ಮತ ಜಾಗೃತಿಗೆ ‌‘ಆಪರೇಷನ್‌ ಸತ್ಯಶೋಧಕ’

ಗುರುವಾರ , ಏಪ್ರಿಲ್ 25, 2019
22 °C

ಮತ ಜಾಗೃತಿಗೆ ‌‘ಆಪರೇಷನ್‌ ಸತ್ಯಶೋಧಕ’

Published:
Updated:
Prajavani

ಬೆಂಗಳೂರು: ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಸಂಘಟನೆಗಳು ಬುಧವಾರ ನಗರದಲ್ಲಿ ’ಆಪರೇಷನ್ ಸತ್ಯಶೋಧಕ ಆಂದೋಲನ’ ಆರಂಭಿಸಿವೆ.

ಸಂಘಟನೆಗಳ ಕಾರ್ಯಕರ್ತರು ಮನೆ ಹಾಗೂ ಅಂಗಡಿಗಳಿಗೆ ಭೇಟಿ ನೀಡಿ ಮೂಲಭೂತ ಸೌಕರ್ಯಗಳ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿದರು. ಜೊತೆಗೆ ಮುಂಬರುವ ಸರ್ಕಾರದಿಂದ ಜನರ ನಿರೀಕ್ಷೆಗಳ ಕುರಿತು ಚರ್ಚಿಸಿದರು.

‘ಐದು ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಕ್ಷೇತ್ರಗಳಲ್ಲಿ ಈಗಿನ ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಪಟ್ಟಿ ಮಾಡಿದ್ದೇವೆ. ಕಾರ್ಮಿಕರು ಎದುರಿಸಿದ ಸಂಕಷ್ಟಗಳು ಹಾಗೂ ಪರಿಹಾರ ಕಾಣದ ನಿರುದ್ಯೋಗ ಸಮಸ್ಯೆ ಕುರಿತು ಮಾಹಿತಿ ನೀಡಿದ್ದೇವೆ. ಇದರಲ್ಲಿರುವ ಸರ್ಕಾರದ ಸಾಧನೆ ಹಾಗೂ ಲೋಪಗಳನ್ನು ಗಮನಿಸಿ ನಂತರ ಮತ ಹಾಕಿ’ ಎಂದು ಜನರಲ್ಲಿ ಅರಿವು ಮೂಡಿಸಿದರು.  ಆಂದೋಲನದಲ್ಲಿ ಗಾರ್ಮೆಂಟ್ಸ್‌ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಲೈಂಗಿಕ ಅಲ್ಪಸಂಖ್ಯಾತರು, ವಕೀಲರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

ಜನಸಾಮಾನ್ಯರಿಗೆ ಏನು ಬೇಕು?

* ಎಲ್ಲಾ ಜಾತಿ, ವರ್ಗದವರಿಗೆ ಸಮಾನತೆ

* ವಾಕ್ ಸ್ವಾತಂತ್ರ್ಯದ ಹಕ್ಕಿನ ರಕ್ಷಣೆ

* ಶಿಕ್ಷಣ, ಆರೋಗ್ಯ, ಪಡಿತರ ವ್ಯವಸ್ಥೆ ಉತ್ತಮ ಪಡಿಸುವುದು

* ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡುವುದು

* ಲೈಂಗಿಕ ಅಲ್ಪಸಂಖ್ಯಾತರ ರಕ್ಷಣೆಗೆ ಕಾನೂನು ರಚನೆ

* ಬಡವರಿಗೆ ವಸತಿ, ಭೂಮಿಯ ಹಕ್ಕು

* ಪರಿಸರ ನಾಶವನ್ನು ತಡೆಯುವುದು

* ಕಾರ್ಮಿಕರ ಹಿತ ಕಾಯುವುದು

* ಬೆಲೆ ಏರಿಕೆ ಹಾಗೂ ನಿರುದ್ಯೋಗ ಸಮಸ್ಯೆ ನಿವಾರಣೆ
**

* ಮಹಿಳಾ ಕಲ್ಯಾಣ:‘ಬೇಟಿ ಬಚಾವೋ, ಬೇಟಿ ಪಢಾವೋ’ ಯೋಜನೆಯಲ್ಲಿ, ಕೇವಲ ಶೇ 24ರಷ್ಟು ಅನುದಾನ ಬಿಡುಗಡೆ ಮಾಡಿದೆ. ಅನುದಾನದ ಶೇ 56ರಷ್ಟು ಹಣವನ್ನು ಕೇವಲ ಪ್ರಚಾರಕ್ಕೆ ಬಳಸಲಾಗಿದೆ. ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ರಾಜ್ಯಸಭೆಯಿಂದ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ.

* ಶಿಕ್ಷಣ: ಸಾರ್ವಜನಿಕ ಶಿಕ್ಷಣಕ್ಕೆ ನೀಡುವ ಅನುದಾನದ ಪ್ರಮಾಣ ಇಳಿಕೆಯಾಗಿದೆ. ಈ ಸರ್ಕಾರದ ಅವಧಿಯಲ್ಲಿ 102 ಖಾಸಗಿ ವಿಶ್ವವಿದ್ಯಾಲಯಗಳನ್ನು ನಿರ್ಮಿಸಿದೆ. ಆದರೆ ಕೇವಲ ಮೂರು ಕೇಂದ್ರೀಯ ವಿ.ವಿಗಳನ್ನು ಸ್ಥಾಪಿಸುವ ಮೂಲಕ ಖಾಸಗಿಕರಣಕ್ಕೆ ಮುಂದಾಗಿದೆ.

* ಆರೋಗ್ಯ: ಅಂಗನವಾಡಿ ನಿರ್ಮಾಣಗಳ ಐ.ಸಿ.ಡಿ.ಎಸ್ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್‍ ಯೋಜನೆಗೆ ನೀಡುತ್ತಿದ್ದ ಅನುದಾನ ಕಡಿಮೆ ಮಾಡಿದೆ. ಖಾಸಗಿಯವರ ಲಾಭಕ್ಕಾಗಿ ಆಯುಷ್ಮಾನ್ ಯೋಜನೆಗೆ ಪ್ರೋತ್ಸಾಹ ನೀಡುತ್ತಿದೆ.

* ದಲಿತರ ಹಕ್ಕುಗಳು:‌ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅರಣ್ಯ ಹಕ್ಕು ಕಾಯ್ದೆಗಳ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ. ಸಂವಿಧಾನದಲ್ಲಿದ್ದ ಜಾತಿ ಆಧಾರಿತ ಮೀಸಲಾತಿಗೆ ತಿದ್ದುಪಡಿ ಮಾಡಿ ವರ್ಗ ಆಧಾರಿತ ಮೀಸಲಾತಿ ಜಾರಿ ಮಾಡಿದೆ.

* ಭ್ರಷ್ಟಾಚಾರ: ಪ್ರಧಾನಿ ನರೇಂದ್ರ ಮೋದಿ, ‘ನಾನು ತಿನ್ನುವುದಿಲ್ಲ, ತಿನ್ನುವವರನ್ನು ಬಿಡುವುದಿಲ್ಲ’ ಎಂದಿದ್ದರು. ಆದರೆ ಅದಕ್ಕೆ ಪೂರಕ ಕ್ರಮ ಕೈಗೊಂಡಿಲ್ಲ.

ಬೀದಿ ವ್ಯಾಪಾರಿಗಳು
ಜಿಎಸ್‍ಟಿಯಿಂದ ದೊಡ್ಡ ಕಂಪನಿಗಳಿಗೆ ಅನುಕೂಲವಾಯಿತು. ಆನ್‍ಲೈನ್ ಶಾಪಿಂಗ್‍ನಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ ನೀಡಿದ್ದರಿಂದ ಬೀದಿ ವ್ಯಾಪಾರಿಗಳಿಗೆ, ಸಣ್ಣ ಅಂಗಡಿಯವರಿಗೆ ಭಾರೀ ನಷ್ಟವಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !