ಸುಮಲತಾಗೆ ಮಂಗಳಾರತಿ ಮಾಡಿ ಕಳಿಸಿ: ಸಿದ್ದರಾಮಯ್ಯ

ಭಾನುವಾರ, ಏಪ್ರಿಲ್ 21, 2019
25 °C
ಗುರು–ಶಿಷ್ಯರ ಜಂಟಿ ಪ್ರಚಾರ, ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ

ಸುಮಲತಾಗೆ ಮಂಗಳಾರತಿ ಮಾಡಿ ಕಳಿಸಿ: ಸಿದ್ದರಾಮಯ್ಯ

Published:
Updated:
Prajavani

ಮಂಡ್ಯ: ‘ಕೋಮುವಾದಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಆ ಯಮ್ಮ ಮತ ಕೇಳಲು ಬಂದರೆ ಅವರಿಗೆ ಮಂಗಳಾರತಿ ಮಾಡಿ ಕಳುಹಿಸಿ’ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಶುಕ್ರವಾರ ವಾಗ್ದಾಳಿ ನಡೆಸಿದರು.

ನಾಗಮಂಗಲ ಪಟ್ಟಣದಲ್ಲಿ ದೇವೇಗೌಡರ ಜೊತೆ ಜಂಟಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ನಾನು, ಎಚ್‌.ಡಿ.ದೇವೇಗೌಡರು ಕಾವೇರಿ ನೀರಿಗಾಗಿ ಹೋರಾಟ ನಡೆಸಿದ್ದೇವೆ.  ಬೆಜೆಪಿ ಬೆಂಬಲಿತ ಅಭ್ಯರ್ಥಿಗೆ ಹಿಂದುಳಿದ ವರ್ಗಗಳ ಜನರು ಒಂದು ವೋಟನ್ನೂ ಹಾಕಬಾರದು. ಇಡೀ ರಾಜ್ಯದಲ್ಲಿ ಬಿಜೆಪಿ ಗೆಲ್ಲಬಾರದು, ಎಲ್ಲಾ 28 ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಗೆಲ್ಲಬೇಕು. ಅದಕ್ಕಾಗಿ ಒಟ್ಟಾಗಿ ಹೋರಾಟ ಮಾಡುತ್ತಿದ್ದೇವೆ. ಮೈಸೂರಿಗೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ, ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಲು ಹೇಳಿದ್ದಾರೆ. ಉದ್ದೇಶಪೂರ್ವಕವಾಗಿ ಅಭ್ಯರ್ಥಿ ಹಾಕದೇ ಬೆಂಬಲ ನೀಡಿದ್ದಾರೆ. ಕೋಮುವಾದಿ ಪಕ್ಷದ ಅಭ್ಯರ್ಥಿ ಮಂಡ್ಯದಲ್ಲಿ ಗೆಲ್ಲಬಾರದು’ ಎಂದರು.

‘ಸಿದ್ದರಾಮಯ್ಯ ಸುಮಲತಾ ಅವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಯಾರಾರೋ ಮಾತನಾಡುತ್ತಾರೆ. ಗುಸುಗುಸು, ಪಿಸುಪಿಸು ಎನ್ನುತ್ತಿದ್ದಾರೆ. ಆ ರೀತಿ ಯಾವ ಬೆಂಬಲವೂ ಇಲ್ಲ. ಗುಸುಗುಸು ಮಾತಿಗೆ ತಲೆಕೆಡಿಸಿಕೊಳ್ಳಬೇಡಿ. ಬಹಿರಂಗವಾಗಿ ನಿಖಿಲ್‌ಗೆ ಬೆಂಬಲ ಕೊಟ್ಟಿದ್ದೇನೆ’ ಎಂದರು.

ಮೋದಿ ವಿರುದ್ಧ ಆಕ್ರೋಶ

‘ಕಳೆದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ರೈತರ ಸಮಸ್ಯೆ ಬಗೆಹರಿಸುವ ಕೆಲಸ ಮಾಡಲಿಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ ಅವರ ಬಳಿ ತೆರಳಿ ಗೋಗರೆದರೂ ಆ ಮನುಷ್ಯನಿಗೆ ರೈತರ ಬಗ್ಗೆ ಸ್ವಲ್ಪವೂ ಕರುಣೆ ಬರಲಿಲ್ಲ. ಮೋದಿ ಸಂಘ ಪರಿವಾರದಿಂದ ಬಂದವರು, ಅವರಿಗೆ ರೈತರ ಮೇಲೆ ಕಾಳಜಿ ಇಲ್ಲ. ಬಿಜೆಪಿ ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಒಂದೇ ಒಂದು ಟಿಕೆಟ್‌ ಕೊಟ್ಟಿಲ್ಲ. ಕುರುವರಿಗೂ ಟಿಕೆಟ್‌ ಕೊಟ್ಟಿಲ್ಲ’ ಎಂದು ವಾಗ್ದಾಳಿ ನಡೆಸಿದರು.

ಹೊಗಳಿದ ದೇವೇಗೌಡ

ಸಿದ್ದರಾಮಯ್ಯ ಅವರನ್ನು ಹೊಗಳಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ‘ಸಿದ್ದರಾಮಯ್ಯ ಹಾಗೂ ನಾನು ಬಹಳ ವರ್ಷ ಒಟ್ಟಿಗೆ ಕೆಲಸ ಮಾಡಿದ್ದೇವೆ. ಕೆಲವೊಂದು ಕಾರಣಗಳಿಂದ ದೂರವಾಗಿ ಈಗ ಒಂದೇ ವೇದಿಕೆಗೆ ಬಂದಿದ್ದೇವೆ. ಸಿದ್ದರಾಮಯ್ಯ ಹಣಕಾಸು ಮಂತ್ರಿಯಾಗಿ ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಯಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯದಂತಹ ಜನಪರ ಯೋಜನೆ ಜಾರಿಗೆ ತಂದಿದ್ದಾರೆ’ ಎಂದರು.

‘ಮಂಡ್ಯದ ಕೆಚ್ಚೆದೆಯ ವೀರಭೂಮಿಯಲ್ಲಿ ನಾಟಕೀಯ ಬೆಳವಣಿಗೆ ನಡೆಯುತ್ತಿವೆ. ಕಾವೇರಿ ನೀರಿಗಾಗಿ ಅಪಾರ ಹೋರಾಟ ಮಾಡಿದ್ದೇನೆ, ಉಪವಾಸ ಕುಳಿತಿದ್ದೇನೆ. ನನ್ನ ಮುಂದಿನ ಹೋರಾಟಕ್ಕೆ ಸ್ಫೂರ್ತಿ ನೀಡಲು ನಿಖಿಲ್‌ ಗೆಲ್ಲಿಸಬೇಕು’ ಎಂದರು.

ಇಬ್ಬರೂ ನಾಯಕರು ಮಳವಳ್ಳಿಯಲ್ಲೂ ಪ್ರಚಾರ ನಡೆಸಿದರು. ಇದನ್ನು ಗುರು–ಶಿಷ್ಯರ ಹೋರಾಟ ಎಂದೇ ಬಣ್ಣಿಸಲಾಯಿತು.

ಸುಮಲತಾ ಮಾಯಂಗನೆ: ಎಲ್‌ಆರ್‌ಎಸ್‌

ಸಂಸದ ಎಲ್‌.ಆರ್‌.ಶಿವರಾಮೇಗೌಡ ಮತ್ತೊಮ್ಮೆ ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ. ‘ಜಯಲಲಿತಾ ಈಗ ಬದುಕಿಲ್ಲ, ಪಕ್ಷೇತರ ಅಭ್ಯರ್ಥಿ ಅವರನ್ನೂ ಮೀರಿಸುವಂತಹ ಮಾಯಾಂಗನೆಯಂತೆ ಮಾತನಾಡುತ್ತಿದ್ದಾರೆ. ಈ ಟೂರಿಂಗ್‌ ಟಾಕೀಸ್‌ ಆಟ ಹೆಚ್ಚು ದಿನ ನಡೆಯುವುದಿಲ್ಲ. ನಟರನ್ನು ನೋಡಿ ಯಾರೂ ಓಟು ಹಾಕುವುದಿಲ್ಲ’ ಎಂದು ಹೇಳಿದರು.

ಪ್ರಧಾನಿ ಹೇಳಿಕೆಗೆ ಎಚ್‌ಡಿಡಿ ತಿರುಗೇಟು

‘ಎಚ್‌.ಡಿ.ದೇವೇಗೌಡರು ರಾಜಕೀಯ ಸನ್ಯಾಸ ಸ್ವೀಕರಿಸುವ ಮಾತನಾಡಿದ್ದರು. ಆದರೂ ಚುನಾವಣೆಗೆ ಸ್ಪರ್ಧಿಸಿದ್ದಾರೆ’ ಎಂದು ಪ್ರಧಾನಿ ನರೇಂದ್ರ ಮೋದಿ ಗಂಗಾವತಿಯಲ್ಲಿ ನೀಡಿದ್ದ ಹೇಳಿಕೆಗೆ ದೇವೇಗೌಡರು ತಿರುಗೇಟು ನೀಡಿದರು.

‘ನಾನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದು ನಿಜ. ಆದರೆ ರಾಜ್ಯ ಸರ್ಕಾರದ 9 ತಿಂಗಳ ಸಾಧನೆ ಬಗ್ಗೆ ಮಾತನಾಡಲು ನನಗೆ ಸಂಸತ್‌ನಲ್ಲಿ 3 ನಿಮಿಷ ಅವಕಾಶ ಸಿಗಲಿಲ್ಲ. ಮಾಜಿ ಪ್ರಧಾನಿಗೂ ಅವಕಾಶ ಕೊಡಲಿಲ್ಲ. ಹೀಗಾಗಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲು ಮತ್ತೆ ಚುನಾವನೆಗೆ ಬಂದಿದ್ದೇನೆ’ ಎಂದು ಹೇಳಿದರು.

‘ಮೋದಿ ದುರಹಂಕಾರದಿಂದ ಮಾತನಾಡುತ್ತಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್‌ ಪಕ್ಷವನ್ನು ಮುಕ್ತ ಮಾಡುವುದಾಗಿ ಹೇಳುತ್ತಿದ್ದಾರೆ’ ಎಂದರು.

ಅತೃಪ್ತರ ಕಾಂಗ್ರೆಸ್‌ ಮುಖಂಡರ ಗೈರು

ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ರಮೇಶ್‌ ಬಂಡಿಸಿದ್ದೇಗೌಡ ಸೇರಿ ಕಾಂಗ್ರೆಸ್‌ನ ಹಲವು ಅತೃಪ್ತ ಮುಖಂಡರು ಮೈತ್ರಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಳ್ಳಲಿಲ್ಲ. ಶುಕ್ರವಾರ ಬೆಳಿಗ್ಗೆ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಲುವರಾಯಸ್ವಾಮಿ ಅವರ ಮನವೊಲಿಸುವ ಯತ್ನಕ್ಕೆ ಫಲ ಸಿಗಲಿಲ್ಲ.

ಕ್ಷಮೆ ಕೋರಿದ ಪುಟ್ಟರಾಜು

‘ಕೈಮುಗಿದು ಕೇಳಿಕೊಳ್ಳುತ್ತೇನೆ, ಕಾಂಗ್ರೆಸ್‌ ಮುಖಂಡರು ಮೈತ್ರಿ ಅಭ್ಯರ್ಥಿ ಪರ ಪ್ರಚಾರ  ಮಾಡಬೇಕು. ಬಾಯ್ತಪ್ಪಿ ಡೆಡ್‌ ಹಾರ್ಸ್‌ ಎಂದು ಹೇಳಿದ್ದೆ. ಮಾಧ್ಯಮಗಳು ಅದನ್ನು ತಪ್ಪಾಗಿ ಅರ್ಥೈಸಿದವು. ನನಗೆ ಯಾವುದೇ ರೀತಿಯ ದ್ವೇಷವಿಲ್ಲ. ಎಲ್ಲವನ್ನೂ ಮರೆತು ದಯಮಾಡಿ ಪ್ರಚಾರಕ್ಕೆ ಬರಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 24

  Happy
 • 1

  Amused
 • 2

  Sad
 • 2

  Frustrated
 • 26

  Angry

Comments:

0 comments

Write the first review for this !