ಭಾನುವಾರ, ಮೇ 9, 2021
18 °C
‘ಪ್ರಜಾವಾಣಿ’ ಜನಸ್ಪಂದನಕ್ಕೆ ತೋಟಗಾರಿಕೆ ಇಲಾಖೆಯ ಪ್ರತಿಸ್ಪಂದನ: ಉದ್ಯಾನದಲ್ಲಿ ನಿರ್ದೇಶಕರ ವಾಹನಕ್ಕೂ ಇಲ್ಲ ಪ್ರವೇಶ

ಒಂದೂವರೆ ತಿಂಗಳಲ್ಲಿ ಲಾಲ್‌ಬಾಗ್‌ ‘ವಾಹನ ಮುಕ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಟಗಾರಿಕೆ ಇಲಾಖೆಯ ನಿರ್ದೇಶಕರ ವಾಹನವೂ ಸೇರಿದಂತೆ ಯಾವುದೇ ಅಧಿಕಾರಿಯ ವಾಹನ ಲಾಲ್‌ಬಾಗ್‌ ಸಸ್ಯೋದ್ಯಾನದಲ್ಲಿ ಪ್ರವೇಶಿಸದಂತೆ ಇನ್ನು ಒಂದೂವರೆ ತಿಂಗಳಲ್ಲಿ ಸಂಪೂರ್ಣವಾಗಿ ನಿರ್ಬಂಧ ವಿಧಿಸಲಾಗುತ್ತದೆ.

ಈಗಾಗಲೇ ಸಾರ್ವಜನಿಕರ ವಾಹನಗಳಿಗೆ ಲಾಲ್‌ಬಾಗ್‌ನಲ್ಲಿ ಪ್ರವೇಶವಿಲ್ಲ. ಅಧಿಕಾರಿಗಳು ಸಹ ಅದೇ ಹಾದಿ ಹಿಡಿದ ಬಳಿಕ ಕೆಂಪುತೋಟ ಸಂಪೂರ್ಣವಾಗಿ ‘ವಾಹನ ಮುಕ್ತ ಪ್ರದೇಶ’ವಾಗಿ ಮಾರ್ಪಡಲಿದೆ.

‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಿಂದ ಲಾಲ್‌ಬಾಗ್‌ನಲ್ಲಿ ನಡೆಸಲಾಗಿದ್ದ ಜನಸ್ಪಂದನ ಸಭೆಯಲ್ಲಿ ಬಂದ ದೂರುಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅಧ್ಯಕ್ಷತೆಯಲ್ಲಿ ಬುಧವಾರ ಸಭೆ ನಡೆಯಿತು. ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದರು.


ಲಾಲ್‌ಬಾಗ್‌ ಅಭಿವೃದ್ಧಿ ಕುರಿತು ಚರ್ಚಿಸಲು ಸಚಿವ ಎಂ.ಸಿ. ಮನಗೂಳಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಎಂ.ಆರ್‌. ಚಂದ್ರಶೇಖರ್‌, ಎಂ.ಜಗದೀಶ್‌, ರವಿ ತಿರ್ಲಾಪುರ, ವೈ.ಎಸ್‌. ಪಾಟೀಲ, ಕೆ.ಎನ್‌. ತಿಲಕ್‌ಕುಮಾರ್‌, ಎಂ.ನಾಗರಾಜ, ಹರ್ಷ ಮಿತ್ತಲ್‌ ಭಾಗವಹಿಸಿದ್ದರು

ಉದ್ಯಾನದಲ್ಲಿ ಅಧಿ ಕಾರಿಗಳ ವಾಹನಗಳ ಓಡಾಟಕ್ಕೂ ನಿರ್ಬಂಧ ವಿಧಿಸಬೇಕು ಎನ್ನುವುದು ಜನಸ್ಪಂದನದಲ್ಲಿ ಪಾಲ್ಗೊಂಡವರ ಪ್ರಮುಖ ಬೇಡಿಕೆಯಾಗಿತ್ತು.

‘ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಒಳಗಿನ ಕಚೇರಿಗಳಿಗೆ ತೆರಳುವುದಕ್ಕೆ ಬ್ಯಾಟರಿಚಾಲಿತ ವಾಹನಗಳ ವ್ಯವಸ್ಥೆ ಮಾಡಲು ಇನ್ನು ಒಂದೂವರೆ ತಿಂಗಳು ಕಾಲಾವಕಾಶ ಬೇಕು. ಬಳಿಕ ನನ್ನ ವಾಹನಕ್ಕೂ ಉದ್ಯಾನದೊಳಗೆ ಪ್ರವೇಶಿಸಲು ಅವಕಾಶ ಇರಲಾರದು’ ಎಂದು ಪಾಟೀಲ ಹೇಳಿದರು.

‘ಪಾರ್ಕಿಂಗ್‌ ಪ್ರದೇಶದಲ್ಲಿ ಒಂದು ನೋಂದಣಿ ಪುಸ್ತಕ ಇಡುತ್ತೇವೆ. ಅಧಿಕಾರಿಗಳನ್ನು ಹೊರತುಪಡಿಸಿ ಬ್ಯಾಟರಿಚಾಲಿತ ವಾಹನ ಬಳಕೆ ಮಾಡುವ ಇತರರು ಯಾವ ಕಚೇರಿಗೆ, ಯಾವ ಉದ್ದೇಶಕ್ಕೆ ಬಂದಿದ್ದಾರೆ ಎನ್ನುವುದನ್ನು ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುತ್ತೇವೆ’ ಎಂದರು.

‘ಗಾಜಿನ ಮನೆಯ ಎಡಭಾಗದಲ್ಲಿ ಪರಿಸರಸ್ನೇಹಿ ಶೌಚಾಲಯವನ್ನು ಹೊಸದಾಗಿ ನಿರ್ಮಿಸಲಾಗಿದ್ದು, ನಸುಕಿನಲ್ಲಿ ವಾಯುವಿಹಾರ ಹಾಗೂ ವ್ಯಾಯಾಮಕ್ಕಾಗಿ ಬರುವವರಿಗೆ ಅನುಕೂಲವಾಗುವಂತೆ ಎಲ್ಲ ಉದ್ಯಾನಗಳನ್ನು ಬೆಳಿಗ್ಗೆ 5.30ರಿಂದಲೇ ತೆರೆಯುವಂತೆ ಆದೇಶಿಸಲಾಗಿದೆ. ಸ್ವಚ್ಛತೆ ಕಾಪಾಡುವಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲಾಗುವುದು’ ಎಂದು ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ತಿಳಿಸಿದರು.

ಸಿದ್ದಾಪುರ ಗೇಟ್‌ ಬಳಿಯ ‘ತಿರುಗುವ ದ್ವಾರ’ ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇರುವುದನ್ನು ಜಂಟಿ ನಿರ್ದೇಶಕರು ಒಪ್ಪಿಕೊಂಡರು.

11 ಕಡೆ ಕುಡಿಯುವ ನೀರಿನ ಸೌಲಭ್ಯ

ಉದ್ಯಾನದಲ್ಲಿ ಕುಡಿಯುವ ನೀರಿನ ಸೌಲಭ್ಯ ಅಗತ್ಯ ಪ್ರಮಾಣದಲ್ಲಿ ಇಲ್ಲ ಎನ್ನುವ ದೂರು ಜನಸ್ಪಂದನದಲ್ಲಿ ಬಂದಿತ್ತು. ಅದಕ್ಕೆ ಪ್ರತಿಕ್ರಿಯಿಸಿದ ಇಲಾಖೆಯ ಉಪನಿರ್ದೇಶಕ ಎಂ.ಆರ್‌.ಚಂದ್ರಶೇಖರ್‌, ‘ಮೊದಲು ಏಳು ಕಡೆಗಳಲ್ಲಿ ಈ ಸೌಲಭ್ಯ ಇತ್ತು. ಇಷ್ಟು ಸಾಲದು ಎಂಬ ಅಭಿಪ್ರಾಯ ಬಂದ ಬಳಿಕ ಹೊಸದಾಗಿ ನಾಲ್ಕು ಕಡೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದೇವೆ’ ಎಂದು ಸಭೆಯ ಗಮನಕ್ಕೆ ತಂದರು.

‘ಉದ್ಯಾನದಲ್ಲಿ ಪ್ರಾಥಮಿಕ ವೈದ್ಯಕೀಯ ಸೌಲಭ್ಯಗಳಿದ್ದು, ತುರ್ತು ಚಿಕಿತ್ಸೆಗೆ ಕರೆದೊಯ್ಯಲು ಆಂಬುಲೆನ್ಸ್‌ ಸೌಕರ್ಯವೂ ಇದೆ’ ಎಂದು ಹೇಳಿದರು.

‘ಕಸದ ಸಮಸ್ಯೆಯನ್ನು ಬಗೆಹರಿಸಲು ಬ್ಯುಟಿಫುಲ್‌ ಬೆಂಗಳೂರು ಸಂಘಟನೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಉದ್ಯಾನದ ಆವರಣದಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದ ಕಸದ ಹಾವಳಿ ಬಹುಪಾಲು ತಗ್ಗಿದೆ. ಹಸಿ ಹಾಗೂ ಒಣ ಕಸವನ್ನು ಪ್ರತ್ಯೇಕವಾಗಿ ಸಂಗ್ರಹಿಸಲು 400 ಡಸ್ಟ್‌ ಬಿನ್‌ಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

* ಉದ್ಯಾನವನ್ನು ಅಭಿವೃದ್ಧಿಗೊಳಿಸುವ ಇಲಾಖೆಯ ಪ್ರಯತ್ನಕ್ಕೆ ಪ್ರಜಾವಾಣಿ ಹಾಗೂ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳು ಕೈಜೋಡಿಸಿರುವುದು ಸ್ತುತ್ಯರ್ಹ.

-ಎಂ.ಸಿ. ಮನಗೂಳಿ, ತೋಟಗಾರಿಕೆ ಸಚಿವ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು