ವಕೀಲ ಅಮಿತ್ ಕೇಶವಮೂರ್ತಿ ಶೂಟೌಟ್ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

7

ವಕೀಲ ಅಮಿತ್ ಕೇಶವಮೂರ್ತಿ ಶೂಟೌಟ್ ಪ್ರಕರಣ: ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Published:
Updated:

ಬೆಂಗಳೂರು: ವಕೀಲ ಅಮಿತ್ ಕೇಶವಮೂರ್ತಿ ಶೂಟೌಟ್ ಕೊಲೆ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಪಿಪಿ) ಸಿ.ಎಚ್.ಹನುಮಂತರಾಯ ಅವರ ನೇಮಕಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆಯನ್ನು ಮುಕ್ತಾಯಗೊಳಿಸಿರುವ ಹೈಕೋರ್ಟ್ ಆದೇಶ ಕಾಯ್ದಿರಿಸಿದೆ.

ಈ ಕುರಿತಂತೆ ಆರೋಪಿಗಳಾದ ಗೋಪಾಲಕೃಷ್ಣ ಮತ್ತು ರಾಜೇಶ್‌ ಸಲ್ಲಿಸಿರುವ ಮೇಲ್ಮನವಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ಆರೋಪಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್, ‘ಎಸ್‌ಪಿಪಿ ನೇಮಕ ಮಾಡಬೇಕು ಎಂದು ದೂರುದಾರ ಕೇಳಿದಾಕ್ಷಣ ಸರ್ಕಾರ ಅದನ್ನು ಮಾನ್ಯ ಮಾಡಲು ಬರುವುದಿಲ್ಲ. ಸ್ಥಳೀಯ ಪ್ರಾಸಿಕ್ಯೂಟರ್‌ ಸಮರ್ಥವಾಗಿ ವಾದ ಮಂಡಿಸಲು ಸಾಧ್ಯವಿಲ್ಲ ಎಂದಾದರೆ ಮಾತ್ರ ಎಸ್‌ಪಿಪಿ ನೇಮಕ ಮಾಡಬೇಕು’ ಎಂದರು.

‘ಈ ಪ್ರಕರಣದಲ್ಲಿ ಹನುಮಂತರಾಯ ಅತ್ಯಾಸಕ್ತಿ ಹೊಂದಿದ್ದಾರೆ. ಪೂರ್ವಗ್ರಹ ಭಾವನೆಯೂ ಇದೆ. ವಿಚಾರಣಾ ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ವಿರುದ್ಧವೇ ಆರೋಪ ಮಾಡಿದ್ದಾರೆ' ಎಂದು ದೂರಿದರು.

ಈ ಮಾತಿಗೆ ಅಮಿತ್‌ ತಂದೆ ಪರ ವಕೀಲ ಡಿ.ಆರ್.ರವಿಶಂಕರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ‘ಹನುಮಂತರಾಯರ ವೃತ್ತಿಬದ್ಧತೆಯನ್ನು ಪ್ರಶ್ನಿಸುವಂತಿಲ್ಲ ಮತ್ತು ಪ್ರತಿವಾದಿ ಪರ ವಕೀಲರು ಹೇಳುತ್ತಿರುವ ಅಂಶಗಳು ಮೇಲ್ಮನವಿಯಲ್ಲಿ ಲಿಖಿತವಾಗಿ ದಾಖಲಾಗಿಲ್ಲ’ ಎಂದು ತಿರುಗೇಟು ನೀಡಿದರು.

ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಇದೊಂದು ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದ ಪ್ರಕರಣ. ಎಸ್‌ಪಿಪಿ ನೇಮಕ ವಿಚಾರದಲ್ಲಿ ಸರ್ಕಾರ ಕಾನೂನು ಬದ್ಧವಾಗಿಯೇ ನಡೆದುಕೊಂಡಿದೆ’ ಎಂದರು.

ಸಿ.ಎಚ್.ಹನುಮಂತರಾಯ ಅವರನ್ನು 2017ರ ಮಾರ್ಚ್ 2ರಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕ‌ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಇದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಪ್ರಕರಣದ ಪ್ರಮುಖ ಆರೋಪಿ ರಾಜೇಶ್ ಜಾಮೀನು ಅರ್ಜಿಯನ್ನು ಹೈಕೋರ್ಟ್ ಈಗಾಗಲೇ ತಿರಸ್ಕರಿಸಿದೆ. ರಾಜೇಶ್‌ ತಂದೆ ಗೋಪಾಲಕೃಷ್ಣ ಅವರಿಗೆ 78 ವರ್ಷವಾಗಿದೆ ಮತ್ತು ಕಾಯಿಲೆ ಇದೆ ಎಂಬ ಕಾರಣಕ್ಕೆ ಜಾಮೀನು ನೀಡಿದೆ.

ಏನಿದು ಪ್ರಕರಣ?
‘2017ರ ಜನವರಿ 13ರಂದು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ಅಮಿತ್‌ ರಾಜೇಶ್‌ ಪತ್ನಿ ಶೃತಿಗೌಡ ಜೊತೆ ಚರ್ಚಿಸುತ್ತಿದ್ದಾಗ ರಾಜೇಶ್‌ ಗುಂಡು ಹಾರಿಸಿ ಅಮಿತ್‌ ಅವರನ್ನು ಕೊಂದಿದ್ದರು’ ಎಂಬುದು ದೋಷಾರೋಪ ಪಟ್ಟಿಯಲ್ಲಿರುವ ಅಂಶ.

ನೆಲಮಂಗಲದ ಖ್ಯಾತ ವಕೀಲ ಕೇಶವಮೂರ್ತಿ ಅವರ ಪುತ್ರ ಅಮಿತ್ ಕೇಶವಮೂರ್ತಿ ಲಂಡನ್‌ನಲ್ಲಿ ಎಲ್ಎಲ್ಎಂ ಸ್ನಾತಕೋತ್ತರ ಪದವಿ ಪಡೆದಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !