ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ನ ಮತ್ಸ್ಯಾಲಯ ನವೀಕರಣ ಮುಂದೂಡಿದ ಇಲಾಖೆ

ಲಾಲ್‌ಬಾಗ್‌ ಸಸ್ಯೋದ್ಯಾನ: ಕಾಮಗಾರಿಗೆ ಹಣದ ಕೊರತೆ
Last Updated 19 ಫೆಬ್ರುವರಿ 2019, 19:33 IST
ಅಕ್ಷರ ಗಾತ್ರ

ಬೆಂಗಳೂರು: ‌ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿರುವಪುರಾತನ ಕಟ್ಟಡವಾದ ಮತ್ಸ್ಯಾಲಯ ಪಾಳು ಬಿದ್ದು ದಶಕಗಳೇ ಗತಿಸಿದೆ. ಇದರ ನವೀಕರಣಕ್ಕೆ ಪ್ರಸ್ತಾವ ಸಿದ್ಧಪಡಿಸಿದ್ದ ರಾಜ್ಯ ತೋಟಗಾರಿಕೆ ಇಲಾಖೆ ಸದ್ಯ ಹಣಕಾಸಿನ ಕೊರತೆಯಿಂದಾಗಿ ಈ ಯೋಜನೆಯನ್ನು ಮುಂದೂಡಿದೆ.

‌‘ಪ್ರಜಾವಾಣಿ’ ಮತ್ತು ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಗಳಿಂದ ಲಾಲ್‌ಬಾಗ್‌ನಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜನಸ್ಪಂದನ ಸಭೆಯಲ್ಲಿ ಮತ್ಸ್ಯಾಲಯವನ್ನು ನವೀಕರಿಸದ ಹಾಗೂ ಐತಿಹಾಸಿಕ ಸ್ಮಾರಕವನ್ನು ರಕ್ಷಿಸದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಕ್ರಮವಹಿಸುವುದಾಗಿ ಇಲಾಖೆ ಅಧಿಕಾರಿಗಳು ಭರವಸೆಯನ್ನೂ ನೀಡಿದ್ದರು. ಆದರೆ, ಈ ತನಕ ಯಾವುದೇ ಕ್ರಮಕೈಗೊಂಡಿಲ್ಲ.‌‌

‘₹4 ಕೋಟಿ ವೆಚ್ಚದಲ್ಲಿ ಮತ್ಸ್ಯಾಲಯ ಅಭಿವೃದ್ಧಿಪಡಿಸುವುದಾಗಿ ಇನ್ಫೊಸಿಸ್‌ ಪ್ರತಿಷ್ಠಾನ ತಿಳಿಸಿತ್ತು. ಒಂದು ವೇಳೆ ಇದು ಪಾರಂಪರಿಕ ಕಟ್ಟಡವಾದರೆ ನಮ್ಮ ಇಲಾಖೆಯಿಂದ ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ. ಈ ಕಾರ್ಯದ ಬಗ್ಗೆ ಈ ಹಿಂದೆ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗಿತ್ತು. ಅವರಿಂದ ಯಾವುದೇ ಉತ್ತರ ಬಂದಿರಲಿಲ್ಲ. ಹಾಗಾಗಿ, ನವೀಕರಣ ಕಾರ್ಯ ಹಿಂದೆ ಬಿದ್ದಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಕಾಮಗಾರಿಗೆ ಸುಮಾರು ₹3.50 ಕೋಟಿ ವೆಚ್ಚ ತಗಲುತ್ತದೆ ಎಂದು ಪುರಾತತ್ವ ಇಲಾಖೆ ತಿಳಿಸಿದೆ.ಆದರೆ, ಕಾಮಗಾರಿಗೆ ಅಗತ್ಯವಿರುವಷ್ಟು ಹಣ ಸದ್ಯಕ್ಕೆ ನಮ್ಮಲ್ಲಿಲ್ಲ’ ಎಂದರು.

‘ಸರ್ಕಾರದಿಂದ ಇಲಾಖೆಗೆ ಒಟ್ಟು ₹20 ಕೋಟಿ ಮಾತ್ರ ಅನುದಾನ ಸಿಕ್ಕಿದೆ. ಇದರಲ್ಲಿ ₹12 ಕೋಟಿ ಉದ್ಯಾನಗಳ ನಿರ್ವಹಣೆಗೆ ವ್ಯಯವಾದರೆ, ಇನ್ನುಳಿದ ಹಣ ಅಭಿವೃದ್ಧಿಗೆ ಮೀಸಲಿಡಬೇಕಾಗುತ್ತದೆ. ಈ ಪೈಕಿ, ಕೃಂಬಿಗಲ್ ಹಾಲ್‌ ಅಭಿವೃದ್ಧಿಗೆ ಒಂದಷ್ಟು ಹಣ ಮೀಸಲಿಟ್ಟಿದ್ದರಿಂದ ಮತ್ಸ್ಯಾಲಯ ನವೀಕರಣಕ್ಕೆ ಹಣ ಇಲ್ಲದಂತಾಗಿದೆ’ ‌ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಂ.ಜಗದೀಶ್‌ ಹೇಳಿದರು.

‘ಮುಂಬರುವ ಬಜೆಟ್‌ನಲ್ಲಿ ಇಲಾಖೆಗೆ ಸಿಗುವ ಹಣದಲ್ಲಿಯೇ ಕಾಮಗಾರಿ ನಡೆಸಲು ನಿರ್ಧರಿಸಲಾಗಿದೆ. ಅಲ್ಲದೇ, ಕಾರ್ಪೋರೇಟ್‌ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ನಿಧಿ ಅನುದಾನದಡಿಯಲ್ಲಿ ಹಣಕಾಸಿನ ನೆರವು ಸಹ ಸಿಗಲಿದೆ’ ಎಂದು ಮಾಹಿತಿ ನೀಡಿದರು.

ಹುಳುಹುಪ್ಪಟೆಗಳ ಆವಾಸ ಸ್ಥಾನ: ‘ಮತ್ಸ್ಯಾಲಯ ಕಟ್ಟಡ ಪಾಳು ಬಿದ್ದಿದ್ದರಿಂದ ಹುಳುಹುಪ್ಪಟೆಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಹಲವು ಬಾರಿ ಇಲ್ಲಿ, ಹಾವು ಹಾಗೂ ಚೇಳಿನಂತಹ ವಿಷಜಂತುಗಳನ್ನು ನೋಡಿದ್ದೇವೆ. ಕೆಲವರು ಕಚ್ಚಿಸಿಕೊಂಡದ್ದು ಉಂಟು’ ಎಂದು ಸಾರ್ವಜನಿಕರೊಬ್ಬರು ದೂರಿದರು.

‘ಶತಮಾನಗಳಷ್ಟು ಹಳೆಯ ಕಟ್ಟಡದಲ್ಲಿ ಮತ್ಸ್ಯಾಲಯವಿತ್ತು. ಈ ಕಟ್ಟಡ ಶಿಥಿಲಗೊಂಡಿದ್ದರಿಂದ ಕೆಲವು ವರ್ಷಗಳ ಹಿಂದೆ ಇದನ್ನು ಸ್ಥಗಿತಗೊಳಿಸಲಾಗಿತ್ತು. ಅಲ್ಲಿದ್ದ ಬಣ್ಣದ ಮೀನುಗಳು, ಹೊರ ಆವರಣದಲ್ಲಿದ್ದ ಪ್ರಾಣಿ –ಪಕ್ಷಿಗಳನ್ನು ಕಬ್ಬನ್‌ ಉದ್ಯಾನದ ಮತ್ಸ್ಯಾಲಯ ಹಾಗೂ ಬನ್ನೇರುಘಟ್ಟದ ಜೈವಿಕ ಉದ್ಯಾನಕ್ಕೆ ಸ್ಥಳಾಂತರಿಸಲಾಗಿದೆ. ಈ ಕಟ್ಟಡ ನವೀಕರಣಗೊಂಡರೆ ಪ್ರವಾಸಿಗರು ಲಾಲ್‌ಬಾಗ್‌ನಲ್ಲಿ ಮತ್ತೆ ಬಗೆಬಗೆಯ ಮೀನುಗಳನ್ನು ನೋಡುವ ಅವಕಾಶ ಸಿಗಲಿದೆ’ ಎಂದು ಲಾಲ್‌ಬಾಗ್‌ ನಡಿಗೆದಾರರ ಸಂಘದ ಸದಸ್ಯರೊಬ್ಬರು ತಿಳಿಸಿದರು.

‘ಭೂತ ಬಂಗಲೆಯಾಗಿದ್ದರೂ, ಕೇಳುವವರಿಲ್ಲ’

ಮತ್ಸ್ಯಾಲಯ ಕಟ್ಟಡ ಶಿಥಿಲಾವಸ್ಥೆ ತಲುಪಿ ದಶಕಗಳು ಗತಿಸಿದ್ದರೂ ಈ ತನಕ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸುತ್ತಿಲ್ಲ. ಕೇಳಿದಾಗೊಮ್ಮೆ ಶೀಘ್ರವೇ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ ಎಂದು ನೆಪ ಹೇಳುತ್ತಲೇ ಮುಂದೆ ಸಾಗುತ್ತಿದ್ದಾರೆ’ ಎಂದು ಲಾಲ್‌ಬಾಗ್‌ ನಡಿಗೆದಾರರ ಸಂಘದ ಅಧ್ಯಕ್ಷ ಎಚ್‌.ಕೆಂಪಣ್ಣ ದೂರಿದರು.

‘ರಾತ್ರಿಯಾದರೆ ಸಾಕು ಅಲ್ಲಿ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತವೆ. ಭೂತಬಂಗಲೆಯಂತಾಗಿದ್ದರೂ ಕೇಳುವವರಿಲ್ಲ. ಸದ್ಯ ಈ ಜಾಗಪ್ರೇಮಿಗಳ ಬೀಡಾಗಿ ಬಿಟ್ಟಿದೆ. ಅಲ್ಲಿ ಸರಿಯಾದ ಬೆಳಕಿನ ವ್ಯವಸ್ಥೆ ಇಲ್ಲ. ಸಿಬ್ಬಂದಿಯೂ ಈ ಬಗ್ಗೆ ಕ್ರಮವಹಿಸುತ್ತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT