ಮತ ಹಕ್ಕಿಗಾಗಿ 4 ವರ್ಷ ಅಲೆದಾಟ

ಬುಧವಾರ, ಏಪ್ರಿಲ್ 24, 2019
31 °C
11 ಬಾರಿ ತಿರಸ್ಕಾರಗೊಂಡಿದ್ದ ತೃತೀಯ ಲಿಂಗಿಯ ಅರ್ಜಿ

ಮತ ಹಕ್ಕಿಗಾಗಿ 4 ವರ್ಷ ಅಲೆದಾಟ

Published:
Updated:
Prajavani

ಬೆಂಗಳೂರು: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ತೃತೀಯ ಲಿಂಗಿಯೊಬ್ಬರು ಸತತ 11 ಬಾರಿ ಅರ್ಜಿ ಸಲ್ಲಿಸಿ ಮತದಾನದ ಹಕ್ಕು ಪಡೆಯುವಲ್ಲಿ ಸಫಲರಾಗಿದ್ದಾರೆ.

ಮತದಾನದ ಹಕ್ಕು ಪಡೆಯಲೇಬೇಕೆಂಬ ಛಲ ತೋರಿದ 22 ವರ್ಷ ವಯಸ್ಸಿನ ರಿಯಾನಾ, ನಾಲ್ಕು ವರ್ಷ ಕಚೇರಿಗಳಿಗೆ ಎಡತಾಕಿದ್ದಾರೆ. 12ನೇ ಬಾರಿ ಸಲ್ಲಿಸಿದ್ದ ಅರ್ಜಿಗೆ ಕೊನೆಗೂ ಅಧಿಕಾರಿಗಳಿಂದ ಸ್ಪಂದನೆ ದೊರಕಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸಹ ಸೇರ್ಪಡೆಯಾಗಿದೆ.

‘ನಾನು ತೃತೀಯ ಲಿಂಗಿಯಾಗಿರುವ ಒಂದೇ ಕಾರಣದಿಂದ ನನ್ನ ಅರ್ಜಿ ಅಷ್ಟು ಸಲ ತಿರಸ್ಕಾರ ಆಯಿತು. ಈಗ ಮತದಾರರ ಗುರುತಿನ ಚೀಟಿ ಸಿಕ್ಕಿದೆ. ಮೊದಲ ಬಾರಿಗೆ ಮತಗಟ್ಟೆಗೆ ತೆರಳಲು ಸಂತಸದಿಂದ ಸಿದ್ಧವಾಗಿದ್ದೇನೆ’ ಎಂದು ರಿಯಾನಾ ಹೇಳಿದರು.

‘ಶಾಂತಿನಗರದ ವಿವೇಕನಗರದ ನಿವಾಸಿಯಾದ ನಾನು 18 ವರ್ಷ ತುಂಬಿದ ಬಳಿಕ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅರ್ಜಿ ಸಲ್ಲಿಸಿದ್ದೆ. ನನ್ನನ್ನು ನೋಡಿದ ಕೂಡಲೇ ‘ನಿಮ್ಮ ಹೆಸರು ಸೇರ್ಪಡೆಗೆ ಇನ್ನೂ ಕಾನೂನು ಬಂದಿಲ್ಲ’ ಎಂದು ವಾಪಸ್ ಕಳುಹಿಸಿದರು’ ಎಂದು ತಮಗಾದ ಅವಮಾನವನ್ನು ರಿಯಾನಾ ‘ಪ್ರಜಾವಾಣಿ’ ಜತೆ ಹಂಚಿಕೊಂಡರು.

ಮತ್ತೊಮ್ಮೆ ಹೋದಾಗ ‘ನಿಮಗೆ ಮನೆ–ಮಠ ಇಲ್ಲ’ ಎಂದರು, ಮಗದೊಮ್ಮೆ ಹೋದಾಗ ನೋಡಿದ ಕೂಡಲೇ ವಾಪಸ್ ಕಳುಹಿಸಿದರು. ಇನ್ನೊಮ್ಮೆ ‘ನಿಮ್ಮ ಹೆಸರು ರಿಯಾನಾ ಸನ್‌ ಆಫ್ ರಾಜು ಎಂದಿದೆ, ಡಾಟರ್ ಆಫ್ ರಾಜು ಎಂದು ಬರೆಸಿಕೊಂಡು ಬನ್ನಿ’ ಎಂದರು. ಹೀಗೆ ಹೋದಾಗಲೆಲ್ಲ ಒಂದೊಂದು ಕಾರಣ ಹೇಳಿ ವಾಪಸ್ ಕಳುಹಿಸಿ ಅರ್ಜಿ ತಿರಸ್ಕರಿಸಿದರು ಎಂದು ವಿವರಿಸಿದರು.

‘ಕೊನೆಗೆ ಶಾಂತಿನಗರ ಶಾಸಕ ಎನ್‌.ಎ. ಹ್ಯಾರಿಸ್ ಅವರ ಬಳಿ ಸಮಸ್ಯೆ ಹೇಳಿಕೊಂಡೆ. ಅವರ ಸಹಾಯದಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಆಯಿತು’ ಎಂದರು.

‘ಅದೃಷ್ಟವಶಾತ್ ನಾನು ತಂದೆ–ತಾಯಿ ಜೊತೆಗಿದ್ದೇನೆ, ಖಾಸಗಿ ಉದ್ಯೋಗವನ್ನೂ ಪಡೆದುಕೊಂಡಿದ್ದೇನೆ. ಮನೆಯಿಂದ ಹೊರ ದಬ್ಬಿಸಿಕೊಂಡ ಹಲವರು ಬೀದಿಯಲ್ಲಿದ್ದಾರೆ. ಅವರು ಸರ್ಕಾರಿ ಸವಲತ್ತು ಪಡೆಯುವುದು ಹೇಗೆ’ ಎಂದು ಪ್ರಶ್ನಿಸಿದರು.

ಪ್ರಜೆಗಳೆಂದು ಪರಿಗಣಿಸದ ಸರ್ಕಾರ

ತೃತೀಯ ಲಿಂಗಿಗಳು ರಾಜ್ಯದಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೆ ಎಂಬುದಕ್ಕೆ ಸ್ಪಷ್ಟವಾದ ಅಂಕಿ–ಅಂಶ ಇಲ್ಲ. ಹೀಗಾಗಿ, ಗಣತಿ ನಡೆಸಬೇಕು ಎಂದು ಎಲ್‍ಜಿಬಿಟಿ ಕಾರ್ಯಕರ್ತರಾದ ಅಕೈ ಪದ್ಮಶಾಲಿ ಆಗ್ರಹಿಸಿದರು.

ರಾಜ್ಯದಲ್ಲಿ ಲಕ್ಷಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದಾರೆ ಎಂದು ಅಂದಾಜಿಸಿದ್ದೇವೆ. ಮತದಾರರ ಪಟ್ಟಿಯಲ್ಲಿ ಕೇವಲ 4,661 ಜನರ ಹೆಸರಿದೆ ಎಂದರು. ‘ಮನೆಯಿಂದ ಹೊರ ದಬ್ಬಿದ ನಂತರ ವಲಸೆ ಹೋಗುವ ಸಮುದಾಯ ನಮ್ಮದು. ಅವರಿಗೆ ಮತದಾನದ ಹಕ್ಕು ನೀಡಲು ವಿಶೇಷ ಅಭಿಯಾನ ನಡೆಸಿ, ಸ್ಥಳದಲ್ಲೇ ಗುರುತಿನ ಚೀಟಿ ನೀಡುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿದ್ದೆವು. ಸ್ಪಂದನೆ ದೊರೆಯಲಿಲ್ಲ’ ಎಂದು ‘‍ಪ್ರವಾವಾಣಿ’ ಬಳಿ ತಮ್ಮ ಅಸಮಾಧಾನ ಹೇಳಿಕೊಂಡರು.

ಬರಹ ಇಷ್ಟವಾಯಿತೆ?

 • 12

  Happy
 • 1

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !