ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಷ್ಕೃತ ದರ ಜಾರಿ: ಲಾಲ್‌ಬಾಗ್‌ ಪ್ರವಾಸಿಗರ ಜೇಬಿಗೆ ಕತ್ತರಿ

ಸಸ್ಯಕಾಶಿ ಪ್ರವೇಶ ಶುಲ್ಕ – ವಾಹನ ಪಾರ್ಕಿಂಗ್‌ ಶುಲ್ಕ ದುಬಾರಿ
Last Updated 3 ಮಾರ್ಚ್ 2019, 19:49 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಸಸ್ಯೋದ್ಯಾನದ ಪ್ರವೇಶ ಶುಲ್ಕ, ವಾಹನ ನಿಲುಗಡೆ ಶುಲ್ಕ ಹಾಗೂ ಕ್ಯಾಮೆರಾ ಶುಲ್ಕಗಳನ್ನು ಏಕಾಏಕಿ ಹೆಚ್ಚಳ ಮಾಡುವ ಮೂಲಕ ತೋಟಗಾರಿಕಾ ಇಲಾಖೆ ಪ್ರವಾಸಿಗರ ಜೇಬಿಗೆ ಕತ್ತರಿ ಹಾಕಿದೆ.

ಉದ್ಯಾನ ಸುತ್ತುವ ಜೋಡಿಗಳು, ಮಾನಸಿಕ ಒತ್ತಡ ತಣಿಸಿಕೊಳ್ಳಲು ಉದ್ಯಾನಕ್ಕೆ ಬರುವವರು, ಕುಟುಂಬದೊಂದಿಗೆ ಭೇಟಿ ನೀಡುವ ಪ್ರವಾಸಿಗರು ಹೆಚ್ಚಿನ ಶುಲ್ಕ ಭರಿಸುವುದು ಈಗ ಅನಿವಾರ್ಯ.

ಪ್ರವೇಶ ಶುಲ್ಕ ಹೆಚ್ಚಳಕ್ಕೆ ತೋಟಗಾರಿಕಾ ಇಲಾಖೆಯು ಸುವರ್ಣ ಕರ್ನಾಟಕ ಉದ್ಯಾನಗಳ ಪ್ರತಿಷ್ಠಾನದ ಮುಂದೆ ಕಳೆದ ಅಕ್ಟೋಬರ್‌ನಲ್ಲಿ ಪ್ರಸ್ತಾವ ಇಟ್ಟಿತ್ತು. ಇದಕ್ಕೆ ಪ್ರತಿಷ್ಠಾನವು ಸಮ್ಮತಿ ಸೂಚಿಸಿದ್ದು, ಪ್ರವೇಶ ಶುಲ್ಕವನ್ನು ₹20 ರಿಂದ ₹25ಕ್ಕೆ ಏರಿಕೆ ಮಾಡಲಾಗಿದೆ.

ಉದ್ಯಾನಕ್ಕೆ ಮೊದಲ ಬಾರಿ ಪ್ರವೇಶ ಶುಲ್ಕ ವಿಧಿಸಲು ಆರಂಭಿಸಿದಾಗ ಪ್ರವಾಸಿಗರು ₹ 5 ತೆರಬೇಕಿತ್ತು. 2010ರಲ್ಲಿ ಇದನ್ನು ₹10ಕ್ಕೆ ಹಾಗೂ 2016 ರಲ್ಲಿ ₹20ಕ್ಕೆ ಹೆಚ್ಚಿಸಲಾಗಿತ್ತು.

‘ಪ್ರವೇಶ ಶುಲ್ಕ ಮತ್ತು ಪಾರ್ಕಿಂಗ್‌ ಶುಲ್ಕ ಸಂಗ್ರಹದಹಳೆ ಟೆಂಡರ್‌ನ ಅವಧಿ ಕಳೆದ ಫೆಬ್ರುವರಿಯಲ್ಲಿ ಕೊನೆಗೊಂಡಿದೆ. ಮಾರ್ಚ್‌ 1ರಿಂದ ಹೊಸ ಟೆಂಡರ್‌ ಪ್ರಕಾರ ಶುಲ್ಕ ಸಂಗ್ರಹಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ (ಲಾಲ್‌ಬಾಗ್‌) ಉಪ ನಿರ್ದೇಶಕ ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೊದಲ ಮೂರು ಗಂಟೆಗಳಿಗೆ ಒಂದು ದರ ಹಾಗೂ ನಂತರದ ಅವಧಿಗಳಿಗೆ ಪ್ರತ್ಯೇಕ ದರಗಳನ್ನು ವಿಧಿಸಲಾಗುತ್ತಿದೆ. ಈ ಎಲ್ಲ ದರಗಳನ್ನೂ ಪರಿಷ್ಕರಿಸಲಾಗಿದೆ. ಅನಗತ್ಯವಾಗಿ ಕೆಲವರು ಇಲ್ಲಿ ವಾಹನ ನಿಲ್ಲಿಸುತ್ತಾರೆ. ಇದನ್ನು ನಿಯಂತ್ರಿಸುವ ದೃಷ್ಟಿಯಿಂದ ಈ ಕ್ರಮ ವಹಿಸಿದ್ದೇವೆ’ ಎಂದರು.

ಪ್ರತಿನಿತ್ಯ ಉದ್ಯಾನಕ್ಕೆ ಸರಾಸರಿ 5 ಸಾವಿರ ಜನ ಭೇಟಿ ನೀಡುತ್ತಾರೆ. ವಾರಾಂತ್ಯಗಳಲ್ಲಿ ಪ್ರವಾಸಿಗರ ಸಂಖ್ಯೆ ಎಂದಿಗಿಂತ ಸುಮಾರು 3 ಸಾವಿರದಷ್ಟು ಹೆಚ್ಚಾಗುತ್ತದೆ. ವಿಶೇಷ ರಜಾ ದಿನಗಳಲ್ಲಿ 10,000 ದಿಂದ 15,000 ಮಂದಿ ಸಸ್ಯಕಾಶಿಗೆ ಭೇಟಿ ನೀಡುತ್ತಾರೆ.

ಶುಲ್ಕ: ಯಾವುದಕ್ಕೆ, ಎಷ್ಟು? (ರೂಪಾಯಿಗಳಲ್ಲಿ)
ಪ್ರವೇಶ ಕ್ಯಾಮೆರಾ ದ್ವಿಚಕ್ರ ವಾಹನ ನಾಲ್ಕು ಚಕ್ರಗಳ ವಾಹನ ಬಸ್‌ ವ್ಯಾನ್‌
ಹಳೆ ದರ 20 50 20 25 100 50
ಪರಿಷ್ಕೃತ ದರ 25 60 25 30 120 60

3 ಗಂಟೆ ನಂತರದ ಅವಧಿಯ ಪಾರ್ಕಿಂಗ್‌ ಶುಲ್ಕ (ಪ್ರತಿ ಗಂಟೆಗೆ)

ದ್ವಿಚಕ್ರ ವಾಹನ; 5

ನಾಲ್ಕು ಚಕ್ರದ ವಾಹನ; 10

ಬಸ್‌, ಟೆಂಪೊ; 20

***

ಪ್ರವೇಶ ಶುಲ್ಕದಲ್ಲಿ ₹5 ಹೆಚ್ಚಳ ಮಾಡಿರುವುದರಿಂದ ಪ್ರವಾಸಿಗರಿಗೆ ಹೆಚ್ಚೇನೂ ಹೊರೆಯಾಗುವುದಿಲ್ಲ. ಸಸ್ಯೋದ್ಯಾನದ ಅಭಿವೃದ್ಧಿ ದೃಷ್ಟಿಯಿಂದ ಶುಲ್ಕ ಪರಿಷ್ಕರಣೆ ಅನಿವಾರ್ಯ

-ಚಂದ್ರಶೇಖರ್‌, ಲಾಲ್‌ಬಾಗ್‌ ಉಪನಿರ್ದೇಶಕ

ಪ್ರವೇಶ ಶುಲ್ಕ ಏರಿಕೆಯು ಶ್ರೀಮಂತ ವರ್ಗದವರಿಗೆ ಹೊರೆ ಎನಿಸುವುದಿಲ್ಲ. ಆದರೆ, ನಮ್ಮಂತಹ ಮಧ್ಯಮ ಮತ್ತು ಸಾಮಾನ್ಯ ವರ್ಗವರಿಗೆ ಇದು ಖಂಡಿತಾ ಹೊರೆಯಾಗಲಿದೆ

-ಕಮಲಮ್ಮ, ಪ್ರವಾಸಿ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT