ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯದ ರೋಗಕ್ಕೆ ಮದ್ದು ನೀಡಿದ ಟೆಕಿ!

ಎಲೆಕ್ಟ್ರಾನಿಕ್‌ ಸಿಟಿಯ ಮಾರಗೊಂಡನಹಳ್ಳಿ ಕೆರೆ ಪಡೆಯಿತು ಮರುಜೀವ
Last Updated 28 ಮಾರ್ಚ್ 2019, 19:50 IST
ಅಕ್ಷರ ಗಾತ್ರ

ಬೆಂಗಳೂರು: ತಿಂಗಳಿಗೆ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ 39 ವರ್ಷದ ಸಾಫ್ಟ್‌ವೇರ್‌ ಉದ್ಯೋಗಿಯೊಬ್ಬರು ಗಬ್ಬೆದ್ದು ನಾರುತ್ತಿದ್ದ ಕೆರೆಯನ್ನು ಸ್ವಚ್ಛಗೊಳಿಸಿ ಸ್ಫೂರ್ತಿಯಾಗಿದ್ದಾರೆ.

ತ್ಯಾಜ್ಯದಿಂದ ಬಳಲುತ್ತಿದ್ದ ಮತ್ತು ಸಂರಕ್ಷಣೆಯಿಲ್ಲದೆ ಕ್ಷೀಣಿಸುತ್ತಿದ್ದ ಕೆರೆಗೆ ಮಾಂತ್ರಿಕ ಸ್ಪರ್ಶದಿಂದ ಮರುಜೀವ ನೀಡಿದ್ದು ಎಲೆಕ್ಟ್ರಾನಿಕ್ ಸಿಟಿಯ ನಿವಾಸಿ ವೇಣುಗೋಪಾಲ್ ಕುಂಪಳ್ಳಿ.

ಬೆಳ್ಳಂದೂರು ಕೆರೆಯ ಮಾರ್ಗದಲ್ಲಿಯೇ ಕಚೇರಿಗೆ ಹೋಗಲು ನಿತ್ಯ ಸಂಚರಿಸುತ್ತಿದ್ದ ಅವರು, ಮನೆಯ ಸಮೀಪದ ಮಾರಗೊಂಡನಹಳ್ಳಿ ಕೆರೆಯ ದುಃಸ್ಥಿತಿ ಕಂಡು ಪ್ರತಿದಿನ ಮರುಕಪಡುತ್ತಿದ್ದರು. ಹೇಗಾದರೂ ಅದನ್ನು ಸ್ವಚ್ಛಗೊಳಿಸಬೇಕೆಂಬ ಪಣತೊಟ್ಟ ಅವರು, ಒಂದು ಆಂದೋಲನವನ್ನೇ ರೂಪಿಸಿ ಹೂಳು ತುಂಬಿದ್ದ ಜಾಗದಲ್ಲೀಗ ನೀರು ತುಂಬುವಂತೆ ಮಾಡಿ ಕೆರೆಗೆ ಜೀವಕಳೆ ತಂದರು. ಎಲೆಕ್ಟ್ರಾನಿಕ್‌ ಸಿಟಿಯ ಶಿಕಾರಿಪಾಳ್ಯದಲ್ಲಿ ಈ ಕೆರೆ ಇದೆ.

ಈ ಭಗೀರಥನ ಕಥೆ ಹೀಗಿದೆ!: ಅಧ್ವಾನಗೊಂಡಿದ್ದ ಕೆರೆಯನ್ನು ಸ್ವಚ್ಛಗೊಳಿಸಲು ಅವರು ಪಣತೊಟ್ಟಿದ್ದು 2017ರ ಜುಲೈನಲ್ಲಿ. ಮೊದಲಿಗೆ ಹುಲಿಮಂಗಲ ಪಂಚಾಯಿತಿಯ ಅನುಮತಿ ಪಡೆದುಕೊಂಡು ಕೆರೆಯ ಸುತ್ತಮುತ್ತ ಪ್ರದೇಶದ ಸಮೀಕ್ಷೆ ನಡೆಸಿ, ಅದರ ಸಂಪೂರ್ಣ ಮಾಹಿತಿ ಕಲೆಹಾಕಿದರು.

ಸುತ್ತಲೂ ದಟ್ಟವಾಗಿ ಬೆಳೆದಿದ್ದ ಕಳೆ ಸಸ್ಯಗಳು ಮತ್ತು ತ್ಯಾಜ್ಯದ ಹಾಸಿಗೆಯಡಿಯಲ್ಲಿ ಕೆರೆ ಮುಚ್ಚಿದಂತಾಗಿತ್ತು. ಹೆಜ್ಜೆಯಿಡಲೂ ಸಾಧ್ಯವಾಗದಂತಾಗಿತ್ತು. ಕೆರೆ ರಕ್ಷಣೆಗೆ ಮುಂದಾದ ವೇಣುಗೋಪಾಲ್‌ ಅವರಲ್ಲಿ ಸರಿಯಾದ ಯಾವೊಂದು ಉಪಕರಣಗಳೂ ಇರಲಿಲ್ಲ. ಇಟ್ಟ ಹೆಜ್ಜೆ ಹಿಂದೆ ಇಡಬಾರದು ಎಂಬ ನಿರ್ಧಾರ ಕೈಗೊಂಡಿದ್ದ ಅವರು, ಕೆರೆಯನ್ನುಹೇಗೆ ಸ್ವಚ್ಛಗೊಳಿಸಬೇಕು ಎಂಬ ನೀಲನಕ್ಷೆ ಸಿದ್ಧಪಡಿಸಿಕೊಂಡರು.

ಕೆರೆ ಸಂರಕ್ಷಣೆಗೆ ಬೇಕಾದ ಉಪಕರಣಗಳನ್ನು ವಿಚಾರಿಸಿ ಪಟ್ಟಿಮಾಡಿಕೊಂಡು, ಪೊದೆ ಕತ್ತರಿಸುವ ಯಂತ್ರ ಹಾಗೂ ತ್ರಿಕೋನ ಬ್ಲೇಡ್, ಲಾಗ್‌ ಕಟರ್‌, ಟ್ರಿಮರ್‌ ಸೇರಿದಂತೆ ₹ 14 ಸಾವಿರ ಮೌಲ್ಯದ ವಿವಿಧ ಉಪಕರಣಗಳನ್ನು ಸ್ವಂತ ಹಣದಲ್ಲಿ ಚಿಕ್ಕಪೇಟೆ ಮಾರುಕಟ್ಟೆಯಲ್ಲಿ ಖರೀದಿಸಿದರು.

ಹುಟ್ಟಿನಿಂದಲೂ ನೀರಿಗಿಳಿಯದ ವೇಣುಗೋಪಾಲ್‌ ಅವರು ಕೆರೆ ಸ್ವಚ್ಛಗೊಳಿಸಲು ಪಿ.ವಿ.ಸಿ ಪೈಪ್‌ಗಳನ್ನು ಉಪಯೋಗಿಸಿಕೊಂಡು ಚಿಕ್ಕ
ದೊಂದು ದೋಣಿ ನಿರ್ಮಿಸಿಕೊಂಡರು. ಈಜು ಬಾರದ ಕಾರಣ ಜಾಕೆಟ್‌ ಧರಿಸಿ ಸ್ವಚ್ಛತೆಗೆ ಹೆಜ್ಜೆಯಿಟ್ಟರು. ಇದಲ್ಲದೆ, ಪರಿಸರ ಪ್ರೇಮಿಗಳ ನೆರವು ಪಡೆಯಲು ಫೇಸ್‌ಬುಕ್‌ನಲ್ಲಿ ಗ್ರೂಪ್ ರಚಿಸಿ ಜಾಗೃತಿ ಮೂಡಿಸಲಾರಂಭಿಸಿದರು. ಈ ಸಂದೇಶ ನೋಡಿದ್ದ ಯುವಕ–ಯುವತಿಯರೂ ಕೆರೆ ಸ್ವಚ್ಛಗೊಳಿಸಲು ಕೈಜೋಡಿಸಿದರು.

ವೇಣುಗೋಪಾಲ್‌ ಅವರ ಪರಿಸರ ಕಾಳಜಿ ಅರಿತ ಸಾರ್ವಜನಿಕರು ವಾರಾಂತ್ಯದಲ್ಲಿ ತಮ್ಮ ಮಕ್ಕಳನ್ನೂ ಕರೆದುಕೊಂಡು ಕೆರೆಯ ಸ್ವಚ್ಛತೆಗೆ ಕೈ ಜೋಡಿಸಿದರು. ಕೆರೆಯ ಸುತ್ತಲೂ ಗಿಡಗಳನ್ನು ನೆಟ್ಟು ನೀರೆರೆಯತೊಡಗಿದರು. ಸುಮಾರು 17ಎಕರೆಯನ್ನು ಸ್ವಚ್ಛಗೊಳಿಸಿದರು. ಕೆರೆ ದಂಡೆಯ ಖಾಲಿ ಸ್ಥಳದಲ್ಲಿ ಹೂವು–ಹಣ್ಣು ಸೇರಿದಂತೆ 500ಕ್ಕೂ ಅಧಿಕ ಗಿಡಗಳನ್ನು ನೆಟ್ಟರು. ಅವುಗಳೀಗ ಬೆಳೆದು ನಿಂತಿವೆ. ಅಲ್ಲಿಗೆ ಆಗಾಗ ಕುಡುಕರ ಗುಂಪು ಬರುತ್ತಿದ್ದರಿಂದ ಸಮಸ್ಯೆ ಎದುರಿಸಬೇಕಾಯಿತು. ಅಲ್ಲದೆ, ಕೆರೆ ಅಭಿವೃದ್ಧಿಗೆ ತೊಡಕು ಉಂ‌ಟಾಗುತ್ತಿತ್ತು. ಆದರೂ ಇದ್ಯಾವುದನ್ನು ಲೆಕ್ಕಿಸದ ವೇಣುಗೋಪಾಲ್ ಅವರು ಸ್ವಚ್ಛತೆಯಲ್ಲಿ ನಿರತರಾಗುತ್ತಿದ್ದರು. ದಟ್ಟಪೊದೆ, ಗಬ್ಬು
ನಾರುವ ತ್ಯಾಜ್ಯಗಳಿಂದ ತುಂಬಿದ್ದ ಮಾರಗೊಂಡನಹಳ್ಳಿ ಕೆರೆಯ ಬಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ಸಾರ್ವಜನಿಕರು, ಈಗ ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್‌ ಮಾಡಲು ದಂಡು ದಂಡಾಗಿ ಬರುತ್ತಿದ್ದಾರೆ.

ವೇಣುಗೋಪಾಲ್ ಅವರ ಪರಿಶ್ರಮದಿಂದ ಎರಡು ವರ್ಷಗಳ ನಂತರ ಇದೀಗ ಕೆರೆ ಮಾಲಿನ್ಯಮುಕ್ತವಾಗಿದೆ. ಟೆಕಿಯ ಪರಿಸರ ಪ್ರೀತಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಜಾಲತಾಣದಲ್ಲಿ ಮೆಚ್ಚುಗೆ

ಸಾಮಾಜಿಕ ಜಾಲತಾಣದಲ್ಲಿ ವೇಣುಗೋ‍ಪಾಲ್‌ ಅವರ ಸಾಮಾಜಿಕ ಕಾರ್ಯಕ್ಕೆ ನೂರಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಶಾಂತ್‌ ಕೃಷ್ಣನ್‌ ಸೇರಿದಂತೆ ಹಲವರು ‘ಇದೊಂದು ಅದ್ಭುತ ಕೆಲಸ’ ಎಂದು ಪ್ರತಿಕ್ರಿಯಿಸಿದ್ದಾರೆ.

‘ಐಟಿ ಕಂಪನಿಯೊಂದರ ವೇಣುಗೋಪಾಲ್ ಅವರು ಇಂಥ ಕೆಲಸ ಮಾಡಿರುವುದು ಅಭಿನಂದನೀಯ’ ಎಂದು ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ. ಈ ರೀತಿಯ ಮುಂದಾಳತ್ವವನ್ನು ಪ್ರತಿಯೊಬ್ಬರೂ ವಹಿಸಿಕೊಂಡರೆ ಉಳಿದವರು ಕೈಜೋಡಿಸುತ್ತಾರೆ. ಆಗ ಕೆರೆಗಳೂ ಉಳಿಯುತ್ತವೆ, ಉಸಿರಾಡಲು ಶುದ್ಧ ಗಾಳಿ, ದಿನಬಳಕೆಗೆ ಸ್ವಚ್ಛವಾದ ನೀರೂ ಸಿಗಲಿದೆ ಎಂದು ಹಲವರು ಅಭಿನಂದನೆ ತಿಳಿಸಿದ್ದಾರೆ.

ಎರಡು ದಿನ ಮೀಸಲು

ವೇಣುಗೋ‍ಪಾಲ್‌ ಅವರು ವಾರಾಂತ್ಯದ ಎರಡು ದಿನವನ್ನು ಕೆರೆಯ ಸ್ವಚ್ಛತೆಗೆಂದೇ ಮೀಸಲಿಟ್ಟಿದ್ದರು. ಅನೇಕ ಯುವಕರು–ಯುವತಿಯರೂ ವಾರಾಂತ್ಯದ ಎರಡು ದಿನಗಳಲ್ಲಿ ಬಿಡುವು ಮಾಡಿಕೊಂಡು ಅವರೊಂದಿಗೆ ಕೈ ಜೋಡಿಸಿದ್ದರು. ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ನಂತರ ಡ್ರೋಣ್‌ ಮೂಲಕ ಕೆರೆಯ ಸುತ್ತಮುತ್ತ ಪ್ರದೇಶವನ್ನು ಸೆರೆಹಿಡಿದಿದ್ದಾರೆ. ಫೇಸ್‌ಬುಕ್‌ ‍ಪೇಜ್‌ನಲ್ಲಿ (maragondanahalli lake) ಅಪ್‌ಲೋಡ್‌ ಕೂಡ ಮಾಡಿದ್ದಾರೆ.

ಅರಿವು ಮೂಡಿಸಲು ನಿರ್ಧರಿಸಿದೆ‘

‘ಮನೆಯ ಗಲೀಜು ನೀರನ್ನು ಕೆರೆಗೆ ಬಿಟ್ಟರು, ಕಸವನ್ನು ಬಿಸಾಡಿದರು, ಅಲ್ಲಿಯೇ ಶೌಚ ಮಾಡಿದರೂ ಯಾರೂ ಪ್ರಶ್ನಿಸುತ್ತಿರಲಿಲ್ಲ. ಒಂದೊಳ್ಳೆಯ ಕೆಲಸ ಮಾಡಲು ಮುಂದಾದರೂ ನೂರಾರು ಜನ ಪ್ರಶ್ನೆ ಮಾಡುತ್ತಾರೆ. ಎಷ್ಟೋ ಮಂದಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದೂ ಕೇಳಿದ್ದರು. ಅವರಿಗೆಲ್ಲಾ ಸ್ವಚ್ಛತೆಯ ಅರಿವು ಮೂಡಿಸುವ ನಿರ್ಧರಿಸಿ ಸಾಕಷ್ಟು ಸಂಶೋಧನೆ ಕೈಗೊಂಡೆ. ಈ ಕಾರ್ಯಕ್ಕೆ ಕೈಹಾಕಿದೆ’ ಎಂದು ವೇಣುಗೋಪಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT