ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಹೂಗಳಲ್ಲಿ ಬಾಪು ಚರಿತ್ರೆ

7

ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನ: ಹೂಗಳಲ್ಲಿ ಬಾಪು ಚರಿತ್ರೆ

Published:
Updated:
Prajavani

ಬೆಂಗಳೂರು: ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯಲಿರುವ ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ‌ ಸಹಸ್ರಾರು ಹೂಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಬದುಕಿನ ಪ್ರಮುಖ ಘಟನೆಗಳ ಚಿತ್ರಣ ಅರಳಲಿದೆ.

ತೋಟಗಾರಿಕೆ ಇಲಾಖೆ ಮತ್ತು ಮೈಸೂರು ಉದ್ಯಾನ ಕಲಾ ಸಂಘ ಜತೆಯಾಗಿ ಜ.18 ರಿಂದ 27ರ ವರೆಗೆ ಸಸ್ಯಕಾಶಿ‌‌ಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಬಾಪೂಜಿಗೆ ಸಮರ್ಪಿತವಾಗಿದೆ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ ತಿಳಿಸಿದರು.

ಧ್ಯಾನಾಸಕ್ತ ಗಾಂಧಿ: ಗಾಜಿನ ಮನೆಯ ಪ್ರವೇಶ ದ್ವಾರದಲ್ಲಿ ಆರು ಅಡಿ ಪೀಠದ ಮೇಲೆ ಆರು ಅಡಿ ಎತ್ತರದ ಹಾಗೂ ಐದು ಅಡಿ ಅಗಲದಲ್ಲಿ ಫೈಬರ್‌ಗ್ಲಾಸ್‌ನಲ್ಲಿ ಮೂಡಿದ ಧ್ಯಾನಾಸಕ್ತ ಗಾಂಧಿ ಪ್ರತಿಮೆ ಇರಲಿದೆ.  

ಮಧ್ಯ ಭಾಗದಲ್ಲಿ ಹೂಗಳಿಂದ ಆವೃತಗೊಂಡ 35 ಅಡಿ ಉದ್ದ, 20 ಅಡಿ ಅಗಲ ಹಾಗೂ 16 ಅಡಿ ಎತ್ತರದ ಸಾಬರಮತಿ ಆಶ್ರಮ 6.4 ಲಕ್ಷ ಹೂಗಳಲ್ಲಿ ಮೂಡಿ ಬರಲಿದೆ.

ಇದರ ಎಡಬದಿಗೆ ಗಾಂಧಿ ಮತ್ತು ಮೊಮ್ಮಗ ಕೋಲು ಹಿಡಿದುಕೊಂಡು ಹೋಗುತ್ತಿರುವ ದೃಶ್ಯ ಸಿರಿಧಾನ್ಯದಲ್ಲಿ ಮೂಡಿ ಬರಲಿದೆ. ಹಿಂದಿನ ಭಾಗದಲ್ಲಿ ರಾಜ್‌ಘಾಟ್‌ ಮಾದರಿಯನ್ನು ಕಾಣಬಹುದು. ಗಾಜಿನ ಮನೆಯ ಎಡಭಾಗದಲ್ಲಿ ಬಾಪು ಕುಟೀರವನ್ನು ಕಣ್ತುಂಬಿಕೊಳ್ಳಬಹುದು.

ಚರಕದೊಂದಿಗೆ ಗಾಂಧಿ ವೇಷಧಾರಿ: ಚಿತ್ರಕಲಾ ಪರಿಷತ್ತಿನಿಂದ ಬೃಹದಾಕಾರದ ಗಾಂಧಿ ಪ್ರತಿಮೆ ಹಾಗೂ ಚರಕ ಪ್ರದರ್ಶನಗೊಳ್ಳಲಿದೆ.

ಜತೆಗೆ ವೇಮುಗಲ್‌ ಸಾಂಗಳೇಕರ್‌ ಎಂಬುವವರು ಗಾಂಧಿ ವೇಷಧಾರಿಯಾಗಿ ಚರಕದಿಂದ ನೂಲು ತೆಗೆಯುತ್ತ ಕೂರಲಿದ್ದಾರೆ.

ಗಾಜಿನ ಮನೆಯ ಎಡಭಾಗದಲ್ಲಿ 10 ಅಡಿ ಉದ್ದ, 10 ಅಡಿ ಅಗಲದ ಹಾಗೂ 12 ಅಡಿ ಎತ್ತರದ ಬಾಪು ಕುಟೀರ 80 ಸಾವಿರ ಹೂಗಳಲ್ಲಿ ರೂಪುತಾಳಲಿದೆ. ಇದರ ಸುತ್ತ ಊಟಿ ಗಿರಿಧಾಮದ ಶೀತ ವಲಯದ ಹೂಗಳು ಪ್ರದರ್ಶನಗೊಳ್ಳಲಿವೆ. ಗಾಂಧಿ ಅವರ ಸಂದೇಶ ಸಾರುವ ಮೂರು ಕೋತಿಗಳ ಪ್ರತಿರೂಪಗಳೂ ಇರಲಿವೆ. 

ಬಾ-ಬಾಪೂ ದ್ವಿಮುಖ ಶಿಲ್ಪಕಲಾಕೃತಿ: ಗಾಜಿನ ಮನೆಯ ಹಿಂಭಾಗದ ಪ್ರವೇಶ ದ್ವಾರದಲ್ಲಿ ರಾಜ್‌ಘಾಟ್‌ ಮಾದರಿಯ ಎದುರಿಗೆ 6 ಅಡಿ ಎತ್ತರದ ಪೀಠದ ಮೇಲೆ 3.5 ಅಡಿ ಎತ್ತರದ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಲ್ಲಿ ಮೂಡಿಬಂದ ಗಾಂಧಿ, ಕಸ್ತೂರಬಾ ಅವರ ದ್ವಿಮುಖ ಮೂರ್ತಿಗಳನ್ನು ಕಾಣಬಹುದು. ದಂಡಿಯಾತ್ರೆಯ ಚಿತ್ರಣವನ್ನು ನೋಡಬಹುದು.

ಇಂಡೋ ಅಮೆರಿಕನ್‌ ಹೈಬ್ರಿಡ್‌ ಸೀಡ್‌ ಕಂಪನಿ ಹೂಗಳು, ಪರಿಸರ ಸ್ನೇಹಿ ರೂಫ್‌ ಆ್ಯಂಡ್‌ ವರ್ಟಿಕಲ್‌ ಗಾರ್ಡನ್‌ ಮಾದರಿಗಳ ಪ್ರದರ್ಶನ, ಗಾಂಧಿ ಭವನದ ಚರಕ ಮತ್ತು ವಾಕಿಂಗ್‌ ಗಾಂಧಿ ಪ್ರತಿಮೆ, ಡಾರ್ಜಿಲಿಂಗ್‌ನ ಸಿಂಬಿಡಿಯಂ ಆರ್ಕಿಡ್ ಹೂಗಳ ಪ್ರದರ್ಶನ ಇರಲಿದೆ‌. 

ಗಾಜಿನ ಮನೆ ಹೊರಭಾಗದಲ್ಲಿ ಏನಿರಲಿದೆ: ಬೃಹದಾಕಾರದ  ಗಾಂಧಿಯ ಕನ್ನಡಕ, ಚರಕದ ಮಾದರಿ ಪ್ರದರ್ಶನ, ಧ್ಯಾನಾಸಕ್ತ ಗಾಂಧಿ ಪ್ರತಿಮೆ, ಗಾಂಧಿ ಕುರಿತು ಅಂಚೆಚೀಟಿ ಪ್ರದರ್ಶನ, ನವಿಲು,  ಹೂವಿನ ಪಿರಮಿಡ್ಡುಗಳ ತುದಿಯಲ್ಲಿ ಗಾಂಧಿ ಚಿತ್ರಣ ಇರಲಿದೆ.

ಕ್ಲಾಕ್ ರೂಂಗಳ ವ್ಯವಸ್ಥೆ: ಸಾರ್ವಜನಿಕರಿಗೆ ಲಾಲ್‌ಬಾಗ್‌ನ ನಾಲ್ಕು ದ್ವಾರಗಳ ಬಳಿ ಕ್ಲಾಕ್ ರೂಂಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಶಾಲಾ ಸಮವಸ್ತ್ರದಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಉಚಿತ ಪ್ರವೇಶವಿದೆ.

ಅಂಕಿಅಂಶ

* ₹1.8 ಕೋಟಿ ವೆಚ್ಚ

*‌ 6 ಲಕ್ಷ ಜನರ ಭೇಟಿ ನಿರೀಕ್ಷೆ

* 37 ಪ್ರಥಮ ಚಿಕಿತ್ಸಾ ಪಟ್ಟಿಗೆಗಳ ಅಳವಡಿಕೆ

* 300 ಪೊಲೀಸ್ ಸಿಬ್ಬಂದಿ

* 50 ಭದ್ರತಾ ಸಿಬ್ಬಂದಿ

* 40 ಹೋಂ ಗಾರ್ಡ್ಸ್‌

* 100 ಸಿಸಿಟಿವಿ ಕ್ಯಾಮೆರಾಗಳು
 

ಜ.18‌ ರಂದು ಉದ್ಘಾಟನೆ

ಜ.18‌ ರಂದು ಬೆಳಿಗ್ಗೆ 9ಕ್ಕೆ ನಡೆಯಲಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ, ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಮೇಯರ್ ಗಂಗಾಂಬಿಕೆ ಪಾಲ್ಗೊಳ್ಳಲಿದ್ದಾರೆ.

ಪಾರ್ಕಿಂಗ್‌ ವ್ಯವಸ್ಥೆ ಎಲ್ಲೆಲ್ಲಿ?

ಲಾಲ್‌ಬಾಗ್‌ನ ನಾಲ್ಕು ಪ್ರವೇಶ ದ್ವಾರಗಳಲ್ಲಿ ಸಾರ್ವಜನಿಕರ ವಾಹನಗಳಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಶಾಂತಿನಗರ ಬಸ್ ಡಿಪೊದ ಪಾರ್ಕಿಂಗ್‌ ಪ್ರದೇಶ, ಅಲ್-ಅಮೀನ್ ಕಾಲೇಜು ಮೈದಾನ ಹಾಗೂ ಜೆ.ಸಿ.ರಸ್ತೆಯ ಬಿಬಿಎಂಪಿ ಪಾರ್ಕಿಂಗ್‌ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.

ಲಾಲ್‌ಬಾಗ್‌ನ ಜೋಡಿ ರಸ್ತೆಯ ಮೈಸೂರು ಉದ್ಯಾನ ಕಲಾ ಸಂಘದ ಬಳಿಯ 5 ಎಕರೆ ಪಾರ್ಕಿಂಗ್‌ ಪ್ರದೇಶದಲ್ಲಿ ಶಾಲಾ ವಾಹನಗಳು, ಆಂಬುಲೆನ್ಸ್‌ಗಳ ನಿಲುಗಡೆಗೆ ಮಾತ್ರ ಅವಕಾಶ ನೀಡಲಾಗಿದೆ.

ಸಸ್ಯ ಪ್ರೇಮಿಗಳಿಗಾಗಿ ಸಸ್ಯ ಸಂತೆ

ಪ್ರದರ್ಶನಕ್ಕೆ ಭೇಟಿ ನೀಡುವ ಸಸ್ಯ ಪ್ರೇಮಿಗಳಿಗೆ ಮತ್ತು ತೋಟಗಾರಿಕೆ ಆಸಕ್ತರಿಗಾಗಿ ಔಷಧಿ, ಆಲಂಕಾರಿಕ ಸಸ್ಯಗಳು ಹಾಗೂ ಬೊನ್ಸಾಯ್ ಗಿಡಗಳು, ತೋಟಗಾರಿಕೆ ಸಲಕರಣೆಗಳು ಒಂದೇ ಸೂರಿನಡಿನಲ್ಲಿ ದೊರೆಯಲಿವೆ. ಅಲ್ಲದೇ, ಗಾಂಧಿ ಕುರಿತು ಪುಸ್ತಕ, ಖಾದಿ ಬಟ್ಟೆಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.

ಶಾಲಾ ಮಕ್ಕಳಿಗೆ ಉಚಿತ ಪ್ರವೇಶ

ಶಾಲಾ ವಿದ್ಯಾರ್ಥಿಗಳು ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸಲು ತೋಟಗಾರಿಕೆ ಇಲಾಖೆ ಉಚಿತ ಪ್ರವೇಶಾವಕಾಶ ಕಲ್ಪಿಸಿದೆ. ರಜಾ ದಿನಗಳನ್ನು ಹೊರತುಪಡಿಸಿ ಎಲ್ಲ ದಿನಗಳಲ್ಲಿಯೂ ಶಾಲಾ ಸಮವಸ್ತ್ರ ತೊಟ್ಟ ವಿದ್ಯಾರ್ಥಿಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಪ್ರದರ್ಶನವನ್ನು ವೀಕ್ಷಿಸಬಹುದು.

ಪ್ಲಾಸ್ಟಿಕ್ ಕವರ್ ಬಳಕೆ ಮಾಡಿದರೆ ದಂಡ

ಲಾಲ್‌ಬಾಗ್‌ನಲ್ಲಿ ಸ್ವಚ್ಛತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪಾಸ್ಟಿಕ್‌ ಬಳಕೆ ನಿರ್ಬಂಧ ಮಾಡಲಾಗಿದ್ದು, ಉದ್ಯಾನದ ಒಳಪ್ರದೇಶದಲ್ಲಿ ಅಂಗಡಿಕಾರರು, ಮಾರಾಟಗಾರರು ಪ್ಲಾಸ್ಟಿಕ್ ಬಳಸಿದರೆ ಸೂಕ್ತ ದಂಡ ವಿಧಿಸುವ ತೀರ್ಮಾನ ಕೈಗೊಂಡಿದೆ.

ಉದ್ಯಾನವನದ ಹಲವು ಕಡೆಗಳಲ್ಲಿ ಒಣ ಹಾಗೂ ಹಸಿ ಕಸದ ಬುಟ್ಟಿಗಳನ್ನು ಇಡುವ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಯೇ ಕಸ ಹಾಕಬೇಕು. ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಕಣ್ಣಿಡಲು 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಕ್ಲಾಕ್ ರೂಂಗಳ ವ್ಯವಸ್ಥೆ: ಸಾರ್ವಜನಿಕರ ಅನುಕೂಲಕ್ಕಾಗಿ ಲಾಲ್‌ಬಾಗ್‌ನ ನಾಲ್ಕು ದ್ವಾರಗಳ ಬಳಿ ಕ್ಲಾಕ್ ರೂಂಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಯೆ ತಮ್ಮ ವಸ್ತುಗಳನ್ನು ಇಟ್ಟು ಒಳಗೆ ಹೋಗಬೇಕು.

10 ಕಡೆ ಫುಡ್‌ಕೋರ್ಟ್‌

ಉದ್ಯಾನದ ಹಾಪ್‌ಕಾಮ್ಸ್‌ ಪಶ್ಚಿಮದ್ವಾರ, ಫ್ಲವರ್‌ ಕ್ಲಾಕ್‌, ದೊಡ್ಡ ಮರ, ಕೆರೆ ಬಳಿ, ತೋಟಗಾರಿಕೆ ತರಬೇತಿ ಕೇಂದ್ರ, ಜಲಪಾತದ ಸಮೀಪ ಸೇರಿದಂತೆ ಹತ್ತು ಕಡೆಗಳಲ್ಲಿ ಫುಡ್‌ಕೋರ್ಟ್‌ಗಳು ಇರಲಿವೆ.

ಟಿಕೆಟ್ ದರ
* ದೊಡ್ಡವರಿಗೆ ₹70

* ಮಕ್ಕಳಿಗೆ ₹20

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !