ಎರಡನೇ ದಿನ ಕಾರ್ಮಿಕ ಸಂಘಟನೆ ಮುಷ್ಕರ

7
ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತೆಯರನ್ನು ಕನಿಷ್ಠ ನಿವೃತ್ತಿ ವೇತನ ಕಾಯ್ದೆಯಡಿ ತರಲು ಆಗ್ರಹ

ಎರಡನೇ ದಿನ ಕಾರ್ಮಿಕ ಸಂಘಟನೆ ಮುಷ್ಕರ

Published:
Updated:
Prajavani

ಹುಬ್ಬಳ್ಳಿ: ಮೋಟಾರು ವಾಹನ ಹಾಗೂ ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಕಾರ್ಮಿಕ ಸಂಘಟನೆಗಳು ಎರಡನೇ ದಿನವಾದ ಬುಧವಾರವೂ ನಗರದಲ್ಲಿ ಮುಷ್ಕರ ನಡೆಸಿದವು. ಆದರೆ, ಬಂದ್ ಇರದ ಕಾರಣ ಜನ ಜೀವನ ಸಾಮಾನ್ಯವಾಗಿತ್ತು.

ನಗರದ ಬಿಎಸ್‌ಎನ್‌ಎಲ್ ಕಚೇರಿ ಮುಂಭಾಗದ ಅಂಬೇಡ್ಕರ್ ಪ್ರತಿಮೆ ಬಳಿ ಸೇರಿದ ಹೋರಾಟಗಾರರು ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಘೋಷಣೆ ಕೂಗಿದರು. ಹೋರಾಟಗಾರರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ, ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದರು. ಸ್ಟೇಷನ್ ರಸ್ತೆ, ಚನ್ನಮ್ಮ ವೃತ್ತದ ಮೂಲಕ ತಹಶೀಲ್ದಾರ್ ಕಚೇರಿ ತಲುಪಿದ ಅವರು ಸಭೆ ನಡೆಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ, ಕೇಂದ್ರ ಸರ್ಕಾರ ಈಗಿರುವ ಕಾರ್ಮಿಕ ಕಾನೂನುಗಳನ್ನು ದುರ್ಬಲಗೊಳಿಸಿ ಕಾರ್ಪೋರೇಟ್ ಕಂಪನಿಗಳ ಪರವಾದ ಹೊಸ ಕಾನೂನು ಜಾರಿಗೆ ತರಲು ಹೊರಟಿದೆ. ಇಂತಹ ಪ್ರಯತ್ನವನ್ನು ಕೂಡಲೇ ನಿಲ್ಲಿಸಬೇಕು. ರಸ್ತೆ ಸುರಕ್ಷತಾ ಮಸೂದೆ 2017 ಜಾರಿ ಮಾಡಲು ಸರ್ಕಾರ ಹೊರಟಿದೆ. ಇದು ಜಾರಿಯಾದರೆ ಸಾರಿಗೆ ಕ್ಷೇತ್ರ ಸಂಕಷ್ಟಕ್ಕೀಡಾಗಲಿದೆ ಎಂದರು.

ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ಹೆಚ್ಚಿನ ಅನುದಾನ ನೀಡಬೇಕು. ಪಿಂಚಣಿ ಸೇರಿದಂತೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಜಾರಿಗೊಳಿಸಬೇಕು. ಕಾರ್ಮಿಕ ಕಾನೂನುಗಳು ಯಾವುದೇ ವಿನಾಯಿತಿ ಇಲ್ಲದೆ ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಪ್ರಧಾನ ಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಭಾರತ ಕಾರ್ಮಿಕ ಸಮ್ಮೇಳನದ ನಿರ್ಣಯದಂತೆ ಅಂಗನವಾಡಿ, ಬಿಸಿಯೂಟ, ಆಶಾ ಕಾರ್ಯಕರ್ತರನ್ನು ಕನಿಷ್ಠ ವೇತನ ಕಾಯ್ದೆಯಡಿ ತರಬೇಕು ಎಂದು ಹೇಳಿದರು.

ರೈತರ ಆತ್ಮಹತ್ಯೆ ತಡೆಗಟ್ಟಲು ಬೆಳೆಗಳಿಗೆ ಡಾ. ಸ್ವಾಮಿನಾಥನ್ ಆಯೋಗದ ವರದಿಯಂತೆ ಲಾಭದಾಯಕ ಬೆಲೆ ನಿಗದಿಪಡಿಸಬೇಕು. ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಳ್ಳಬೇಕು. ಹಮಾಲಿ, ಆಟೊ ಚಾಲಕರು, ಕಟ್ಟಡ ಕಾರ್ಮಿಕರು, ಮನೆಗೆಲಸದವರು ಸೇರಿದಂತೆ ಎಲ್ಲ ಅಸಂಘಟಿತ ಕಾರ್ಮಿಕರಿಗೆ ಉಚಿತ ವಸತಿ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ಅಶೋಕ ಬಾರ್ಕಿ, ಎನ್‌.ಎ ಖಾಜಿ, ರಾಜು ಮಮದಾಪೂರ, ಆರ್‌.ಎಫ್. ಕವಳಿಕಾಯಿ, ಜಿ.ಎಂ. ವೈದ್ಯ, ಗುರುಸಿದ್ದಪ್ಪ ಅಂಬಿಗೇರ ಇದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !