ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲು – ಗೆಲುವಿನ ಲೆಕ್ಕಾಚಾರ ಇಂದು

ಲೋಕಸಭಾ ಚುನಾವಣೆ: ಮತ ಎಣಿಕೆ ಇಂದು – ಬಯಲಾಗಲಿದೆ 78 ಅಭ್ಯರ್ಥಿಗಳ ಭವಿಷ್ಯ
Last Updated 22 ಮೇ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಬೆಂಗಳೂರು ಉತ್ತರ, ಕೇಂದ್ರ ಹಾಗೂ ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿ ಕಣದಲ್ಲಿರುವ ಒಟ್ಟು 78 ಅಭ್ಯರ್ಥಿಗಳಲ್ಲಿ ಸಂಸತ್ತು ಪ್ರವೇಶಿಸುವ ಮೂವರು ಅದೃಷ್ಟವಂತರು ಯಾರು ಎಂಬ ಪ್ರಶ್ನೆಗೆ ಗುರುವಾರ ಉತ್ತರ ಸಿಗಲಿದೆ.

ಮತದಾನ ಪ್ರಕ್ರಿಯೆ ಪೂರ್ಣಗೊಂಡು 35 ದಿನಗಳು ಉರುಳಿವೆ. ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದ್ದರೂ ಗೆಲುವು ಯಾರದು ಎಂಬ ಕುತೂಹಲ ಮತದಾರರ ಮನದಲ್ಲಿ ಮನೆ ಮಾಡಿದೆ. ಈ ಕ್ಷೇತ್ರಗಳಲ್ಲಿ ಕಾಂಗ್ರೆಸ್‌– ಜೆಡಿಎಸ್ ಮೈತ್ರಿಕೂಟ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಇದೆ. ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಿದರೂ, ‘ಗೆದ್ದೇ ಗೆಲ್ಲುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುವ ಸ್ಥಿತಿಯಲ್ಲಿ ಯಾವ ಅಭ್ಯರ್ಥಿಗಳೂ ಇಲ್ಲ.

ಅನಂತ್‌ ಕುಮಾರ್‌ ಅವರು ಸತತ ಆರು ಬಾರಿ ಪ್ರತಿನಿಧಿಸಿದ್ದ ಬೆಂಗಳೂರು ದಕ್ಷಿಣ ಕೇತ್ರದಲ್ಲಿ ಅವರ ಪತ್ನಿ ತೇಜಸ್ವಿನಿ ಅವರಿಗೆ ಬಿಜೆಪಿ ಕೊನೆಯ ಕ್ಷಣದಲ್ಲಿ ಟಿಕೆಟ್‌ ನಿರಾಕರಿಸಿತ್ತು. ಯುವಕ ತೇಜಸ್ವಿಸೂರ್ಯ ಅವರಿಗೆ ಪಕ್ಷ ಮಣೆ ಹಾಕಿತ್ತು. ಈ ಬೆಳವಣಿಗೆ ರಾಜಕೀಯ ಚರ್ಚೆಗಳಿಗೆ ಭಿನ್ನ ಆಯಾಮ ನೀಡಿತ್ತು. ಪಕ್ಷದ ಕೆಲವು ಮುಖಂಡರ ಮುನಿಸಿಗೂ ಇದು ಕಾರಣವಾಗಿತ್ತು. ಇಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಹಿರಿಯ ಹುರಿಯಾಳು ಬಿ.ಕೆ.ಹರಿಪ್ರಸಾದ್‌ ಅವರು ಬಿಜೆಪಿಯ ಭದ್ರಕೋಟೆಯನ್ನು ಭೇದಿಸುತ್ತಾರೊ ಅಥವಾ ಈ ಚುನಾವಣೆಯು ತರುಣ ನಾಯಕನ ಉದಯಕ್ಕೆ ನಾಂದಿ ಹಾಡಲಿದೆಯೋ ಎಂಬ ಕೌತುಕ ಇಂದು ಕೊನೆಯಾಗಲಿದೆ.

ಕ್ಷೇತ್ರಗಳ ಮರುವಿಂಗಡಣೆ ಬಳಿಕ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ ಸತತ ಎರಡು ಬಾರಿ ಗೆದ್ದಿದ್ದಾರೆ. ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿರುವ ಅವರಿಗೆ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಎರಡನೇ ಬಾರಿ ಪೈಪೋಟಿ ನೀಡಿದ್ದಾರೆ. ‘ಜಸ್ಟ್‌ ಆಸ್ಕಿಂಗ್‌’ ಎಂದು ಸದ್ದು ಮಾಡುತ್ತಲೇ ಕಣಕ್ಕಿಳಿದ ಸಿನಿಮಾ ನಟ ಪ್ರಕಾಶ್‌ ರಾಜ್‌ ಅವರು ಈ ಕ್ಷೇತ್ರದ ಮತ ಲೆಕ್ಕಾಚಾರವನ್ನು ಎಷ್ಟರಮಟ್ಟಿಗೆ ಬದಲಾಯಿಸುತ್ತಾರೆ ಎಂಬುದರ ಆಧಾರದಲ್ಲಿ ಇಲ್ಲಿನ ಫಲಿತಾಂಶ ನಿಂತಿದೆ.

ಬೆಂಗಳೂರು ಉತ್ತರದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನಡುವೆ ನೇರ ಹಣಾಹಣಿ ಇತ್ತು. ಇಲ್ಲಿ ಮೋದಿ ಅಲೆ ಬಿಜೆಪಿ ಅಭ್ಯರ್ಥಿಯ ಕೈಹಿಡಿದಿದೆಯೋ ಅಥವಾ ಇಲ್ಲಿನ ಎಂಟು ವಿಧಾನಸಭಾಕ್ಷೇತ್ರಗಳಲ್ಲಿ ಏಳನ್ನು ಗೆದ್ದುಕೊಂಡಿರುವ ಮೈತ್ರಿಕೂಟದ ಪ್ರಾಬಲ್ಯ ಕೃಷ್ಣ ಬೈರೇಗೌಡರನ್ನು ಗೆಲುವಿನ ದಡ ಸೇರಿಸಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

ಕ್ಷೇತ್ರಗಳ ಮರುವಿಂಗಡಣೆ ಬಳಿಕ ನಗರದ ಮೂರೂ ಕ್ಷೇತ್ರಗಳಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ. ಕಾಂಗ್ರೆಸ್‌ಗೆ ಒಮ್ಮೆಯೂ ಗೆಲುವನ್ನು ಒಲಿಸಿಕೊಳ್ಳಲು ಸಾಧ್ಯವಾಗಿಲ್ಲ. ಫಲಿತಾಂಶದಲ್ಲಿ ಯಾರಿಗೆಷ್ಟು ಪಾಲು ಎಂಬುದು ಇಂದು ಬಯಲಾಗಲಿದೆ.

* ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್‌ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣ ಒಯ್ಯುವಂತಿಲ್ಲ

* ಅಭ್ಯರ್ಥಿ ಹಾಗೂ ಎಣಿಕೆ ಏಜೆಂಟ್‌ಗಳಿಗೆ ಪ್ರತ್ಯೇಕ ವ್ಯವಸ್ಥೆ

* ಎಣಿಕೆ ಪ್ರಕ್ರಿಯೆಯ ಸಂಪೂರ್ಣ ವಿಡಿಯೊ ಚಿತ್ರೀಕರಣ

* ಎಣಿಕೆ ಕೇಂದ್ರಗಳ ಸುತ್ತ ಮೂರು ಹಂತದ ಭದ್ರತೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT