದ್ಧಪಡಿಸುತ್ತಿದ್ದರು. ಅದೇ ವೇಳೆ ಎರಡನೇ ಮಹಡಿಯಿಂದ ಬಿದ್ದಿದ್ದರು’

‘ಸಹೋದ್ಯೋಗಿಗಳೇ ಪ್ರೇಮ್‌ಕುಮಾರ್ ಅವರನ್ನು ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ಪೆಟ್ಟು ಬಿದ್ದಿದ್ದರಿಂದ ಹಾಸ್‌ಮ್ಯಾಟ್ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಪೋರ್ಟಿಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

Post Comments (+)