ಬುಧವಾರ, ನವೆಂಬರ್ 20, 2019
20 °C
ಸರ್ವೋದಯ ಕಾನೂನು ಕಾಲೇಜು ಮಾನ್ಯತೆ ನವೀಕರಣ ಪ್ರಕರಣ

ಲಂಚ ಆರೋಪ: ವಿಚಾರಣೆಗೆ ಅಸ್ತು

Published:
Updated:
Prajavani

ಬೆಂಗಳೂರು: ‘ಕಾನೂನು ಕಾಲೇಜಿನ ಮಾನ್ಯತೆಯನ್ನು ನವೀಕರಿಸಲು ಭಾರತೀಯ ವಕೀಲರ ಪರಿಷತ್‌ ಉಪಾಧ್ಯಕ್ಷರಿಗೆ ಲಂಚ ನೀಡಿದ ಆರೋಪದಿಂದ ನಮ್ಮನ್ನು ಕೈಬಿಡಬೇಕು’ ಎಂದು ಕೋರಿದ್ದ ನಗರದ ಸರ್ವೋದಯ ಕಾನೂನು ಕಾಲೇಜಿನ ಪ್ರಾಂಶುಪಾಲ ಎ.ಎಂ.ಆರ್.ವೀರಯ್ಯ, ಆಡಳಿತಾಧಿಕಾರಿ ಕೆ.ನರಸಿಂಹಪ್ಪ ಹಾಗೂ ಚೆನ್ನೈನ ವಕೀಲ ಜಿ.ಆರ್‌.ರಮೇಶ್‌ ಪ್ರಭು ಅವರ ಅರ್ಜಿಗಳನ್ನು ಹೈಕೋರ್ಟ್ ವಜಾ ಮಾಡಿದೆ.

‘ಸಿಬಿಐ ವಿಶೇಷ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದಿನ ಎಂಟು ತಿಂಗಳ ಒಳಗಾಗಿ ಮುಕ್ತಾಯಗೊಳಿಸಬೇಕು’ ಎಂದು ನ್ಯಾಯಮೂರ್ತಿ ಬಿ.ಎ.ಪಾಟೀಲ ಅವರಿದ್ದ ಏಕಸದಸ್ಯ ನ್ಯಾಯಪೀಠ ಆದೇಶಿಸಿದೆ.

‘ಕಾಲೇಜಿನ ಮಾನ್ಯತೆ ನವೀಕರಣಕ್ಕಾಗಿ ಭಾರತೀಯ ವಕೀಲರ ಪರಿಷತ್‌ ಉಪಾಧ್ಯಕ್ಷರಾಗಿದ್ದ ಆರ್‌.ಧನಪಾಲ್‌ ರಾಜ್‌ ₹1 ಲಕ್ಷ ಲಂಚ ಪಡೆದಿದ್ದಾರೆ’ ಎಂದು ಸಿಬಿಐ ಆರೋಪಿಸಿತ್ತು. ವೀರಯ್ಯ, ನರಸಿಂಹಪ್ಪ ಹಾಗೂ ರಮೇಶ್‌ ಪ್ರಭು ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988ರ ವಿವಿಧ ಕಲಂಗಳಡಿಯಲ್ಲಿ 2011ರ ಫೆಬ್ರುವರಿ 8ರಂದು ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.

ತಿರಸ್ಕರಿಸಿತ್ತು: ‘ಈ ಪ್ರಕರಣದಲ್ಲಿ ನಮ್ಮದೇನೂ ತಪ್ಪಿಲ್ಲ, ಹಾಗಾಗಿ ದೋಷಾರೋಪ ಪಟ್ಟಿಯಿಂದ ನಮ್ಮನ್ನು ಕೈಬಿಡಿ’ ಎಂದು ಕೋರಿ ವೀರಯ್ಯ, ನರಸಿಂಹಪ್ಪ ಹಾಗೂ ರಮೇಶ್‌ ಪ್ರಭು ವಿಚಾರಣಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಸಿಬಿಐ ವಿಶೇಷ ನ್ಯಾಯಾಲಯ 2013ರ ಆಗಸ್ಟ್‌ 14ರಂದು ತಿರಸ್ಕರಿಸಿತ್ತು.

ಈ ಆದೇಶ ಪ್ರಶ್ನಿಸಿ ಮೂವರೂ ಆರೋಪಿಗಳು 2013ರ ಅ. 30ರಂದು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿರುವ ಬಿ.ಎ.ಪಾಟೀಲ ಅವರು, ‘ವಿಚಾರಣಾ ನ್ಯಾಯಾಲಯ ಆರೋಪಿಗಳ ಕೋರಿಕೆ ತಿರಸ್ಕರಿಸಿರುವುದು ಸರಿಯಾಗಿಯೇ ಇದೆ. ತನಿಖೆ ವೇಳೆ ಸಿಬಿಐ ವಶಪಡಿಸಿಕೊಂಡಿರುವ ಪುರಾವೆಗಳನ್ನು ಪರಿಶೀಲಿಸಿದರೆ ಈ ಪ್ರಕರಣ ವಿಚಾರಣೆಗೆ ಯೋಗ್ಯವಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆರೋಪವೇನು?: ‘ಪ್ರಕರಣದ ಮೊದಲ ಆರೋಪಿ ಆರ್‌.ಧನಪಾಲ್‌ ರಾಜ್‌, ಪರಿಷತ್‌ನ ನಿರ್ಣಯಕ್ಕೆ ವಿರುದ್ಧವಾಗಿ, ಅಧಿಕಾರ ದುರುಪಯೋಗಪಡಿಸಿಕೊಂಡು 2010ರ ಡಿಸೆಂಬರ್‌ 18 ಮತ್ತು 19ರಂದು ಬೆಂಗಳೂರಿನ ನಾಲ್ಕು ಕಾನೂನು ಕಾಲೇಜುಗಳ ಪರಿಶೀಲನೆಗೆ ದಿನಾಂಕ ನಿಗದಿ ಮಾಡಿದ್ದರು. ಸರ್ವೋದಯ ಕಾಲೇಜಿಗೆ ಮಾನ್ಯತೆ ನೀಡಲು ₹5 ಲಕ್ಷ ಲಂಚದ ಬೇಡಿಕೆ ಇರಿಸಿದ್ದರು. ನಂತರ ಈ ಮೊತ್ತವನ್ನು ₹4 ಲಕ್ಷಕ್ಕೆ ಇಳಿಸಿ, ಅದರಲ್ಲಿ ₹1 ಲಕ್ಷ ಲಂಚ ಪಡೆದಿದ್ದಾರೆ’ ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ತಿಳಿಸಿದೆ.

ಧನರಾಜ್‌, 2010ರ ಏಪ್ರಿಲ್‌ನಿಂದ ಎರಡು ವರ್ಷಗಳ ಕಾಲ ಭಾರತೀಯ ವಕೀಲರ ಪರಿಷತ್‌ ಉಪಾಧ್ಯಕ್ಷರಾಗಿದ್ದರು. ರಮೇಶ್‌ ಪ್ರಭು
ಸರ್ವೋದಯ ಕಾಲೇಜಿನ ಹಳೆಯ ವಿದ್ಯಾರ್ಥಿ.

‘ಲಂಚದ ವಿವರಕ್ಕೆ ದಾಖಲೆಗಳಿವೆ’

‘ಆರೋಪಿಗಳು ಲಂಚಕ್ಕೆ ಬೇಡಿಕೆಯನ್ನಿಟ್ಟಿದ್ದು ಅವರ ಫೋನ್‌ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ’ ಎಂದು ಹೈಕೋರ್ಟ್‌ನಲ್ಲಿ ಸಿಬಿಐ ಪರ ವಾದ ಮಂಡಿಸಿದ್ದ ವಕೀಲ ಪಿ.ಪ್ರಸನ್ನ ಕುಮಾರ್ ನ್ಯಾಯಪೀಠಕ್ಕೆ ತಿಳಿಸಿದ್ದರು.

‘ಸಂಭಾಷಣೆಯ ಧ್ವನಿ ಮುದ್ರಿತ ಸ್ಪೆಕ್ಟ್ರೋಗ್ರಫಿಯನ್ನು (ವಿದ್ಯುತ್ಕಾಂತ ತರಂಗಗಳು) ನವದೆಹಲಿಯ ಸಿಎಫ್‌ಎಸ್‌ಎಲ್‌ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ದೃಢಪಡಿಸಿಕೊಳ್ಳಲಾಗಿದೆ. ಪರಿಶೀಲನೆಗೆ ಬರುವ ದಿನದಂದು ನಮಗೆ ಕಾರು ಹಾಗೂ ವಸತಿ ಸೌಲಭ್ಯ ಒದಗಿಸಬೇಕು. ಚೆನ್ನೈನಿಂದ ಬೆಂಗಳೂರಿಗೆ ಬಂದು ಹೋಗಲು ವಿಮಾನದ ಟಿಕೆಟ್‌ಗಳನ್ನು ಮುಂಗಡ ಬುಕ್‌ ಮಾಡಿಕೊಡಬೇಕು ಎಂಬುದಕ್ಕೆ ದಾಖಲೆಗಳಿವೆ’ ಎಂದು ಅವುಗಳನ್ನು ನ್ಯಾಯಪೀಠಕ್ಕೆ ನೀಡಿದ್ದರು.

ಪ್ರತಿಕ್ರಿಯಿಸಿ (+)