ಶನಿವಾರ, ಆಗಸ್ಟ್ 8, 2020
23 °C

ನಗರವನ್ನು ಒಂದು ವಾರ ಲಾಕ್‌ಡೌನ್ ಮಾಡಿ: ಬಿಬಿಎಂಪಿ ವಿರೋಧ ಪಕ್ಷ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಇದನ್ನು ನಿಯಂತ್ರಣಕ್ಕೆ ತರಲು ನಗರದಲ್ಲಿ ಒಂದು ವಾರ ಲಾಕ್‌ಡೌನ್‌ ಜಾರಿಗೊಳಿಸಬೇಕು’ ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜಿದ್‌ ಒತ್ತಾಯಿಸಿದ್ದಾರೆ.

‘ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ ಎಂಬ ಕಾರಣಕ್ಕೆ ಸೋಂಕಿತರನ್ನು ಮನೆಯಲ್ಲೇ ಚಿಕಿತ್ಸೆಗೆ ಒಳಗಾಗುವಂತೆ ಸಲಹೆ ನೀಡಲಾಗುತ್ತಿದೆ. ಸೋಂಕಿತರ ಜೊತೆ ನೇರ ಹಾಗೂ ಪರೋಕ್ಷ ಸಂಪರ್ಕ ಹೊಂದಿದವರನ್ನು ಕ್ವಾರಂಟೈನ್‌ ಮಾಡುವುದನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಸೋಂಕು ಪತ್ತೆಯಾದ ಮನೆಗಳ ಆಸುಪಾಸಿನ ನಿವಾಸಿಗಳು ಆತಂಕಕ್ಕೆ ಒಳಗಾಗುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

‘ಕೆಮ್ಮು ಶೀತ ಜ್ವರ ಮಾದರಿಯ ಅನಾರೋಗ್ಯ ಲಕ್ಷಣ ಇರುವವರನ್ನು (ಐಎಲ್‌ಐ) ಹಾಗೂ ತೀವ್ರ ಉಸಿರಾಟದ ತೊಂದರೆ (ಸಾರಿ) ಇರುವವರನ್ನು ಯಾವ ಆಸ್ಪತ್ರೆಗಳಲ್ಲೂ ದಾಖಲಿಸಿಕೊಳ್ಳುತ್ತಿಲ್ಲ. ಸೋಂಕು ದೃಢಪಟ್ಟರೆ ಮಾತ್ರ ದಾಖಲಿಸಿಕೊಳ್ಳುವುದಾಗಿ ಆಸ್ಪತ್ರೆಗಳ ವೈದ್ಯರು ಹೇಳುತ್ತಿದ್ದಾರೆ. ಇಂತಹ ಲಕ್ಷಣ ಹೊಂದಿರುವ ವೃದ್ಧರು, ಗರ್ಭಿಣಿಯರು, ಮಕ್ಕಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವವರಿಗೆ ತುರ್ತಾಗಿ ಚಿಕಿತ್ಸೆ ಸಿಗದೇ ಹೋದರೆ ಅವರ ಜೀವ ಅಪಾಯಕ್ಕೆ ಸಿಲುಕಲಿದೆ’ ಎಂದು ಅವರು ಎಚ್ಚರಿಸಿದ್ದಾರೆ. 

ಇಂತಹ ಅನಾರೋಗ್ಯ ಲಕ್ಷಣ ಇರುವವರನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡುವಂತೆ ಆಸ್ಪತ್ರೆಗಳಿಗೆ ನಿರ್ದೇಶನ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು ಹಾಗೂ ಪಾಲಿಕೆಯನ್ನು ವಾಜಿದ್‌ ಒತ್ತಾಯಿಸಿದ್ದಾರೆ.

‘ನಗರದಲ್ಲಿ ಇಂತಹ ವಿಷಮ ಪರಿಸ್ಥಿತಿ ಎದುರಾಗುವುದಕ್ಕೆ  ಆಡಳಿತ ವೈಫಲ್ಯವೇ ಕಾರಣ‘ ಎಂದು ಅವರು ಆರೋಪಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು