ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈತ್ರಿ’ ಕುರುಡನ ಮೇಲೆ ಕುಂಟ ಸವಾರಿ: ಕೆ.ಎಸ್ ಈಶ್ವರಪ್ಪ

Last Updated 20 ಮಾರ್ಚ್ 2019, 20:04 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕಸಭಾ ಚುನಾವಣೆಯಲ್ಲಿನ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮೈತ್ರಿ ಕುರುಡನ ಮೇಲೆ ಕುಂಟ ಸವಾರಿ ಮಾಡಿದಂತಿದೆ’ ಎಂದು ಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ಭಯದಿಂದ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರು ಮೈತ್ರಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ನವರನ್ನು ಜೆಡಿಎಸ್‌ನವರು ಹಾಗೂ ಜೆಡಿಎಸ್‌ನವರನ್ನು ಕಾಂಗ್ರೆಸ್‌ನವರು ಸೋಲಿಸಲಿದ್ದಾರೆ. ಅವರು ನಗುತ್ತಾ ಅಕ್ಕಪಕ್ಕ ಕುಳಿತಿದ್ದಾರೆ. ಆದರೆ, ನಗುನಗುತ್ತಲೇ ಯಾವಾಗ ಚೂರಿ ಹಾಕಿಕೊಳ್ಳುತ್ತಾರೋ ಗೊತ್ತಿಲ್ಲ’ ಎಂದರು.

‘ಮೈತ್ರಿಕೂಟದ ನಾಯಕರು ಉಡಾ‍ಫೆ ಹಾಗೂ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿ ಎರಡಂಕಿ ದಾಟುವುದಿಲ್ಲ ಎಂದು ಜೆಡಿಎಸ್‌ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ಜೆಡಿಎಸ್‌ ಮೊದಲು ಈಗಿರುವ ಎರಡು ಸ್ಥಾನಗಳನ್ನು ಉಳಿಸಿಕೊಳ್ಳಲಿ. ಬಳಿಕ ಮಾತನಾಡಲಿ. ಈ ಚುನಾವಣೆಯಲ್ಲಿ ಮೈತ್ರಿಕೂಟ ಎರಡಂಕೆಯನ್ನೂ ದಾಟಲ್ಲ’ ಎಂದು ಅವರು ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕರ್ನಾಟಕದಿಂದ ಸ್ಪರ್ಧೆ ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ರಾಹುಲ್ ಗಾಂಧಿ ಅಲ್ಲ, ಅವರ ಅಜ್ಜಿ ಸ್ವರ್ಗದಲ್ಲಿರುವ ಇಂದಿರಾ ಗಾಂಧಿ ಬಂದರೂ ನಮಗೆ ಚಿಂತೆ ಇಲ್ಲ. ಮೋದಿ ಅವರ ಅಲೆಯಲ್ಲಿ ನಾವು ಗೆಲ್ಲುತ್ತೇವೆ’ ಎಂದು ಹೇಳಿದರು.

‘ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಸ್ಪರ್ಧೆ ಮಾಡಲಿದೆ. ಮಂಡ್ಯ ಕ್ಷೇತ್ರದಲ್ಲಿ ಸಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಿದ್ದೇವೆ. ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್‌ ಅವರನ್ನು ಬೆಂಬಲಿಸಲು ನಾವೇನು ಕಾಂಗ್ರೆಸ್‌ ನಾಯಕರಾ’ ಎಂದು ಅವರು ಪ್ರಶ್ನಿಸಿದರು.

‘ಮಾನ್ಯತಾ ಟೆಕ್‌ ಪಾರ್ಕ್‌ ಬಳಿ ಮೋದಿ ಪರ ಘೋಷಣೆ ಕೂಗಿದವರು ಬಿಜೆಪಿ ಕಾರ್ಯಕರ್ತರಲ್ಲ. ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಮರ್ಯಾದೆ ಇಲ್ಲ. ಕಾಮನ್‌ಸೆನ್ಸ್‌ ಸಹ ಇಲ್ಲವೇ ಇಲ್ಲ’ ಎಂದು ಕಿಡಿಕಾರಿದರು.

‘ವಾಲ್ಮೀಕಿ ಬಿಟ್ಟರೆ ರಮೇಶ್‌ ಕುಮಾರ್’

‘ರಾಮಾಯಣ ಬರೆದ ವಾಲ್ಮೀಕಿ ಬಿಟ್ಟರೇ ತಾನೇ ಬುದ್ಧಿವಂತ ಎಂಬಂತೆ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‌ ಕುಮಾರ್‌ ವರ್ತಿಸುತ್ತಿದ್ದಾರೆ’ ಎಂದು ಕೆ.ಎಸ್‌.ಈಶ್ವರಪ್ಪ ಲೇವಡಿ ಮಾಡಿದರು.

‘ಸದನದಲ್ಲಿ ಅವರ ಮಾತಿನ ಲಹರಿ ಆ ಮಾದರಿಯಲ್ಲಿದೆ. ಆದರೆ, ಅವರು ಈವರೆಗೂ ಡಾ.ಉಮೇಶ ಜಾಧವ ರಾಜೀನಾಮೆಯನ್ನು ಅಂಗೀಕರಿಸಿಲ್ಲ. ಇನ್ನೂ 15 ಕಾನೂನು ಪುಸ್ತಕಗಳನ್ನು ಬೇಕಿದ್ದರೆ ಓದಲಿ. ಆದಷ್ಟು ಬೇಗ ರಾಜೀನಾಮೆ ಅಂಗೀಕರಿಸಬೇಕು’ ಎಂದು ಅವರು ಆಗ್ರಹಿಸಿದರು.

**

ರಾಜ್ಯದಲ್ಲಿ ಆಪರೇಷನ್‌ ಕಮಲದಂಥ ಸಂಸ್ಕೃತಿ ಪರಿಚಯಿಸಿದವರೇ ಸಿದ್ದರಾಮಯ್ಯ. ಅಧಿಕಾರದ ಆಸೆಯಿಂದ ಎಚ್‌.ಡಿ.ದೇವೇಗೌಡರಿಗೆ ಟೋಪಿ ಹಾಕಿ ಅವರು ಕಾಂಗ್ರೆಸ್‌ಗೆ ಸೇರಿದರು
- ಕೆ.ಎಸ್‌.ಈಶ್ವರಪ್ಪ, ಬಿಜೆಪಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT