ಲಾಲ್ಬಾಗ್: ಎತ್ತ ನೋಡಿದರೂ ಬಾಪು...

ಬೆಂಗಳೂರು: ಅಲ್ಲಿ, ಗಾಜಿನ ಮನೆ ಪ್ರವೇಶಿಸುತ್ತಿದ್ದಂತೆ ‘ರಘುಪತಿ ರಾಘವ ರಾಜಾರಾಂ...’ ಭಜನೆ ಮೊಳಗುತ್ತಿತ್ತು. ಸಾವಿರಾರು ಹೂಗಳಲ್ಲಿ ಮೈದಳೆದ ಸಬರಮತಿ ಆಶ್ರಮದ ಮುಂದೆ ಧ್ಯಾನಸ್ಥ ಸ್ಥಿತಿಯಲ್ಲಿ ಗಾಂಧಿ ತಾತಾ ಕುಳಿತಿದ್ದ. ಸಿರಿಧಾನ್ಯದಲ್ಲಿ ಮೂಡಿ ಬಂದ ಮೊಮ್ಮಗನೊಂದಿಗೆ ಕೋಲು ಹಿಡಿದುಕೊಂಡು ಬರುತ್ತಿದ್ದ...
ಲಾಲ್ಬಾಗ್ನಲ್ಲಿ ಶುಕ್ರವಾರ ಎತ್ತ ನೋಡಿದರೂ ಬಾಪೂಜಿಯದೇ ಬಿಂಬ. ಆತನದೇ ಪ್ರತಿಮೆಗಳು, ಸಂದೇಶಗಳು. ಸತ್ಯ, ಶಾಂತಿ, ಅಹಿಂಸೆ, ಸರಳ ಜೀವನದ ಸಂದೇಶವನ್ನು ಅಲ್ಲಿನ ನೋಟಗಳು ಸಾರುತ್ತಿದ್ದವು.
ಫಲಪುಷ್ಪ ಪ್ರದರ್ಶನದ ಸಂಭ್ರಮ ಶುಕ್ರವಾರ ಆರಂಭವಾಗಿದ್ದು, ಜ.27ರವರೆಗೆ ನಡೆಯಲಿದೆ. ಸಾಬರಮತಿ ಆಶ್ರಮದ ಅಂಗಳದಲ್ಲಿ ವೇಮಗಲ್ ಸೋಮಶೇಖರ್ ಅವರು ಗಾಂಧಿ ವೇಷ ತೊಟ್ಟು ಕೂತಿರುವುದನ್ನು ಕಂಡ ಮಕ್ಕಳು, ‘ಅಮ್ಮಾ... ಅಲ್ನೋಡು ‘ತಾತ, ಗಾಂಧಿ ತಾತ...’ ಎಂದು ಖುಷಿಯಿಂದ ತೋರಿಸುತ್ತಿದ್ದರು. ತಾತನ ಪಕ್ಕ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಬಲಭಾಗದಲ್ಲಿರುವ ಬಾಪು ಕುಟೀರದಲ್ಲಿ ಗಿರಿಜಾ ಗಣಪತಿ ಹೆಗಡೆ ಚರಕದಿಂದ ನೂಲು ತೆಗೆಯುತ್ತಾ ಕೂತಿದ್ದರು. ಆಶ್ರಮದ ಹಿಂಭಾಗ ಬಂದರೆ ರಾಜ್ಘಾಟ್, ದಂಡಿಯಾತ್ರೆಯ ಚಿತ್ರಣ. ಎಡಭಾಗದಲ್ಲಿ ಮೊಮ್ಮೊಕ್ಕಳೊಂದಿಗೆ ಗಾಂಧಿ ನಿಂತಿರುವ ಮತ್ತೊಂದು ಸಿರಿಧಾನ್ಯದ ಪ್ರತಿಮೆ, ವರ್ಟಿಕಲ್ ಉದ್ಯಾನದ ಪುಟ್ಟ ಪುಟ್ಟ ಗಿಡಗಳ ಸುತ್ತ ಜನ ಮತ್ತೆ ಮತ್ತೆ ಸುಳಿದಾಡುತ್ತಿದ್ದರು.
ಹಿರಿಯರು– ಕಿರಿಯರು ಎನ್ನದೇ ಎಲ್ಲರೂ ಗಾಂಧಿಯನ್ನು ಕಂಡು ಸೆಲ್ಫಿಗೆ ಮುಖವೊಡ್ಡಿದರು. ಬಾಪು ಅವರ ಸಂದೇಶ ಸಾರುವ ಮೂರು ಕೋತಿಗಳ ಪ್ರತಿಮೆಗಳು ಫೋಟೊ ಪ್ರಿಯರನ್ನು ಹೆಚ್ಚಾಗಿ ಆಕರ್ಷಿಸಿದವು. ಸುತ್ತೆಲ್ಲ ಬಗೆಬಗೆಯ ಬಣ್ಣದ ಹೂಗಳು ಪ್ರದರ್ಶನಗೊಂಡಿದ್ದವು. ಪುಣೆ, ಊಟಿಯ ಹೂವುಗಳ ಸಮಾಗಮವೂ ಆಗಿದೆ.
ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ‘ಬಾಪು– ಕಸ್ತೂರಬಾ ಅವರ 150ನೇ ಜನ್ಮ ವರ್ಷಾಚರಣೆಯ ನಿಮಿತ್ತ ಆಯೋಜಿಸಿರುವ ಗಾಂಧಿ ಸ್ಮರಣೆಯ ಈ ಫಲಪುಷ್ಪ ಪ್ರದರ್ಶನ, ನಾಡಿನ ಜನತೆಯನ್ನು ಅಧಿಕ ಸಂಖ್ಯೆಯಲ್ಲಿ ಆಕರ್ಷಿಸಲಿದ್ದು, ಅವರ ಜೀವನ ಚರಿತ್ರೆ, ನಡವಳಿಕೆಯನ್ನು ಬಿಂಬಿಸುವಂಥದ್ದು. ಅಲ್ಲದೆ, ಅವರ ಸಿದ್ಧಾಂತಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ರೂಪುಗೊಂಡಂಥವು’ ಎಂದು ಹೇಳಿದರು.
‘ಇದೇ ಮೊದಲ ಬಾರಿಗೆ ಫಲಪುಷ್ಪ ಪ್ರದರ್ಶನ ನೋಡಲು ಬಂದಿದ್ದೇವೆ. ಕೇವಲ ಪುಸ್ತಕದಲ್ಲಿ ಗಾಂಧಿ ತಾತನ ಬದುಕನ್ನು ಓದಿಕೊಂಡ ನಮಗೆ, ಇಲ್ಲಿ ಅವರ ಜೀವನದ ಪ್ರಮುಖ ಘಟನೆಗಳನ್ನು ಕಾಣುವ ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ಬಹಳ ಕುತೂಹಲದಿಂದ ಪ್ರದರ್ಶನವನ್ನು ವೀಕ್ಷಿಸಿದ್ದೇವೆ. ನಾವೂ ಗಾಂಧಿ ತತ್ವದಾರ್ಶಗಳನ್ನು ಪಾಲಿಸುತ್ತೇವೆ’ ಎಂದು ಹೇರೋಹಳ್ಳಿಯ ಜಿಎಚ್ಎಸ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಿಳಿಸಿದರು.
ಗಾಜಿನ ಮನೆಯ ಹೊರಭಾಗದಲ್ಲಿರುವ ಬೃಹದಾಕಾರದ ಚರಕ, ಗಾಂಧಿ ಕನ್ನಡಕದ ಬಳಿಯೂ ಜನ ಕಿಕ್ಕಿರಿದು ಫೋಟೊ ತೆಗಿಸಿಕೊಂಡರು. ಗಾಂಧಿ ಕುರಿತ ಪುಸ್ತಕ, ಅಂಚೆ ಚೀಟಿಗಳ ಪ್ರದರ್ಶನದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿತ್ತು.
‘ಗಾಂಧಿಯ ಸರಳ ಜೀವನವೆ ಪ್ರೇರಣೆ’
‘ಮಹಾತ್ಮ ಗಾಂಧೀಜಿ ಅವರು ಅತ್ಯಂತ ಸರಳವಾಗಿ ಬದುಕಿದ್ದವರು. ಇದ್ದಷ್ಟು ಕಾಲ ಸತ್ಯ, ಶಾಂತಿ, ಅಹಿಂಸೆಯನ್ನೇ ಮಂತ್ರವಾಗಿ ಜಪಿಸಿದ್ದವರು. ನಾನು ಗಾಂಧಿಯನ್ನು ಮೆಚ್ಚಿಕೊಳ್ಳಲು ಇದೇ ಕಾರಣ. ನನಗೂ ಅದೇ ಪ್ರೇರಣೆ’ ಎಂದು ಗಾಂಧಿ ವೇಷಧಾರಿ ವೇಮಗಲ್ ಸೋಮಶೇಖರ್ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
‘ಈ ತನಕ ಹಲವಾರು ಕಾರ್ಯಕ್ರಮಗಳಲ್ಲಿ ಗಾಂಧಿ ವೇಷ ತೊಟ್ಟು ಕೂತಿರುವೆ. ಇಲ್ಲಿಯೂ ಹಾಗೇ ಕೂರಬೇಕಿನಿಸಿದ್ದರಿಂದ ಮತ್ತೆ ಗಾಂಧಿ ವೇಷಧಾರಿಯಾಗಿ ಇಂದಿನ ಪೀಳಿಗೆಗೆ ಅವರ ಸಂದೇಶಗಳನ್ನು ಸಾರಲು ಬಂದಿರುವೆ’ ಎಂದರು.
‘ಇಂದಿನ ಜನ, ಸರಳ ಜೀವನ ಬಾಳುವ ಬದಲು, ಐಷಾರಾಮಿ ಜೀವನಕ್ಕೆ ಹಾತೊರೆದಿರುವುದು ವಿಷಾದನೀಯ. ಇನ್ನಾದರೂ, ಗಾಂಧಿಯ ತತ್ವದಾರ್ಶಗಳನ್ನು ಪಾಲಿಸುವಂತಾಗಬೇಕು’ ಎಂದು ಹೇಳಿದರು.
**
ಫಲಪುಷ್ಪ ಪ್ರದರ್ಶನ, ಇಂದಿನ ಪೀಳಿಗೆಯ ಮಕ್ಕಳಿಗೆ ಮಹಾತ್ಮನನ್ನು ಪರಿಚಯಿಸಲು ನೆರವಾಗಲಿದೆ. ಬಾಪು ಬದುಕಿನ ಅನಾವರಣ ಕಣ್ಣಿಗೆ ಹಬ್ಬದಂತಿದೆ
– ಮುಕುಂದ್ರಾವ್, ಬಿಲೇಕಹಳ್ಳಿ ನಿವಾಸಿ
**
ಇದೇ ಮೊದಲ ಬಾರಿ ಪ್ರದರ್ಶನವನ್ನು ನೋಡಲು ಕುಟುಂಬ ಸಮೇತ ತಿಪಟೂರಿನಿಂದ ಬಂದಿದ್ದೇವೆ. ಗಾಂಧಿ ಸ್ಮರಣೆ ನಿಜಕ್ಕೂ ಅರ್ಥಪೂರ್ಣವಾಗಿದ್ದು, ತುಂಬ ಖುಷಿಯಾಗಿದೆ.
–ಮೇಘಶ್ರೀ ವೆಂಕಟೇಶ್
**
ಲಾಲ್ಬಾಗ್ಗೆ ಭೇಟಿ ನೀಡಿದವರ ಸಂಖ್ಯೆ
ವಯಸ್ಕರು- 10,200
ಮಕ್ಕಳು - 1,400
ಸಂಗ್ರಹವಾದ ಹಣ - ₹4.22 ಲಕ್ಷ
ಬರಹ ಇಷ್ಟವಾಯಿತೆ?
9
1
0
0
0
0 comments
View All