ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕ್ಷೇತ್ರ ‘ಕೈ’ ವಶಕ್ಕೆ ಮೈತ್ರಿ ಪಣ

ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರದಲ್ಲಿ ಭರ್ಜರಿ ಪ್ರಚಾರಕ್ಕೆ ಆದ್ಯತೆ
Last Updated 3 ಮೇ 2019, 14:03 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಈ ಮೂರೂ ಲೋಕಸಭಾ ಕ್ಷೇತ್ರಗಳನ್ನು ‘ಕೈ’ವಶ ಮಾಡಿಕೊಳ್ಳಬೇಕೆಂದು ಪಣ ತೊಟ್ಟಿರುವ ಮಿತ್ರ ಪಕ್ಷಗಳ (ಜೆಡಿಎಸ್‌– ಕಾಂಗ್ರೆಸ್‌) ನಾಯಕರು ಭರ್ಜರಿ ಚುನಾವಣಾ ಪ್ರಚಾರಕ್ಕೆ ಮುಂದಾಗಿದ್ದಾರೆ.

ಈ ಮೂರೂ ಕ್ಷೇತ್ರಗಳ ಉಭಯ ಪಕ್ಷಗಳ ಅಧ್ಯಕ್ಷರು, ಮುಖಂಡರ ಜಂಟಿ ಸಭೆ ಗುರುವಾರ (ಮಾ. 28) ಅರಮನೆ ಮೈದಾನದಲ್ಲಿ ನಡೆಯಲಿದೆ.

ಜೆಡಿಎಸ್‌ ಕಚೇರಿಯಲ್ಲಿ ಬುಧವಾರ ನಡೆದ ಸಭೆಗೆ ಕಾಂಗ್ರೆಸ್‌ ನಾಯಕರ ಜೊತೆ ಬಂದ ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೃಷ್ಣ ಬೈರೇಗೌಡ ಅವರನ್ನು ದೇವೇಗೌಡ ಸನ್ಮಾನಿಸಿದರು.

ಈ ವೇಳೆ, ‌ಬೈರೇಗೌಡ ಅವರ ಜೊತೆಗಿನ ಒಡನಾಟವನ್ನು ದೇವೇಗೌಡರು ಮೆಲುಕು ಹಾಕಿದರು.

ಬಳಿಕ ಮಾತನಾಡಿದ ದೇವೇಗೌಡ, ‘ಕೃಷ್ಣ ಬೈರೇಗೌಡ ಅವರನ್ನು ಗೆಲ್ಲಿಸಲು ಜವಾಬ್ದಾರಿ ಜೆಡಿಎಸ್‍ಗೂ ಇದೆ. ಕಾಂಗ್ರೆಸ್-ಜೆಡಿಎಸ್ ಮುಖಂಡರು ಜಂಟಿಯಾಗಿ ಪ್ರಚಾರ ಕೈಗೊಳ್ಳಲಿದ್ದಾರೆ. ಯಾವುದೇ ಮನಸ್ತಾಪ ಇಲ್ಲದೆ ಪಕ್ಷದ ನಾಯಕರು, ಕಾರ್ಯಕರ್ತರು ಕೆಲಸ ಮಾಡಲಿದ್ದಾರೆ’ ಎಂದರು.

ಜೆಡಿಎಸ್ ಮುಖಂಡರಾದ ಗೋಪಾಲಯ್ಯ, ಆರ್. ಪ್ರಕಾಶ್ ಸಭೆಯಲ್ಲಿದ್ದರು.

ಅದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಕೃಷ್ಣ ಬೈರೇಗೌಡ, ‘ಎರಡೂ ಪಕ್ಷಗಳ (ಕಾಂಗ್ರೆಸ್‌, ಜೆಡಿಎಸ್‌) ನಾಯಕರು ಮತ್ತು ಕಾರ್ಯಕರ್ತರ ಮೇಲೆ ನಾನು ಅವಲಂಬಿತನಾಗಿದ್ದೇನೆ’ ಎಂದು ಹೇಳಿದರು.

49 ನಾಮಪತ್ರ ತಿರಸ್ಕಾರ

ಬೆಂಗಳೂರು: ಮೊದಲ ಹಂತದ 14 ಕ್ಷೇತ್ರಗಳ ನಾಮಪತ್ರ ಪರಿಶೀಲನೆ ಬುಧವಾರ ನಡೆದಿದ್ದು, 49 ನಾಮಪತ್ರಗಳು ತಿರಸ್ಕಾರಗೊಂಡಿವೆ. 237 ಅಭ್ಯರ್ಥಿಗಳ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.

ಬೆಂಗಳೂರು ದಕ್ಷಿಣದಲ್ಲಿ 9, ಬೆಂಗಳೂರು ಕೇಂದ್ರ ಮತ್ತು ಉತ್ತರದಲ್ಲಿ ತಲಾ 8, ಗ್ರಾಮಾಂತರದಲ್ಲಿ 3 ನಾಮಪತ್ರ ತಿರಸ್ಕಾರಗೊಂಡಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ.

‘31ರಂದು ರಾಹುಲ್‌; ಪ್ರಿಯಾಂಕಾಗೆ ಆಹ್ವಾನ’

ಬೆಂಗಳೂರು: ಮೈತ್ರಿ ಪಕ್ಷಗಳ (ಜೆಡಿಎಸ್‌– ಕಾಂಗ್ರೆಸ್‌) ಜಂಟಿ ಚುನಾವಣೆ ಪ್ರಚಾರಕ್ಕೆ ಇದೇ 31ರಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಣಕಹಳೆ ಮೊಳಗಿಸಲಿದ್ದಾರೆ.

ನಗರದ ಹೊರವಲಯದ ಮಾದಾವರ ಬಳಿಯ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರ (ಬಿಐಇಸಿ) ಮೈದಾನದಲ್ಲಿ ಸಂಜೆ 4 ಗಂಟೆಗೆ ಈ ಸಮಾವೇಶ ಆಯೋಜಿಸಲಾಗಿದೆ. ಉಭಯ ಪಕ್ಷಗಳ ರಾಜ್ಯ– ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಕೆಪಿಸಿಸಿ ಚುನಾವಣಾ ಪ್ರಚಾರ ಸಭೆಯ ಬಳಿಕ ಮಾತನಾಡಿದ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ. ಪಾಟೀಲ, ‘ರಾಜ್ಯದಲ್ಲಿ ನಡೆಯಲಿರುವ ಇನ್ನೂ ನಾಲ್ಕರಿಂದ ಐದು ಸಮಾವೇಶಗಳಲ್ಲಿ ರಾಹುಲ್‌ ಭಾಗವಹಿಸಲಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರುವಂತೆ ಪ್ರಿಯಾಂಕಾ ಗಾಂಧಿ ಅವರನ್ನೂ ಆಹ್ವಾನಿಸುತ್ತೇವೆ’ ಎಂದರು.

‘22 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಕೆಲವು ಕ್ಷೇತ್ರಗಳಲ್ಲಿ ಗೊಂದಲವಿದೆ. ಅದನ್ನು ಬಗೆಹರಿಸುವ ಕೆಲಸವನ್ನು ನಾಯಕರು ಮಾಡುತ್ತಾರೆ’ ಎಂದರು.

‘ಬಿಜೆಪಿಯವರು ವಚನಭ್ರಷ್ಟರು. ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ಸಂದರ್ಭದಲ್ಲಿ ಇದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಕೇವಲ ಭರವಸೆಗಳನ್ನು ಕೊಡುತ್ತಲೇ ಬಂದಿರುವ ಮೋದಿಗೆ ಮತ್ತೊಮ್ಮೆ ಅಧಿಕಾರ ಕೊಡುವ ವಿಷಯದಲ್ಲಿ ಜನ ಯೋಚಿಸಬೇಕು’ ಎಂದರು.

*ತೇಜಸ್ವಿ ಸೂರ್ಯ ಅವರಿಗೆ ಪಕ್ಷದ ವರಿಷ್ಠರೇ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ ನೀಡಿದ್ದಾರೆ. ಇದರಲ್ಲಿ ಅಸಮಾಧಾನದ ಪ್ರಶ್ನೆಯೇ ಬರುವುದಿಲ್ಲ

– ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT