ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಸರು ಗದ್ದೆಯಾಗುವ ವಾಕಿಂಗ್‌ ಪಥಗಳು

ಲಾಲ್‌ಬಾಗ್‌ನಲ್ಲಿ ವಾಯುವಿಹಾರ: ಕುಡಿಯುವ ನೀರಿಗೂ ಪರದಾಟ
Last Updated 22 ನವೆಂಬರ್ 2018, 19:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಲವು ಕಡೆ ವಾಯುವಿಹಾರ ಪಥಗಳಿಗೆ ಕಲ್ಲು ಹಾಕಿಸಿಲ್ಲ. ಮಳೆಗಾಲದಲ್ಲಿ ಕೆಸರು ಗದ್ದೆಯಾಗಿರುತ್ತವೆ. ಓಡಾಡೋದೇ ಕಷ್ಟಸಾಧ್ಯ’ ಎಂದು ಲಾಲ್‌ಬಾಗ್‌ನಲ್ಲಿ ವಾಕಿಂಗ್ ಮಾಡುವ ವಾಯು ವಿಹಾರಿಗಳು ಸಮಸ್ಯೆ ಹೇಳಿಕೊಂಡರು.

‘ಜನರು ಓಡಾಡುವ ಕಡೆ ಕಲ್ಲು ಹಾಕಿಸಿಲ್ಲ. ಎಲ್ಲೆಂದರಲ್ಲಿ ಕಾಂಕ್ರೀಟ್‌ ಕೆಲಸ ನಡೆಯುತ್ತದೆ. ಇದರಿಂದ ದೂಳು ಏಳುತ್ತದೆ. ಆರೋಗ್ಯ ವೃದ್ಧಿಸುವ ಬದಲು ಅನಾರೋಗ್ಯ ಹೆಚ್ಚುತ್ತದೆ. ನೈಸರ್ಗಿಕ ಪದ್ಧತಿಗಳನ್ನು ಬಳಸಿ ಕಟ್ಟಡ ಕಟ್ಟಬಹುದು. ಅನಗತ್ಯ ಕಾಮಗಾರಿಗಳನ್ನು ತಕ್ಷಣವೇ ನಿಲ್ಲಿಸಬೇಕು’ ಎಂದು ಶ್ರೀನಗರದ ನಿವಾಸಿ ಶಾಂತಲಾ ಅಭಿಪ್ರಾಯಪಟ್ಟರು.

‘ಪಿಇಎಸ್‌ ವಿಶ್ವವಿದ್ಯಾಲಯದವರು ಶೌಚಾಲಯ ಕಟ್ಟಿಸುತ್ತಿದ್ದಾರೆ. ಅದು ಒಳ್ಳೆಯ ಯೋಜನೆ. ಆದರೆ ಎಲ್ಲೆಂದರಲ್ಲಿ ಸಿಮೆಂಟ್, ಕಲ್ಲುಗಳನ್ನು ಹಾಕಿರುತ್ತಾರೆ. ಆತ್ಯಾಧುನಿಕ ಟಾಯ್ಲೆಟ್‌ಗಳ ಬದಲು, ಇರುವ ಸೌಲಭ್ಯಗಳನ್ನೇ ಉನ್ನತ ಮಟ್ಟಕ್ಕೆ ಹೆಚ್ಚಿಸಬಹುದು’ ಎಂದು ಅವರು ಹೇಳಿದರು.

ಕುಡಿಯುವ ನೀರಿಗೆ ತೊಂದರೆ: ‘ಲಾಲ್‌ಬಾಗ್‌ನಲ್ಲಿ ಒಂದೆರಡು ಕಡೆ ಮಾತ್ರ ಕುಡಿಯುವ ನೀರಿನ ಸೌಲಭ್ಯ ಇದೆ. ವಯಸ್ಸಾದವರು ನೀರು ಕುಡಿಯಲು ಸಾಕಷ್ಟು ದೂರ ನಡೆಯಬೇಕಿದೆ. ಕೆಲವೊಮ್ಮೆ ನೀರು ಬರುವುದೇ ಇಲ್ಲ’ ಎಂದು ವಾಯು ವಿಹಾರಿಯೊಬ್ಬರು ಹೇಳಿದರು. ಹೆಸರು ಕೇಳಿದರೆ, ‘ನಾನೊಬ್ಬ ಸರ್ಕಾರಿ ನೌಕರ. ನನ್ನ ಹೆಸರು ಪ್ರಸ್ತಾಪಿಸುವುದು ಬೇಡ’ ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಮುಕ್ತ ನೆಪಕ್ಕೆ ಮಾತ್ರ: ‘ಲಾಲ್‌ಬಾಗ್‌ ಪ್ಲಾಸ್ಟಿಕ್ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ. ಆದರೆ ಹೊರಗಿನಿಂದ ತಿಂಡಿ ತರುವುದು ಕಡಿಮೆಯಾಗಿಲ್ಲ. ಇಲ್ಲೇ ತಿಂದು ತೊಟ್ಟಿಗೆ ಹಾಕದೇ ಉದ್ಯಾನದಲ್ಲಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಕೆಲಸದವರು ಸ್ವಚ್ಛಗೊಳಿಸಿದ ಕೆಲವೇ ನಿಮಿಷಗಳಲ್ಲಿ ಪ್ಲಾಸ್ಟಿಕ್‌ ಮತ್ತೆ ಶೇಖರಗೊಳ್ಳುತ್ತಿದೆ’ ಎಂದು ಪದ್ಮನಾಭನಗರದ ನಿವಾಸಿ ಗಂಗಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಸೆಲ್ಫಿ ಹಾವಳಿ: ‘ಇಲ್ಲಿ ಸೆಲ್ಫಿ ತೆಗೆದು ಕೊಳ್ಳುವುದನ್ನು ನಿಷೇಧಿಸಲಾಗಿದೆ...’

ಉದ್ಯಾನದಲ್ಲಿ ಇಂತಹ ಫಲಕವಿರುವಲ್ಲೇ ಸೆಲ್ಫಿಪ್ರಿಯರು ಮೊಬೈಲ್‌ ಮೂಲಕ ಚಿತ್ರ ತೆಗೆದುಕೊಳ್ಳುತ್ತಾರೆ. ನಿತ್ಯ ಕಂಡುಬರುವ ನೋಟವಿದು. ದೊಡ್ಡ ಕೆರೆ, ತಾವರೆ ಕೊಳ, ನೀರಿನ ಹೊಂಡಗಳ ಬಳಿ ಇಂಥ ನೋಟಗಳು ಸಾಮಾನ್ಯ.

‘ಅಪಾಯಗಳ ಬಗ್ಗೆ ಎಚ್ಚರಿಸಿದರೂ ಯುವಜನರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ನಾವಾದರೂ ಎಷ್ಟು ಕಣ್ಗಾವಲು ಇಡಬಹುದು ನೀವೇ ಹೇಳಿ’ ಎಂದು ಉದ್ಯಾನದ ಕಾವಲುಗಾರರು ಅಸಹಾಯಕತೆ ವ್ಯಕ್ತಪಡಿಸಿದರು.

ಕೆರೆ, ಕಿರು ಜಲಪಾತದ ಬಳಿ ಸೇರುವ ಪಾರಿವಾಳಗಳು ಛಾಯಾಗ್ರಾಹಕರ ಕಾಟಕ್ಕೆ ಸಿಲುಕುತ್ತಲೇ ಇವೆ. ಗುಂಪು ಸೇರಿದ ಅವುಗಳನ್ನು ಕಲ್ಲು ಎಸೆದು, ಚದುರಿಸಿ ಚಿತ್ರ ತೆಗೆಯುವ ಪ್ರವಾಸಿಗರ ಸಂಖ್ಯೆ ದೊಡ್ಡದಿದೆ.

ಇವೆಲ್ಲಕ್ಕೂ ಕಡಿವಾಣ ಹಾಕಬೇಕು ಎಂಬುದು ಉದ್ಯಾನಕ್ಕೆ ಬರುವ ವಾಯುವಿಹಾರಿಗಳ ಸಂಘಟನೆಗಳ ಒತ್ತಾಯ.

ಅಕ್ರಮ ಚಟುವಟಿಕೆಗೆ ದಾರಿ

‘ಪಾಳು ಬಿದ್ದಿರುವ ಅಕ್ವೇರಿಯಂ, ಅಕ್ರಮ ಚಟುವಟಿಕೆಗೆ ದಾರಿ ಮಾಡಿಕೊಟ್ಟಿದೆ’ ಎಂದು ವಾಯುವಿಹಾರಿಯೊಬ್ಬರು ದೂರಿದರು.

‘ಅಕ್ವೇರಿಯಂನ ಸಮೀಪ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಇಲ್ಲಿಗೆ ಪ್ರತಿನಿತ್ಯ ವಾಯುವಿಹಾರಕ್ಕೆ ಬರುವ ನನ್ನ ಸ್ನೇಹಿತರು ಕೂಡ ಹೇಳುತ್ತಾರೆ. ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಅಲ್ಲಿ ಹುಡುಗಿಯರು ಸುತ್ತುವುದನ್ನು ಸಾಕಷ್ಟು ಜನರು ನನ್ನ ಬಳಿ ಹೇಳಿದ್ದಾರೆ’ ಎಂದು ಅವರು ವಿವರಿಸಿದರು.

ಪಥ ಸಮತಟ್ಟಾಗಿಲ್ಲ

ನಡೆಯುವ ಪಥದಲ್ಲಿ ಕೆಲವು ಕಡೆ ಉಬ್ಬುಗಳು ಹೆಚ್ಚಿವೆ. ವಯಸ್ಸಾದವರು ಬೀಳುತ್ತಾರೆ. ಮಣ್ಣಿನ ಪಥವನ್ನು ಬದಲಿಸಿ ಕಲ್ಲು ಹಾಕಿಸಿದರೆ ಅನುಕೂಲ

-ರವೀಂದ್ರ, ಲಕ್ಕಸಂದ್ರ

ಮಳೆ ನೀರು ಸಂಗ್ರಹಿಸಿ

ಲಾಲ್‌ಬಾಗ್‌ನಲ್ಲಿ ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಮಾಡಿದರೆ ಸಾಕಷ್ಟು ನೀರು ಉಳಿತಾಯ ಮಾಡಬಹುದು. ನೀರಿನ ಸಮಸ್ಯೆ ಇದೆ. ಅದರ ಪರಿಹಾರಕ್ಕೂ ದಾರಿ ಮಾಡಿಕೊಡಬೇಕು

-ಅನಿಲ್‌, ಕಬ್ಬನ್‌ಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT