‘ಚಿಣ್ಣರಿಗಾಗಿ ಸಾಹಿತ್ಯ ರೂಪಿಸಿದ ಪುರಾಣಿಕರು’

7
ಕಾವ್ಯಾನಂದರ ಕವನ ಮತ್ತು ವಚನಗುಚ್ಛದ ‘ಸಂಗಮ‌’ ಧ್ವನಿ ಸಾಂದ್ರಿಕೆ ಬಿಡುಗಡೆ

‘ಚಿಣ್ಣರಿಗಾಗಿ ಸಾಹಿತ್ಯ ರೂಪಿಸಿದ ಪುರಾಣಿಕರು’

Published:
Updated:
Prajavani

ಬೆಂಗಳೂರು: ‘ಸಿದ್ಧಯ್ಯ ಪುರಾಣಿಕರದು ವಿಶಿಷ್ಟ ಸಾಧನೆ. ವೈವಿಧ್ಯಮಯ ಸಾಹಿತ್ಯದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದು, ನವೋದಯ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯ ರಚಿಸಿ, ಚಿಣ್ಣರು ಹಾಡಿಕೊಳ್ಳಲು ಅನೇಕ‌ ಗೀತೆಗಳನ್ನು ಕೊಟ್ಟರು’ ಎಂದು ವಿದ್ವಾಂಸ
ಪ್ರೊ.ಎಂ.ಎಚ್‌.ಕೃಷ್ಣಯ್ಯ ನುಡಿದರು.

ಪುರಾಣಿಕ ಕುಟುಂಬದಿಂದ ಆಯೋಜಿಸಲಾಗಿದ್ದ ಸಿದ್ಧಯ್ಯ ಪುರಾಣಿಕ (ಕಾವ್ಯಾನಂದ) ಜನ್ಮದಿನೋತ್ಸವದ ‌ನೆನಪಿನಲ್ಲಿ ಅವರ ಕವನ ಮತ್ತು ವಚನಗುಚ್ಛದ ‘ಸಂಗಮ‌’ ಧ್ವನಿ ಸಾಂದ್ರಿಕೆಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಸಮಾಜದ ನ್ಯಾಯ–ಅನ್ಯಾಯಗಳ ಕುರಿತು ತಮ್ಮ ಸಾಮಾಜಿಕ ಕಳಕಳಿಯನ್ನೇ ಸಾಹಿತ್ಯದಲ್ಲಿ ಉಲ್ಲೇಖಿಸಿದ್ದಾರೆ. ಜನರಾಡುವ ಭಾಷೆಯನ್ನೇ ಬರಹಕ್ಕಿಳಿಸಿದ ಸಿದ್ಧಯ್ಯ ಅವರ ಸಾಹಿತ್ಯಕ್ಕೆ, ಎಲ್ಲರೂ ಗುನುಗುವ ರೀತಿ ಸೋಮಸುಂದರಂ ಅವರು ರಾಗ ಸಂಯೋಜಿಸಿದ್ದಾರೆ’ ಎಂದು ಹೇಳಿದರು.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ ನಿರ್ದೇಶಕ ಕೆ.ಎನ್‌.ಶಾಂತಕುಮಾರ್‌, ‘ಪುರಾಣಿಕ ಅವರು ವಚನ, ಕಾವ್ಯಗಳ ಮೂಲಕ ಸಾಹಿತ್ಯಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದರು. ಅಲ್ಲದೆ, ದಕ್ಷ ಅಧಿಕಾರಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರು’ ಎಂದು ಸ್ಮರಿಸಿದರು.

ಪುರಾಣಿಕ ಅವರ ಪುತ್ರ ಪ್ರಸನ್ನಕುಮಾರ, ‘ನಮ್ಮ ತಂದೆಯ ಸಾಹಿತ್ಯವನ್ನು ‌ಪಸರಿಸುವುದಕ್ಕಾಗಿ ಈ ಧ್ವನಿ ಸಾಂದ್ರಿಕೆಯನ್ನು ರಾಜ್ಯದ
ಸರ್ಕಾರಿ ಶಾಲೆಗಳ ಮಕ್ಕಳಿಗೆ ಉಚಿತವಾಗಿ ವಿತರಿಸುತ್ತೇವೆ’ ಎಂದು ಹೇಳಿದರು.

‘ಏಕೆ ಕುಣಿವೆ ತೂಕ ತಪ್ಪಿ ಸಾಕು ಕಾಲಭೈರವ’, ‘ನೀನು ವಿಶ್ವತೋಮುಖ’, ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’, ‘ನೀನು ಹರಿ ನೀನು ಹರ’, ‘ಹೂವಿನ ಗಂಧ’....ಧ್ವನಿ ಸಾಂದ್ರಿಕೆಯಲ್ಲಿನ ಹಾಡುಗಳನ್ನು ಗಾನಸುಧಾ ಸಂಗಮ ಸಂಗೀತ ಅಕಾಡೆಮಿಯ ಗಾಯಕರು ಹಾಡಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !