ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ಬಾಗ್‌ ಕಲಾಕೃತಿಗಳಿಗೆ ಮೇಣದ ಲೇಪನ

ಮರದ ಕೆತ್ತನೆಗಳನ್ನು ಕೀಟಬಾಧೆಯಿಂದ ತಡೆಯಲು ತೋಟಗಾರಿಕೆ ಇಲಾಖೆ ಕ್ರಮ
Last Updated 9 ಜನವರಿ 2019, 19:24 IST
ಅಕ್ಷರ ಗಾತ್ರ

ಬೆಂಗಳೂರು: ಲಾಲ್‌ಬಾಗ್‌ ಉದ್ಯಾನದಲ್ಲಿ ಕಲಾಕೃತಿಗಳ ರೂಪ ಪಡೆದಿರುವ ಮರದ ದಿಮ್ಮಿಗಳನ್ನು ಕೀಟಬಾಧೆಯಿಂದ ಸಂರಕ್ಷಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.

‘ಮರದ ಕಲಾಕೃತಿಗಳಿಗೆ ಚಿಕಿತ್ಸೆ ನೀಡಿ, ಸಂರಕ್ಷಿಸುವ ಕಾರ್ಯವನ್ನು ‘ಪ್ಲೈವುಡ್ ಸಂಶೋಧನಾ ಸಂಸ್ಥೆ’ಗೆ ನೀಡಲಾಗಿದ್ದು, ಈಗಾಗಲೇ ₹2.25 ಲಕ್ಷ ನೀಡಲಾಗಿದೆ. ವಿಜ್ಞಾನಿ ಡಾ.ನರಸಿಂಹಮೂರ್ತಿ ನೇತೃತ್ವದ ತಂಡ ಮೂರು ತಿಂಗಳುಗಳ ಹಿಂದೆ ಈ ಕಾರ್ಯವನ್ನು ಕೈಗೆತ್ತಿಕೊಂಡಿದೆ’ ಎಂದು ತೋಟಗಾರಿಕೆ ಇಲಾಖೆಯಜಂಟಿ ನಿರ್ದೇಶಕ ಎಂ.ಜಗದೀಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮರದ ಕಲಾಕೃತಿಗಳಿಗೆ ಮೂರು ತಿಂಗಳ ಹಿಂದೆ ಕೀಟ ನಿರೋಧಕ ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಮಳೆ ಬಂದಾಗ ಕಲಾಕೃತಿಗಳ ಒಳಗೆ ನೀರು ಹೋಗದಂತೆ ತಡೆಯಲು ‌ಇದೀಗ ಮೇಣದ ಲೇಪನ (ವ್ಯಾಕ್ಸ್‌ ಕೋಟಿಂಗ್‌) ಮಾಡಲಾಗುತ್ತಿದೆ. ನಂತರ ಸೆಲ್ಯೂಲ್ಲಾರ್‌ ಬೈಂಡಿಂಗ್‌ ಕಾರ್ಯ ನಡೆಯಲಿದೆ. ಈ ಚಿಕಿತ್ಸಾ ಪ್ರಕ್ರಿಯೆ ಪೂರ್ಣಗೊಳ್ಳಲುಇನ್ನೂ ಮೂರು ತಿಂಗಳು ಬೇಕು’ ಎಂದು ಹೇಳಿದರು.

ಲಾಲ್‌ಬಾಗ್‌ ಉದ್ಯಾನದಲ್ಲಿ 2017ರ ಡಿಸೆಂಬರ್‌ನಲ್ಲಿ ಪ್ರಕೃತಿಯ ಮುನಿಸಿಗೆ ಶತಮಾನಗಳ ಹಿಂದಿನ ವೃಕ್ಷಗಳುಧರೆಗುರುಳಿದ್ದವು. ಶಿಲ್ಪ ಕಲಾವಿದರು ಅವುಗಳಿಗೆ ಕಲಾಕೃತಿಗಳ ರೂಪ ನೀಡಿದ್ದರು. ಮಾವು, ನೀಲಗಿರಿ, ಮಹಾಗನಿ ಹಾಗೂ ನೇರಳೆ ಮರಗಳ 40 ದಿಮ್ಮಿಗಳಲ್ಲಿ 45 ಕಲಾಕೃತಿಗಳನ್ನು ರೂಪಿಸಿ ಉದ್ಯಾನದ ವಿವಿಧೆಡೆ ಇಡಲಾಗಿದೆ.

ಉರುಳಿ ಬಿದ್ದ ಮರಗಳನ್ನು ಕಲಾಕೃತಿಗಳಾಗಿ ನಿರ್ಮಿಸಲು ರಾಜ್ಯ ಶಿಲ್ಪಕಲಾ ಅಕಾಡೆಮಿ ಮತ್ತು ತೋಟಗಾರಿಕಾ ಇಲಾಖೆ ಆಶ್ರಯದಲ್ಲಿ ಮರ ಕೆತ್ತನೆ ಶಿಬಿರವನ್ನು ಆಯೋಜಿಸಲಾಗಿತ್ತು. ಬರೋಡಾ, ಮುಂಬೈ, ಕೋಲ್ಕತ್ತ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ 40 ಶಿಲ್ಪ ಕಲಾವಿದರು ಮತ್ತು 25 ಸಹಾಯಕ ಶಿಲ್ಪ ಕಲಾವಿದರು ಪಾಲ್ಗೊಂಡಿದ್ದರು.

ಮರದ ಕಲಾಕೃತಿಗಳಾಗಿ ರೂಪುಪಡೆದ ಈ ಮರಗಳಲ್ಲಿ ಕೆಲವು 200 ವರ್ಷಗಳಷ್ಟು ಹಿಂದಿನ ಕಾಲದ್ದಾಗಿವೆ. ಬ್ರಿಟಿಷರ ಕಾಲದಲ್ಲಿ ದೇಶಕ್ಕೆ ಪರಿಚಯವಾದ ನೀಲಗಿರಿ ಮರವೂ ಇದೆ. ಇನ್ನೊಂದು ಬೃಹತ್‌ ಮಾವಿನ ಮರ ಹೈದರಾಲಿ ಕಾಲದ್ದಾಗಿದೆ. ಕಲಾಕೃತಿಗಳ ಕೆತ್ತನೆಗೆ ಶಿಲ್ಪಕಲಾ ಅಕಾಡೆಮಿಯಿಂದ ಸುಮಾರು ₹12ಲಕ್ಷ ಹಾಗೂ ತೋಟಗಾರಿಕೆ ಇಲಾಖೆಯಿಂದ ₹11 ಲಕ್ಷ ವಿನಿಯೋಗಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT