ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಹೆಸರು ಬಹಿರಂಗ ‍ಪಡಿಸಲು ಪತ್ರ

Last Updated 18 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ಧ್ವನಿ ಅನುಕರಿಸಿ ಫೋನ್‌ ಕರೆ ಮಾಡಿದ ವ್ಯಕ್ತಿ, ಹೈಕೋರ್ಟ್‌ ನ್ಯಾಯಮೂರ್ತಿಗಳನ್ನಾಗಿ ಮಾಡುವ ಶಿಫಾರಸು ಪಟ್ಟಿಗೆ ಇಂತಹವರನ್ನು ಸೇರಿಸಿ ಎಂದು ಹೇಳಿದ ವಕೀಲರ ಹೆಸರುಗಳು ಯಾವುವು ಎಂಬುದನ್ನು ಬಹಿರಂಗಪಡಿಸಿ’ ಎಂದು ಬೆಂಗಳೂರು ವಕೀಲರ ಸಂಘ ರಾಜ್ಯ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರಿಗೆ ಪತ್ರ ಬರೆದಿದೆ.

ಈ ಕುರಿತಂತೆ ಸೋಮವಾರ ನಾರಾಯಣ ಸ್ವಾಮಿ ಅವರಿಗೆ ಬರೆದಿರುವ ಎರಡು ಪುಟಗಳ ಪತ್ರಕ್ಕೆ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ಪ್ರಧಾನ ಕಾರ್ಯದರ್ಶಿ ಎ.ಎನ್.ಗಂಗಾಧರಯ್ಯ ಹಾಗೂ ಖಜಾಂಚಿ ಶಿವಮೂರ್ತಿ ಸಹಿ ಮಾಡಿದ್ದಾರೆ.

‘ನ್ಯಾಯಾಂಗದಂತಹ ಶ್ರೇಷ್ಠ ಸಂಸ್ಥೆಯ ಘನತೆಯನ್ನು ಎತ್ತಿಹಿಡಿಯುವ ದೃಷ್ಟಿಯಿಂದ ತಾವು ಫೋನ್‌ನಲ್ಲಿ ಸೂಚಿಸಲಾದ ಆ ವಕೀಲರ ಹೆಸರುಗಳನ್ನು ಬಹಿರಗಂಪಡಿಸಬೇಕು. ಇದರಿಂದ ಸಾರ್ವಜನಿಕರಲ್ಲಿ ಮತ್ತು ವಕೀಲರ ವೃಂದದಲ್ಲಿ ಮೂಡಿರುವ ಎಲ್ಲ ಗೊಂದಲಗಳಿಗೆ ಇತಿಶ್ರೀ ಹಾಡಿದಂತಾಗುತ್ತದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಏನಿದು ಪ್ರಕರಣ?: ‘ಸುಪ್ರೀಂ ಕೋರ್ಟ್‌ನ ಎಲೆಕ್ಟ್ರಾನಿಕ್ಸ್ ಪ್ರೈವೇಟ್‌ ಬ್ರ್ಯಾಂಚ್‌ ಎಕ್ಸ್‌ಚೇಂಜ್‌ (ಇಪಿಬಿಎಕ್ಸ್‌) ಸಿಸ್ಟ್‌ಂ ಅನ್ನು ಹ್ಯಾಕ್‌ ಮಾಡಿ ರಂಜನ್‌ ಗೊಗೊಯಿ ಅವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಮತ್ತು ತೆಲಂಗಾಣ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ತೊಟ್ಟತಿಲ್‌ ಬಿ.ರಾಧಾಕೃಷ್ಣನ್‌ ಅವರಿಗೆ ಫೋನ್‌ ಮಾಡಿದ್ದಾರೆ’ ಎಂದು ‘ಟೆಲಿಗ್ರಾಫ್‌’ ಪತ್ರಿಕೆ ವರದಿ ಮಾಡಿರುವುದಾಗಿ ‘ಲೈವ್‌ ಲಾ’ ಮತ್ತು ‘ಬಾರ್ ಅಂಡ್‌ ಬೆಂಚ್‌’ ವೆಬ್‌ಸೈಟ್‌ಗಳು ವರದಿ ಮಾಡಿವೆ.

‘ಈ ಪ್ರಕರಣದ ಬಗ್ಗೆ ದೆಹಲಿಯ ತಿಲಕ್‌ ಮಾರ್ಗ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಮತ್ತು ಆಂತರಿಕ ತನಿಖೆಗೂ ಗೊಗೊಯಿ ನಿರ್ದೇಶಿಸಿದ್ದಾರೆ’ ಎಂದು ವೆಬ್‌ಸೈಟ್‌ ವರದಿಗಳು ತಿಳಿಸಿವೆ. ನಾರಾಯಣ ಸ್ವಾಮಿ ಅವರು 2019ರ ಜನವರಿ 17ರಿಂದ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT