ಪಿಯು ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: ನಿರ್ದೇಶಕ ಜಾಫರ್‌ ಸ್ಪಷ್ಟನೆ

ಶನಿವಾರ, ಮಾರ್ಚ್ 23, 2019
31 °C

ಪಿಯು ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ: ನಿರ್ದೇಶಕ ಜಾಫರ್‌ ಸ್ಪಷ್ಟನೆ

Published:
Updated:

ಬೆಂಗಳೂರು: ‘ಶನಿವಾರದ ನಡೆಯುವ ದ್ವಿತೀಯ ಪಿಯುಸಿ ಕನ್ನಡ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಪಿ.ಸಿ.ಜಾಫರ್‌ ಸ್ಪಷ್ಟಪಡಿಸಿದ್ದಾರೆ.

ಕನ್ನಡ ಪ್ರಶ್ನೆಪತ್ರಿಕೆಯ ಕೆಲವು ಚಿತ್ರಗಳು ಸಿಸಿಬಿಯ ಸಾಮಾಜಿಕ ಮಾಧ್ಯಮ ಘಟಕಕ್ಕೆ ದೊರೆತಿದ್ದು, ಶುಕ್ರವಾರ ರಾತ್ರಿಯೇ ಪಿಯು ಮಂಡಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿತ್ತು. ತಕ್ಷಣ ಕಾರ್ಯಪ್ರವೃತ್ತವಾದ ಮಂಡಳಿ, ಸೋರಿಕೆಯಾಗಿದೆ ಎನ್ನುವ ಪ್ರಶ್ನೆ ಪತ್ರಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿ, ಮೂಲ ಪ್ರಶ್ನೆಪತ್ರಿಗೆ ಹೋಲಿಕೆಯಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡಿತು.

ಈ ಕೆಳಗಿನ ಅಂಶಗಳ ಆಧಾರದ ಮೇಲೆ ಕನ್ನಡ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಮಂಡಳಿ ನಿರ್ಧರಿಸಿದೆ.

* ಸೋರಿಕೆಯಾಗಿದೆ ಎನ್ನುವ ಪ್ರಶ್ನೆಪತ್ರಿಕೆಯಲ್ಲಿ ಮುದ್ರಿತವಾಗಿರುವ ಕ್ರಮ ಸಂಖ್ಯೆ ಹಾಗೂ ಮೂಲ ಪ್ರಶ್ನೆ ಪತ್ರಿಕೆಯ ಕ್ರಮ ಸಂಖ್ಯೆ ಭಿನ್ನವಾಗಿದೆ. 

* ಸೋರಿಕೆಯಾದ ಪತ್ರಿಕೆಯ ಬಾರ್‌ಕೋಡ್‌, ಮಂಡಳಿ ಬಳಸುವ ಬಾರ್‌ಕೋಡ್‌ನೊಂದಿಗೆ ಹೋಲಿಕೆಯಾಗುತ್ತಿಲ್ಲ

* ಪ್ರಶ್ನೆಪತ್ರಿಕೆ ಇಟ್ಟಿರುವ ಎಲ್ಲಾ ಖಜಾನೆ (ಸ್ಟ್ರಾಂಗ್ ರೂಂ) ಬಳಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಅಲ್ಲಿ ಯಾರೂ ಅನಧಿಕೃತವಾಗಿ ಪ್ರವೇಶ ಮಾಡಿಲ್ಲ ಎನ್ನುವುದು ಮಂಡಳಿ ಖಚಿತಪಡಿಸಿಕೊಂಡಿದೆ. ಅಲ್ಲದೆ, ಎಲ್ಲಾ ಕ್ಯಾಮೆರಾದಿಂದಲೂ ನೇರ ದೃಶ್ಯಾವಳಿಗಳು ಪಿಯು ಮಂಡಳಿಗೆ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಅದನ್ನು ದಿನದ 24 ತಾಸು ಮೇಲ್ವಿಚಾರಣೆ ಮಾಡಲಾಗುತ್ತದೆ.

‘ಇಷ್ಟೆಲ್ಲ ಪರೀಕ್ಷಿಸಿದ ನಂತರವೂ, ಮೂಲ ಪ್ರಶ್ನೆಪತ್ರಿಕೆಗೆ ಯಾವುದಾದರೂ ಹೋಲಿಕೆ ಇದೆಯೇ ಎಂದು ತಿಳಿಯಲು ಬೆಳಗ್ಗಿನ ಜಾವ 3 ಗಂಟೆಗೆ ಸ್ಟ್ರಾಂಗ್‌ ರೂಂ ತೆರೆದು ತುಲನೆ ಮಾಡಿದೆವು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪತ್ರಿಕೆ, ಮೂಲ ಪ್ರಶ್ನೆಪತ್ರಿಕೆಯೊಂದಿಗೆ ಯಾವುದೇ ಸಾಮ್ಯತೆ ಇರಲಿಲ್ಲ’ ಎಂದು ಜಾಫರ್ ತಿಳಿಸಿದರು.

‘ಸಾಮಾಜಿಕ ಮಾಧ್ಯಮದಲ್ಲಿ ಈ ರೀತಿ ಪ್ರಶ್ನೆಪತ್ರಿಕೆ ಚಿತ್ರಗಳನ್ನು ಕಳುಹಿಸಿರುವವರ ವಿರುದ್ಧ ದೂರು ನೀಡಿದ್ದೇವೆ. ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !