ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿವೇಶನ ಮೂರು ದಿನಗಳಿಗೆ ಸೀಮಿತ: ಬಿಜೆಪಿ ನಿರ್ಣಯ

Last Updated 9 ಅಕ್ಟೋಬರ್ 2019, 19:53 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಎದುರಿಸಲು ಸಜ್ಜಾಗಿರುವ ಆಡಳಿತಾರೂಢ ಬಿಜೆಪಿಯು ಈ ಹಿಂದೆ ನಿಗದಿ ಮಾಡಿರುವಂತೆಕಲಾಪವನ್ನು ಮೂರು ದಿನಗಳಿಷ್ಟೇ ಸೀಮಿತಗೊಳಿಸಲು ಶಾಸಕಾಂಗ ಪಕ್ಷದ ಸಭೆ ತೀರ್ಮಾನಿಸಿದೆ.

ಗುರುವಾರ ಕಲಾಪದ ಆರಂಭದಲ್ಲಿ ಮೃತರಿಗೆ ಸಂತಾಪ ಸೂಚಿಸಿದ ಬಳಿಕ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧನವಿನಿಯೋಗ ಮಸೂದೆಯನ್ನು ಮಂಡಿಸಲಿದ್ದಾರೆ ಎಂದು ಶಾಸಕಾಂಗ ಪಕ್ಷದ ಸಭೆಯ ಬಳಿಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಎಚ್‌.ಡಿ.ಕುಮಾರಸ್ವಾಮಿ ಸರ್ಕಾರ ಮಂಡಿಸಿದ್ದ ಬಜೆಟ್‌ನಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ. ನೆರೆಗೆ ಸಂಬಂಧಿಸಿದಂತೆ ಪೂರಕ ಅಂದಾಜು ಸೇರಿಸಲಾಗಿದೆ. ಅದಕ್ಕೆ ಒಪ್ಪಿಗೆ ಪಡೆದುಕೊಳ್ಳಲಾಗುವುದು. ಬಜೆಟ್‌ನಲ್ಲಿರುವ ಅಂಶಗಳು, ನೆರೆ ಸಂಕಷ್ಟ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಸಿದ್ಧರಿದ್ದೇವೆ. ವಿರೋಧ ಪಕ್ಷಗಳ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುತ್ತೇವೆ’ ಎಂದು ಅವರು ವಿವರಿಸಿದರು.

ಮೂರು ದಿನಗಳೂ ಹಗಲು– ರಾತ್ರಿ ಕುಳಿತು ಚರ್ಚೆ ನಡೆಸಲು ಸಿದ್ಧರಿದ್ದೇವೆ. ಆದರೆ, 10 ದಿನಗಳ ಕಾಲ ಅಧಿವೇಶನ ನಡೆಸಲು ಈ ಸಂದರ್ಭದಲ್ಲಿ ಸಾಧ್ಯವಿಲ್ಲ. ಶಾಸಕರು ಮತ್ತು ಅಧಿಕಾರಿಗಳು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಅನಿವಾರ್ಯತೆ ಇದೆ. ಈ ಅಂಶವನ್ನು ವಿರೋಧ ಪಕ್ಷಗಳಿಗೂ ಮನವರಿಕೆ ಮಾಡಲಾಗುವುದು. ಅವರ ಸಲಹೆಯನ್ನೂ ಕೇಳಲಾಗುವುದು ಎಂದು ರವಿಕುಮಾರ್ ಹೇಳಿದರು.

ವರ್ಗಾವಣೆ ಕುರಿತು ಚರ್ಚೆ: ಮೈತ್ರಿಸರ್ಕಾರದ ಅವಧಿಯ ಕೊನೆಯ ದಿನಗಳಲ್ಲಿ ಕೆಳ ಹಂತದ ಅಧಿಕಾರಿಗಳ ಮಟ್ಟದಲ್ಲಿ ಬೇಕಾಬಿಟ್ಟಿ ವರ್ಗಾವಣೆ ನಡೆಸಲಾಗಿತ್ತು. ಅದರಿಂದ ಕ್ಷೇತ್ರಗಳಲ್ಲಿ ಸಾಕಷ್ಟು ತೊಂದರೆ ಆಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಆಗಿರುವ ವರ್ಗಾವಣೆ ಬದಲಿಸಬೇಕು ಎಂದು ಸಭೆಯಲ್ಲಿ ಕೆಲವು ಶಾಸಕರು ಮುಖ್ಯಮಂತ್ರಿಯವರನ್ನು ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.ಈ ಬಗ್ಗೆ ಗಮನಹರಿಸುವುದಾಗಿ ಯಡಿಯೂರಪ್ಪ ಭರವಸೆ ನೀಡಿದರು.

ಒಕ್ಕೊರಲಿನಿಂದ ಸಮರ್ಥನೆಗೆ ತಿರ್ಮಾನ: ನೆರೆ ಪರಿಹಾರ ಕಾರ್ಯದಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯವನ್ನು ಒಕ್ಕೊರಲಿನಿಂದ ಸಮರ್ಥಿಸಿಕೊಳ್ಳುವುದರ ಜತೆಗೆ ವಿರೋಧ ಪಕ್ಷಗಳ ದಾಳಿಯನ್ನು ಒಗ್ಗಟ್ಟಿನಿಂದ ಎದುರಿಸಲು ಸಚಿವರ ಸಭೆಯಲ್ಲಿ ತೀರ್ಮಾನಿಲಾಯಿತು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ತಿಳಿಸಿದರು.

‘ನೆರೆಪೀಡಿತ ಪ್ರದೇಶದಲ್ಲಿ ಸರ್ಕಾರ ಮಾಡಿರುವ ಖರ್ಚು–ವೆಚ್ಚಗಳ ಬಗ್ಗೆ ನಿಖರ ಮಾಹಿತಿಯೊಂದಿಗೆ ವಿರೋಧ ಪಕ್ಷಗಳನ್ನು ಎದುರಿಸಬೇಕು. ಕೇಂದ್ರ ಸರ್ಕಾರದ ನಡೆಯನ್ನೂ ಸಮರ್ಥಿಸಿಕೊಳ್ಳಬೇಕು. ಈ ಹಿಂದೆ ಮೈತ್ರಿ ಸರ್ಕಾರ ಪರಿಹಾರ ನೀಡಿದ್ದೆಷ್ಟು, ನಮ್ಮ ಸರ್ಕಾರ ನೀಡುತ್ತಿರುವುದೆಷ್ಟು ಎಂಬುದನ್ನು ಅಂಕಿ–ಅಂಶಗಳ ಸಮೇತ ವಿವರಿಸಲು ಸೂಚಿಸಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT